ಕಾರ್ಕಳ : ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಹಿಂದೂ ಮುಖಂಡ, ಉದ್ಯಮಿ ಮಹೇಶ್ ಶೆಟ್ಟಿ ಕುಡುಪುಲಾಜೆ ಅವರನ್ನು ಆಯ್ಕೆ ಮಾಡಲಾಯಿತು. ಎ. 9ರಂದು ಮಂಜುನಾಥ ಪೈ ಸ್ಮಾರಕ ಸಭಾಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಅವರು ಮಹೇಶ್ ಶೆಟ್ಟಿ ಅವರ ಹೆಸರು ಘೋಷಣೆ ಮಾಡಿದರು.
ಬಳಿಕ ಮಾತನಾಡಿದ ಮಹೇಶ್ ಶೆಟ್ಟಿ ಅವರು, 2018ರ ಚುನಾವಣೆಯಲ್ಲಿ 40 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಸುನಿಲ್ ಕುಮಾರ್ ಅವರನ್ನು ಗೆಲ್ಲಿಸಿದ್ದೇವೆ. ಈ ಬಾರಿ 50 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಜಯಭೇರಿ ಬಾರಿಸಬೇಕು. ಕಾರ್ಯಕರ್ತರ ಶಕ್ತಿಯಿಂದ ಇದು ಸಾಧ್ಯವಾಗಲಿದೆ. ಚುನಾವಣೆಯ ಸಂದರ್ಭ ನೀಡಿದಂತಹ ಭರವಸೆಗಳನ್ನು ಸುನಿಲ್ ಕುಮಾರ್ ಈಡೇರಿಸಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ನಿಂತರೂ ಸುನಿಲ್ ಗೆಲುವು
ಕೆಲಸ ಮಾಡುವವರ ಬಗ್ಗೆ ಅಪ್ರಪಚಾರ ಸಹಜ. ವಿರೋಧ ಪಕ್ಷದ ಅಭ್ಯರ್ಥಿ ಯಾರೆಂಬ ಚಿಂತೆ ನಮಗೆ ಬೇಡ. ಕಾರ್ಕಳದಲ್ಲಿ ಯಾರೇ ಬಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಸುನಿಲ್ ಕುಮಾರ್ ಅವರನ್ನು ಗೆಲ್ಲಿಸುವಂತಹ ಛಲ ನಮ್ಮಲ್ಲಿದೆ. ಸಿದ್ದರಾಮಯ್ಯ ಅವರೇ ಖುದ್ದಾಗಿ ಕಾರ್ಕಳ ಬಂದು ನಿಂತರೂ 50 ಸಾವಿರ ಮತಗಳ ಅಂತರದಿಂದ ಸುನಿಲ್ ಅವರನ್ನು ಗೆಲ್ಲಿಸುವ ವಿಶ್ವಾಸ ಕಾರ್ಯಕರ್ತರಲ್ಲಿದೆ. ಅಪಪ್ರಚಾರಗಳಿಗೆ ಕಿವಿಕೊಡುವ ಅವಶ್ಯಕತೆಯೇ ಇಲ್ಲ. ಏಕೆಂದರೆ ಹಿಂದುತ್ವಕ್ಕೆ ಬದ್ಧವಾಗಿಯೇ ಪಕ್ಷ ಕಾರ್ಯನಿರ್ವಹಿಸುತ್ತಿದೆ ಎಂದು ಮಹೇಶ್ ಶೆಟ್ಟಿ ಅಭಿಪ್ರಾಯಪಟ್ಟರು.

























