ಕಾರ್ಕಳ : ವೈಟ್ ಬೋರ್ಡ್ ಖಾಸಗಿ ವಾಹನ ಚಾಲಕ- ಮಾಲಕರ ವಿರುದ್ಧ ಜಯಕರ್ನಾಟಕ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕ ಮತ್ತು ಮಾಲಕರ ಸಂಘವು ಕಾರ್ಕಳ ನಗರ ಪೊಲೀಸ್ ಠಾಣೆಗೆ ಏ.7ರಂದು ದೂರು ನೀಡಿದೆ.
ಕಾರ್ಕಳ ತಾಲೂಕಿನಲ್ಲಿ ವೈಟ್ ಬೋರ್ಡ್ ಖಾಸಗಿ ವಾಹನಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿದೆ. ಕಾನೂನು ಬಾಹಿರವಾಗಿ ಹಾಗೂ ರಾಜಾರೋಷವಾಗಿ ಅದರ ಚಾಲಕರು ಬಾಡಿಗೆ ಮಾಡುತ್ತಿದ್ದು, ಸರಕಾರಕ್ಕೆ ತೆರಿಗೆ ವಂಚಿಸುತ್ತಿದ್ದಾರೆ. ಇದರಿಂದಾಗಿ ಸರಕಾರಕ್ಕೆ ತೆರಿಗೆ ಕಟ್ಟಿ ಬಾಡಿಗೆ ಮಾಡುತ್ತಿರುವ ಹಳದಿ ಬೋರ್ಡ್ ಟ್ಯಾಕ್ಸಿ ಚಾಲಕರಿಗೆ ಹಾಗೂ ಮಾಲಕರಿಗೆ ಅನ್ಯಾಯವಾಗುತ್ತಿದೆ. ಇದೇ ವೃತ್ತಿಯನ್ನು ನಂಬಿಕೊಂಡು ಬದುಕುತ್ತಿರುವ ಹಳದಿ ಬೋರ್ಡ್ ಟ್ಯಾಕ್ಸಿ ಚಾಲಕರು ಹಾಗೂ ಮಾಲಕರು ಜೀವನ ನಡೆಸುವುದು ತುಂಬಾ ಕಷ್ಟಕರವಾಗಿದೆ. ವೈಟ್ ಬೋರ್ಡ್ ಖಾಸಗಿ ವಾಹನಗಳ ಹಾವಳಿಯು ಹೀಗೆ ಮುಂದುವರಿದರೆ ಹಳದಿ ಬೋರ್ಡ್ ಟ್ಯಾಕ್ಸಿ ಚಾಲಕರಿಗೆ ಹಾಗೂ ಮಾಲಕರು ಸರಕಾರಕ್ಕೆ ಕಟ್ಟಬೇಕಾದ ತೆರಿಗೆಯನ್ನು ಕಟ್ಟುವುದು ಕಷ್ಟಕರವಾಗಲಿದೆ. ವೈಟ್ ಬೋರ್ಡ್ ಖಾಸಗಿ ವಾಹನದಲ್ಲಿ ಬಾಡಿಗೆ ಹೋಗಿ ಪ್ರಯಾಣಿಕರಿಗೆ ಅಪಘಾತ ಸಂಭವಿಸಿದಲ್ಲಿ ವಿಮೆಯೂ ಸಿಗುವುದಿಲ್ಲ. ಹೀಗಾಗಿ ವೈಟ್ ಬೋರ್ಡ್ ಖಾಸಗಿ ವಾಹನ ಚಾಲಕ- ಮಾಲಕರ ವಿರುದ್ಧ ಸೂಕ್ತ ಕ್ರಮ ವಹಿಸುವಂತೆ ಜಯಕರ್ನಾಟಕ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಸಂಘದವರು ಒತ್ತಾಯಿಸಿದ್ದಾರೆ.
ರೂಟ್ ಬಸ್ಸಿನಿಂದಲೂ ತೊಂದರೆ
ರೂಟ್ ಬಸ್ಸಿನವರು ಮದುವೆ ಮೊದಲಾದ ಸಮಾರಂಭದ ಬಾಡಿಗೆ ಮಾಡುತ್ತಿದ್ದಾರೆ. ಇದರಿಂದ ಮ್ಯಾಕ್ಸಿ ಕ್ಯಾಬ್ ಮತ್ತು ಮಿನಿ ಬಸ್ಸುಗಳ ಚಾಲಕ ಮಾಲಕರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಅವರಿಗೂ ಈ ಕುರಿತು ಸೂಚನೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
























