ಅಧಿಕಾರ ವಿಕೇಂದ್ರೀಕರಣ ತತ್ವಕ್ಕೆ ಅನ್ಯಾಯ ಎಂದ ಮಾಜಿ ಮುಖ್ಯಮಂತ್ರಿ
ಮಂಗಳೂರು : ಗುಜರಾತಿನ ಅಮುಲ್ ಜತೆಗೆ ಕರ್ನಾಟಕದ ನಂದಿನಿ ಹಾಲು ಒಕ್ಕೂಟವನ್ನು ವಿಲೀನಗೊಳಿಸುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಸ್ತಾಪವನ್ನು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸಿನ ಹಿರಿಯ ನಾಯಕ ವೀರಪ್ಪ ಮೊಯ್ಲಿ ವೀರೋಧಿಸಿದ್ದಾರೆ. ಸಹಕಾರಿ ಒಕ್ಕೂಟವನ್ನು ಶಿಥಿಲ ಮಾಡಲು ಅಮಿತ್ ಶಾ ಮುಂದಾಗಿದ್ದಾರೆ. ಅಧಿಕಾರ ವಿಕೇಂದ್ರೀಕರಣದ ಉದಾಹರಣೆ ಸಹಕಾರಿ ಚಳವಳಿ. ಅವರಿಗೆ ಈ ವ್ಯವಸ್ಥೆ ಬಗ್ಗೆ ನಂಬಿಕೆ ಇಲ್ಲ. ಫೆಡರಲ್ ಸಿಸ್ಟಮ್ ಬಗ್ಗೆ ಗೃಹ ಸಚಿವರಿಗೆ ಅರಿವು ಇಲ್ಲ ಎಂದು ಕಿಡಿಕಾರಿದ್ದಾರೆ.
ಬಿಜೆಪಿಯವರು ಗಲಭೆಯ ಕೂಪಕ್ಕೆ ದೇಶವನ್ನು ದಬ್ಬಲು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ರಾಷ್ಟ್ರದ ಹಿತ, ಅಭಿವೃದ್ಧಿ ಬೇಕಾಗಿಲ್ಲ. ಸಂವಿಧಾನದ ಆಶಯಗಳನ್ನು ಮುರಿಯುವ ವಾದಕ್ಕೆ ಕಾಂಗ್ರೆಸ್ಸನ್ನು ಎಳೆಯುವ ಪ್ರಯತ್ನ ಮಾಡುತ್ತಿದೆ. ಅದಕ್ಕೆ ಕಾಂಗ್ರೆಸ್ ಬಲಿಯಾಗಬಾರದು. ಈ ಮೂಲಕ ರಾಷ್ಟ್ರೀಯ, ಪ್ರಾದೇಶಿಕ, ಅಭಿವೃದ್ಧಿ, ರಾಜಕೀಯ ಸುಸ್ಥಿರ, ಸಾಮಾಜಿಕ ಸುಸ್ಥಿರ, ಆರ್ಥಿಕ ಸುಸ್ಥಿರ ಸಂವಾದದಿಂದ ಕಾಂಗ್ರೆಸ್ ವಿಚಲಿತವಾಗಬಾರದು. ಇದನ್ನು ಕಾಂಗ್ರೆಸ್ ನಾಯಕರು ಕಾಯ್ದುಕೊಂಡು ಬರಬೇಕು ಎಂದರು.
ಕದಡಿದ ನೀರಿನಲ್ಲಿ ಮೀನು ಹಿಡಿಯುವ ಕೆಲಸವನ್ನು ಮಾಡುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿಯ ಮತೀಯ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದನ್ನು ಕಾಂಗ್ರೆಸ್ ನಿಲ್ಲಿಸಿ, ಜನರನ್ನು ತಲುಪುವ ಕಾರ್ಯ ಮಾಡಿದರೆ ಜಯ ಲಭಿಸುತ್ತದೆ ಎಂದರು. ಜಿಡಿಪಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇಡೀ ದೇಶದಲ್ಲಿ ಆಗಿರುವ ಅಭಿವೃದ್ಧಿ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ನಡೆದಿರುವುದು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.






































































