ಮಗು ಸಾವನ್ನಪ್ಪಿದ್ದರೂ ಮಂಗಳೂರು ತೆರಳಲು ತಿಳಿಸಿದ್ಯಾಕೆ ?

ಕಾರ್ಕಳ : ವೈದ್ಯರ ಬೇಜವಾಬ್ದಾರಿತನ, ನಿರ್ಲಕ್ಷ್ಯದಿಂದಲೇ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಮಠದಕೆರೆ ಕೆಂಚಬೆಟ್ಟುವಿನ ಆಶಾ ಮತ್ತವರ ಮನೆಯವರು ಕಾರ್ಕಳ ಸರಕಾರಿ ಆಸ್ಪತ್ರೆ ಮುಂಭಾಗ ವೈದ್ಯಾಧಿಕಾರಿಯನ್ನು ತರಾಟೆಗೆತ್ತಿಕೊಂಡ ಘಟನೆ ಮಾ. 27ರಂದು ನಡೆದಿದೆ.
ಮಾ. 17 ರಂದು ರಾತ್ರಿ 8 ಗಂಟೆ ಸುಮಾರಿಗೆ ಆಶಾ ಅವರ ಮಗಳು ತುಂಬು ಗರ್ಭಿಣಿ ಸುಬಿತಾ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಆಗಮಿಸಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಹೆರಿಗೆ ತಜ್ಞರಿಲ್ಲದ ಕಾರಣ ಮಂಗಳೂರಿನ ಲೇಡಿಗೋಷನ್‌ಗೆ ತೆರಳುವಂತೆ ಅಲ್ಲಿನ ದಾದಿಯರು ತಿಳಿಸಿದ್ದರು. ಲೇಡಿಗೋಷನ್‌ನಲ್ಲಿ ಸುಬೀತಾ ಅವರು ಗಂಡುಮಗುವಿಗೆ ಜನ್ಮ ನೀಡಿದಾದರೂ ಮಗು ಮೃತಪಟ್ಟಿತ್ತು. ಗರ್ಭದಲ್ಲೇ ಮಗು ಸಾವನ್ನಪ್ಪಿದೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದರು. 2 ಗಂಟೆ ಮುಂಚಿತವಾಗಿ ಲೇಡಿಗೋಷನ್‌ ಆಸ್ಪತ್ರೆಗೆ ಗರ್ಭಿಣಿಯನ್ನು ಕರೆತರುತ್ತಿದ್ದಲ್ಲಿ ಮಗುವನ್ನು ಬದುಕಿಸಬಹುದಿತ್ತೆಂದು ಅಲ್ಲಿನ ವೈದ್ಯರು ತಿಳಿಸಿರುವುದಾಗಿ ಹೇಳಿರುವುದು ಕುಟುಂಬ ವರ್ಗವನ್ನು ಮತ್ತಷ್ಟು ದುಃಖಕ್ಕೀಡು ಮಾಡಿತ್ತು.

ಕಾರ್ಕಳ ಸರಕಾರಿ ಆಸ್ಪತ್ರೆಯ ಹೆರಿಗೆ ತಜ್ಞೆ ಡಾ. ನಾಗರತ್ನ ಮತ್ತವರ ಪುತ್ರಿ ಡಾ. ಸ್ಪಂದನಾ ಅವರು ಸರಿಯಾದ ಸೇವೆ ನೀಡದೇ ಮತ್ತು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಲು ತಡವಾಗಿ ತಿಳಿಸಿರುವ ಕಾರಣ ಮಗು ಸಾವನ್ನಪ್ಪುವಂತಾಗಿದೆ ಎಂದು ಆಶಾ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಮಾ. 23ರಂದು ಈ ಬಗ್ಗೆ ಸಾರ್ಜನಿಕ ಆಸ್ಪತ್ರೆಯ ಮುಂಭಾಗವೇ ತಮ್ಮ ಸಿಟ್ಟು, ಆಕ್ರೋಶ ಹೊರಹಾಕಿದ್ದರು.

ಮಗು ಸಾವನ್ನಪ್ಪಿದ್ದರೂ ಮಂಗಳೂರು ತೆರಳಲು ತಿಳಿಸಿದ್ಯಾಕೆ ?

ಆಶಾ ಮತ್ತವರ ಮನೆಯವರು ಮಾ. 27ರಂದು ಕಾರ್ಕಳ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮತ್ತೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮುತಾಲಿಕ್‌ ಮತ್ತವರ ತಂಡ ಆಸ್ಪತ್ರೆಗಾಗಮಿಸಿ ವೈದ್ಯಾಧಿಕಾರಿ ಡಾ. ಕೆ.ಎಸ್.‌ ರಾವ್‌ ಅವರಲ್ಲಿ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಮಾತನಾಡಿದರು. ಸುಬೀತಾ ಅವರು ಅಂದು ಆಸ್ಪತ್ರೆಗೆ ಆಗಮಿಸಿದ್ದ ವೇಳೆಯೇ ಮಗು ಸಾವನ್ನಪ್ಪಿದೆ ಎಂದು ಡಾ. ಕೆ.ಎಸ್.‌ ರಾವ್‌ ತಿಳಿಸಿದ್ದು, ಈ ವೇಳೆ ತೀವ್ರ ಆಕ್ರೊಶ ವ್ಯಕ್ತಪಡಿಸಿದ ಆಶಾ ಮಗು ಇಲ್ಲೇ ಸಾವನ್ನಪ್ಪಿದಲ್ಲಿ ಲೇಡಿಗೋಷನ್‌ ಆಸ್ಪತ್ರೆಗೆ ಹೋಗಲು ತಿಳಿಸಿದ್ದಾದರೂ ಯಾಕೆ ಎಂದು ಪ್ರಶ್ನಿಸಿದರು.

ಸೋಮವಾರ ಮಾತ್ರವೇ ಟೆಸ್ಟ್‌
ಕಾರ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ 24* 7 ಸರ್ವಿಸ್‌ ಲಭ್ಯವಿರಬೇಕು. ಆದರೆ, ಗರ್ಭಿಣಿ ಹೆಂಗಸರು ಸೋಮವಾರವೇ ತಪಾಸಣೆಗೆ ಬರಬೇಕೆಂದು ಇಲ್ಲಿ ನಿಯಮವಿದೆ. ಹಾಗಾಗಿ ಸೋಮವಾರ ದೊಡ್ಡ ಕ್ಯೂ ಇಲ್ಲಿರುತ್ತೆ. ಅವರಿಗೆ ಕೂರಲು ಸರಿಯಾದ ವ್ಯವಸ್ಥೆಯಿಲ್ಲದೇ ಗರ್ಭಿಣಿ ಹೆಂಗಸರು ಸಾಕಷ್ಟು ತ್ರಾಸಪಡುವಂತಾಗಿದೆ.

ಗಣೇಶ್‌ ಭಟ್‌ ವರ್ಗಾವಣೆ
ಹೆರಿಗೆ, ಸ್ತ್ರೀ ರೋಗ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಗಣೇಶ್‌ ಭಟ್‌ ಅವರು ಫೆ. 1ರಂದು ವರ್ಗಾವಣೆ ಹೊಂದಿದ್ದು, ಆ ಬಳಿಕ ಸಮಸ್ಯೆ ಪ್ರಾರಂಭವಾಗಿದೆ. ಸೇವಾ ಮನೋಭಾವ, ರೋಗಿಗಳ ಕುರಿತು ವಿಶೇಷ ಕಾಳಜಿ, ಸ್ಪಂದನೆ, ವೃತ್ತಿಪರತೆ ಹೊಂದಿದ್ದ ಡಾ. ಗಣೇಶ್‌ ಅವರು ಬಡವರ ಪಾಲಿಗೆ ನೆಚ್ಚಿನ ವೈದ್ಯರಾಗಿದ್ದರು. ಸಾರ್ವಜನಿಕರಿಂದ ಓರ್ವ ಉತ್ತಮ ವೈದ್ಯರೆಂದು ಪ್ರಶಂಸೆಗೀಡಾಗಿದ್ದ ಡಾ. ಗಣೇಶ್‌ ಅವರ ವರ್ಗಾವಣೆ ಹಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ಡಾ. ಗಣೇಶ್‌ ಅವರು ಸೇವೆಗೆ ಸೇರ್ಪಡೆಗೊಂಡ ಸಂದರ್ಭ ಕಾರ್ಕಳ ಆಸ್ಪತ್ರೆಯಲ್ಲಿ ತಿಂಗಳಿಗೆ 50ರಷ್ಟು ಹೆರಿಗೆಯಾಗುತ್ತಿತ್ತು. ಆ ಬಳಿಕ ತಿಂಗಳಿಗೆ ಸರಾಸರಿ 100ರಿಂದ 150ರಷ್ಟು ಹೆರಿಗೆಯಾಗುವಂತಾಯಿತು. ಇವರ ಸೇವೆಯನ್ನು ಪರಿಗಣಿಸಿ ಬೆಳ್ತಂಗಡಿ, ಮೂಡಬಿದ್ರೆ, ಕಾಪು ಭಾಗದಿಂದಲೂ ಕಾರ್ಕಳ ಆಸ್ಪತ್ರೆಗೆ ಬರುತ್ತಿದ್ದರು. ಸರಿಯಾಗಿ ಕರ್ತವ್ಯ ನಿರ್ವಹಿಸದ ವೈದ್ಯರುಗಳು ದಶಕಗಳಿಂದ ಇಲ್ಲೇ ಬೀಡುಬಿಟ್ಟಿದ್ದರೂ ಸಮಯ ಲೆಕ್ಕಿಸದೇ ಕಾರ್ಯನಿರ್ವಹಿಸುವ ಒಳ್ಳೆಯ ವೈದ್ಯರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಅಸಮಾಧಾನ ವ್ಯಾಪಕವಾಗಿ ಕೇಳಿಬಂದಿತ್ತು.

ಸಮಸ್ಯೆಗಳ ಆಗರ
ಕಾರ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಕಲ ಸೌಲಭ್ಯವಿದ್ದರೂ ಕೆಲವೊಂದು ವೈದ್ಯರು, ಸಿಬ್ಬಂದಿಗಳಿಂದಾಗಿ ಬಡ ಜನತೆಗೆ ಸರಿಯಾದ ರೀತಿಯಲ್ಲಿ ಸೇವೆ ದೊರೆಯುತ್ತಿಲ್ಲ ಎಂಬ ಅಪವಾದವಿದೆ. ರಾತ್ರಿ ಪಾಳಿಯಲ್ಲಿ ವೈದ್ಯರು ಇಲ್ಲದಿರುವುದು, ಆಸ್ಪತ್ರೆಗೆ ಬೇಕಾಗುವಷ್ಟು ಸಂಖ್ಯೆಯ ಸೆಕ್ಯೂರಿಟಿ ಗಾರ್ಡ್ಸ್‌ ಇಲ್ಲದಿರುವುದು ಒಂದೆಡೆಯಾದರೆ, ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಂದರ್ಭ ಬೇಕಾಗುವ ವೈದ್ಯಕೀಯ ದೃಢಪತ್ರ ಪಡೆಯಲು, ಡ್ರಂಕ್‌ ಆಂಡ್‌ ಡ್ರೈವ್‌ ಸಂದರ್ಭ ತಪಾಸಣೆ ಮಾಡಿಸಲು ಬಂದಾಗ ಇಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಅದಕ್ಕೆ ಬೇಕಾದ ವ್ಯವಸ್ಥೆ, ವೈದ್ಯರು ಇಲ್ಲಿಲ್ಲ. ಅಜ್ಜರಕಾಡು ಹೋಗುವಂತೆ ಸಲಹೆ ನೀಡುತ್ತಾರೆ ಎಂದು ಹೆಸರು ಹೇಳಲಿಚ್ಚಿಸದ ಪೊಲೀಸ್‌ ಓರ್ವರು ತಿಳಿಸಿರುತ್ತಾರೆ. ಆತ್ಮಹತ್ಯೆ ಪ್ರಕರಣ ಸಂದರ್ಭ ಪೋಸ್ಟ್‌ ಮಾರ್ಟಂ ಮಾಡಿಸಲು ಸಾಕಷ್ಟು ಕಷ್ಟವಾಗುತ್ತಿದೆ ಎಂದವರು ಹೇಳುತ್ತಾರೆ.









































































































error: Content is protected !!
Scroll to Top