ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಕ್ಕೂ ಅನುಮತಿ ಕಡ್ಡಾಯ – ಡಿಸಿ ಕೂರ್ಮಾರಾವ್

ಕಾರ್ಕಳ : ಜಿಲ್ಲೆಯಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆಯು ಜಾರಿಯಲಿದ್ದು, ಈ ಅವಧಿಯಲ್ಲಿ ಪತ್ರಿಕೆಗಳು, ದೃಶ್ಯ ಮಾಧ್ಯಮಗಳು, ಕೇಬಲ್ ಟಿವಿ, ಪೇಸ್‌ಬುಕ್ ವಾಟ್ಸಾಪ್ ಸೇರಿದಂತೆ ಎಲ್ಲಾ ರೀತಿಯ ಸೋಷಿಯಲ್ ಮೀಡಿಯಾಗಳಲ್ಲಿ , ಯಾವುದೇ ರಾಜಕೀಯ ಪಕ್ಷ ಅಥವಾ ಚುನಾವಣಾ ಅಭ್ಯರ್ಥಿಯ ಪರವಾಗಿ ಜಾಹೀರಾತುಗಳನ್ನು ಪ್ರಕಟಿಸಲು ಜಿಲ್ಲಾ ಎಂಸಿಎಂಸಿ ಸಮಿತಿಯ ಅನುಮತಿ ಕಡ್ಡಾಯವಾಗಿದ್ದು, ಸಮಿತಿಯ ಅನುಮತಿ ಪಡೆಯದೇ ಜಾಹೀರಾತು ಪ್ರಕಟಿಸಿದಲ್ಲಿ ಸಂಬಂದಪಟ್ಟವರ ವಿರುದ್ದ ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಎಚ್ಚರಿಕೆ ನೀಡಿದ್ದಾರೆ. ಅವರು ಎ. 2ರಂದು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿನ ಎಂಸಿಎಂಸಿಗೆ ಭೇಟಿ ನೀಡಿ ಮಾತನಾಡುತ್ತಾ, ಜಾಹೀರಾತುಗಳ ಪ್ರಕಟಣೆ ಬಗ್ಗೆ ಅನುಮತಿ ಪಡೆಯುವ ಕುರಿತಂತೆ, ಜಿಲ್ಲಾ ಎಂಸಿಎಂಸಿ ಸಮಿತಿಗೆ ಜಾಹೀರಾತು ಪ್ರಕಟಣೆ ಕೋರಿ ಲಿಖಿತ ಅರ್ಜಿಯನ್ನು ಸಲ್ಲಿಸಿ, ಅಗತ್ಯ ಅನುಮತಿ ಪಡೆದ ನಂತರವೇ ಜಾಹೀರಾತು ಪ್ರಕಟಿಸಬೇಕು ಎಂದು ಹೇಳಿದರು.

ಕರಪತ್ರಗಳಲ್ಲಿ ಮುದ್ರಕರ ಹೆಸರು ಕಡ್ಡಾಯ
ಚುನಾವಣಾ ಪ್ರಚಾರಕ್ಕಾಗಿ ಮುದ್ರಣಗೊಂಡ ಕರಪತ್ರಗಳ ಮೇಲೆ ಅದನ್ನು ಮುದ್ರಣ ಮಾಡಿದ ಮುದ್ರಕರ ಹೆಸರು, ಹಾಗೂ ವಿಳಾಸ, ಪ್ರತಿಗಳ ಸಂಖ್ಯೆ ಸೇರಿದಂತೆ ಮತ್ತಿತರ ವಿಷಯಗಳನ್ನು ಕಡ್ಡಾಯವಾಗಿ ಮುದ್ರಿಸಬೇಕು. ಮುದ್ರಣ ಕುರಿತ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ 3 ದಿನಗಳ ಒಳಗಾಗಿ ಹಾಗೂ ಸಾಮಗ್ರಿಯ ಪ್ರತಿಯನ್ನು ಕಡ್ಡಾಯವಾಗಿ ಜಿಲ್ಲಾಧಿಕಾರಿ ಕಚೇರಿಗೆ ಒದಗಿಸಬೇಕು. ಇದರ ಉಲ್ಲಂಘನೆಯು ಪ್ರಜಾಪ್ರತಿನಿಧಿ ಕಾಯ್ದೆಯ ಉಲ್ಲಂಘನೆಯಾಗಲಿದೆ ಎಂದರು. ಜಿಲ್ಲಾ ಎಂಸಿಎಂಸಿ ಕಚೇರಿಯನ್ನು ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಮೊದಲನೇ ಮಹಡಿಯಲ್ಲಿ ತೆರೆಯಲಾಗಿದ್ದು, ಜಾಹೀರಾತು ಪ್ರಕಟಣೆ ಕುರಿತಂತೆ ಅನುಮತಿ ಪಡೆಯಲು ಈ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದರು.

ಈ ಸಂದರ್ಭ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ಜಿಲ್ಲಾ ಎಂಸಿಎಂಸಿ ಸಮಿತಿಯ ನೋಡೆಲ್ ಅಧಿಕಾರಿ ಮತ್ತು ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ., ಮೇಲ್ವಿಚಾರಕರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿದ್ದರು.

































































































error: Content is protected !!
Scroll to Top