ಹೆಣ್ಣಿನ ಖಾಸಗಿ ಅಂಗಗಳನ್ನು ತೋರಿಸಿ ಯಾಮಾರಿಸಿದ್ದ ಚಾಲಾಕಿ
ಮೂಡುಬಿದಿರೆ : ಮಹಿಳೆಯ ಧ್ವನಿಯಲ್ಲಿ ಫೋನ್ ಮಾಡಿ ವ್ಯಕ್ತಿಯೊಬ್ಬರಿಂದ ಹಣ ಸುಲಿಗೆ ಮಾಡಿದ ಚಾಲಾಕಿ ಪಾತಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೈಕಂಪಾಡಿಯ ಖಾಸಗಿ ಕಂಪನಿಯೊಂದರ ಉದ್ಯೋಗಿ ಹೊಸಬೆಟ್ಟುವಿನಲ್ಲಿ ವಾಸವಾಗಿರುವ ನವೀನ್‌ಚಂದ್ರ ಎಂಬವರಿಗೆ ಇತ್ತೀಚೆಗೆ ಉಷಾ ಎಂಬ ಹೆಸರಿನ ಅಪರಿಚಿತ ಮಹಿಳೆಯಿಂದ ಕರೆ ಬಂದಿತ್ತು. ನವೀನ್‌ಚಂದ್ರ ಅವರನ್ನು ಪರಿಚಯಿಸಿಕೊಂಡು ಸಲುಗೆ ಬೆಳೆಸಿ ಈ ಉಷಾ ವೀಡಿಯೊ ಕಾಲ್ ಮಾಡಿ ಮಾತನಾಡುತ್ತಿದ್ದ. ಈ ಸಂದರ್ಭದಲ್ಲಿ ಹುಡುಗಿಯ ಖಾಸಗಿ ಅಂಗಗಳನ್ನೆಲ್ಲ ತೋರಿಸುತ್ತಿದ್ದ. ಕೊನೆಗೆ ಇದೇ ವೀಡಿಯೊ ಕಾಲ್‌ಗಳನ್ನು ಇಟ್ಟುಕೊಂಡು ಹಣ ಕೇಳಿ ಬ್ಲಾಕ್‌ಮೇಲ್ ಮಾಡತೊಡಗಿದ. ಆರಂಭದಲ್ಲಿ ನವೀನ್‌ಚಂದ್ರ ಉಷಾಗೆ 2 ಸಾವಿರ ರೂ. ಗೂಗಲ್ ಪೇ ಮಾಡಿದ್ದರು. ಆದರೆ ಉಷಾ ಬೇಡಿಕೆ ದಿಢೀರ್ 25 ಸಾವಿರಕ್ಕೇರಿದಾಗ ಕಂಗಾಲಾದ ನವೀನ್‌ಚಂದ್ರ ಸುರತ್ಕಲ್ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಫೋನ್ ಕರೆಯ ಬೆನ್ನತ್ತಿದ್ದಾಗ ಉಷಾ ಎನ್ನುವುದು ಓರ್ವ ಗಂಡಸು ಎಂಬುದು ಪತ್ತೆಯಾಯಿತು. ಮೂಡುಬಿದಿರೆ ಸಮೀಪದ ಬಿರಾವಿನ ಧನಂಜಯ ಎಂಬ ಯುವಕ ಹೆಣ್ಣಿನ ಧ್ವನಿಯಲ್ಲಿ ಕರೆ ಮಾಡಿ ನವೀನ್‌ಚಂದ್ರ ಅವರಿಗೆ ಮಂಕುಬೂದಿ ಎರಚಿದ್ದ. ಇದೀಗ ಧನಂಜಯ ಕಂಬಿ ಎಣಿಸುತ್ತಿದ್ದಾನೆ.






























































