ಎಂಟು ಮಾಗಣೆಯ ಒಡತಿಗೆ ಅಷ್ಟದಿಕ್ಕುಗಳಿಂದ ಹಸಿರು ಹೊರೆಕಾಣಿಕೆ

ಹರಿದು ಬಂದ ಭಕ್ತ ಸಾಗರ – ಭಕ್ತಿ ಭಾವದಿಂದ ಮಿಂದೆದ್ದ ಕಾರ್ಕಳ ನಗರ

ಕಾರ್ಕಳ : ಐತಿಹಾಸಿಕ ಪುರಾವೆಯೊಂದಿಗೆ ಕಾರ್ಕಳ ಜನತೆಯ ಭಕ್ತಿ ಭಾವದ ಸಂಕೇತವಾಗಿ ನಗರ ಹೃದಯ ಭಾಗದಲ್ಲಿ ನೆಲೆನಿಂತಿರುವ ಶ್ರೀ ಮಾರಿಯಮ್ಮ ದೇವಿಯ ಪುನರ್‌ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಾ. 7ರಂದು ಬಂಡೀಮಠದಿಂದ ಮಾರಿಗುಡಿ ದೇವಸ್ಥಾನದವರೆಗೆ ನಡೆದ ಹಸಿರು ಹೊರೆಕಾಣಿಕೆಯ ಭವ್ಯ ಮೆರವಣಿಗೆಯು ಎಂಟು ಮಾಗಣೆ ಜನತೆಯ ಭಕ್ತಿಯ ದ್ಯೋತಕವಾಗಿ ಸಾಗಿತು.

ಸಂಜೆ 4 ಗಂಟೆಗೆ ಆರಂಭಗೊಂಡ ಮೆರವಣಿಗೆಯು ಸುಮಾರು 6-30ರ ಹೊತ್ತಿಗೆ ದೇಗುಲ ತಲುಪಿದ್ದು, ಎಂಟು ಮಾಗಣೆಯನ್ನು ಒಳಗೊಂಡ ಗ್ರಾಮಗಳಿಂದ ಅಕ್ಕಿ, ತರಕಾರಿಗಳು, ತೆಂಗಿನಕಾಯಿ, ಸಿಯಾಳ, ಹಿಂಗಾರ, ಅಡಕೆ, ಬಾಳೆಗೊನೆ, ಬೆಲ್ಲ, ದೀಪದ ಎಣ್ಣೆ, ಅಡುಗೆ ಸಾಮಗ್ರಿಗಳನ್ನು ಒಳಗೊಂಡಂತೆ ಸುಮಾರು 300 ವಾಹನಗಳಲ್ಲಿ ಹೊರೆಕಾಣಿಕೆಯು ದೇವಸ್ಥಾನಕ್ಕೆ ಸಾಗಿ ಬಂದಿತು.

ಸಂಭ್ರಮ ಹೆಚ್ಚಿಸಿದ ವಿವಿಧ ವೇಷಭೂಷಣ
ಕೇಸರಿ ಪತಾಕೆಗಳು, ಚೆಂಡೆನಾದ, ಕೊಂಬು, ಕಹಳೆ, ವಾದ್ಯ, ಕಂಗೀಲು ನೃತ್ಯ, ಹುಲಿವೇಷ, ಭಜನಾ ತಂಡಗಳು, ಯಕ್ಷವೇಷ, ದೊಂದಿಯ ಬೆಳಕು, ಮರದ ಕಾಲಿನ ನಡಿಗೆ, ಕೀಲು ಕುದುರೆ, ಕಲಶ ಹಿಡಿದ ಮಹಿಳೆಯರು, ಗೊಂಬೆ, ಸಮವಸ್ತ್ರಧಾರಣೆಯೊಂದಿಗೆ ಆಗಮಿಸಿದ ವಿವಿಧ ತಂಡಗಳು, ವೈವಿಧ್ಯಮಯ ಕಲಾಪ್ರಕಾರಗಳು ಮೆರವಣಿಗೆ ಹೊಸ ಕಳೆ ನೀಡುವುದಲ್ಲದೆ ಜನತೆಯ ಸಂಭ್ರಮವನ್ನು ಹೆಚ್ಚಿಸಿತು.

ಮೆರವಣಿಗೆಯನ್ನು ನೋಡಲು ನಗರದ ವಿವಿಧ ಭಾಗಗಳಿಂದ ಮತ್ತು ತಾಲೂಕಿನ ವಿವಿಧ ಗ್ರಾಮಗಳಿಂದಲೂ ಭಕ್ತ ಸಮೂಹ ಆಗಮಿಸಿದ್ದು, ರಸ್ತೆ ಬದಿಗಳಲ್ಲಿ ನೆರೆದು ಮೆರವಣಿಗೆಯ ವೈಭೋಗವನ್ನು ಕಣ್ತುಂಬಿಕೊಂಡರು. ಸಣ್ಣ ಮಗುವಿನಿಂದ ಹಿಡಿದು ಹಿರಿ ವಯಸ್ಸಿನವರೆಲ್ಲರೂ ಮೆರವಣೆಗೆಯಲ್ಲಿ ಸಂಭ್ರಮ, ಉತ್ಸಾಹದಿಂದ ಪಾಲ್ಗೊಂಡರು.

ತಂಪು ಪಾನೀಯ ವಿತರಣೆ
ಮೆರವಣಿಗೆಯಲ್ಲಿ ಸಾಗಿ ಬಂದ ಭಕ್ತರಿಗೆ ನೀರು, ಮಜ್ಜಿಗೆ ಪೂರೈಕೆ ಮಾಡಲಾಗುತ್ತಿತ್ತು. ಹೊರೆಕಾಣಿಕೆ ಮತ್ತು ಸಾಗಾಟ ಸಮಿತಿ ಹಾಗೂ ಸ್ವಯಂಸೇವಕರು ಈ ಕಾರ್ಯದಲ್ಲಿ ನಿರತರಾಗಿದ್ದರು.

ಸ್ವಚ್ಛತೆಗೆ ಆದ್ಯತೆ
ಕಾರ್ಕಳ ರಸ್ತೆ ತುಂಬೆಲ್ಲ ಜನಸಾಗರವೇ ಹರಿದುಬಂದಿತ್ತು. ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರೂ ಸ್ವಚ್ಛತೆಗೆ ಎಳ್ಳಷ್ಟೂ ಧಕ್ಕೆಯಾಗಿಲ್ಲ. ಮೆರವಣಿಗೆಯ ಕೊನೆಯಲ್ಲಿದ್ದ ಪುರಸಭೆಯ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದರು.

ಉಗ್ರಾಣ ಮುಹೂರ್ತ
ಸಚಿವ ವಿ. ಸುನೀಲ್‌ ಕುಮಾರ್‌ ಅವರಿಂದ ಬೆಳಗ್ಗೆ ದೇವಸ್ಥಾನದಲ್ಲಿ ಉಗ್ರಾಣ ಮುಹೂರ್ತ ನಡೆದಿದ್ದು, ಸಂಜೆ ಮೆರವಣಿಗೆಯಲ್ಲಿ ಬಂದಂತಹ ಹೊರಕಾಣಿಕೆಯನ್ನು ಈ ಉಗ್ರಾಣದಲ್ಲಿ ದಾಸ್ತಾನು ಮಾಡಲಾಯಿತು.









































































































error: Content is protected !!
Scroll to Top