ಕಾರ್ಕಳ: ಸ್ನೇಹಿತೆಯ ಜತೆ ಮಾತನಾಡಿದ್ದಕ್ಕೆ ವ್ಯಕ್ತಿಯೊಬ್ಬ ಇಬ್ಬರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ ಘಟನೆ ಡಿ.26 ರಂದು ನೂರಾಲ್ಬೆಟ್ಟು ಸಮೀಪ ಸಂಭವಿಸಿದೆ. ನೂರಾಲ್ಬೆಟ್ಟು ಶಾಂತಿಪಲ್ಕೆಯ ನಿವಾಸಿ ಸುಂದರ ಗೌಡ ಎಂಬವರು ಮನೆ ನಿರ್ಮಿಸುತ್ತಿದ್ದು, ಈ ಮನೆ ಪಕ್ಕದ ಸುಜಾತಾ ಎಂಬವರೊಂದಿಗೆ ಔಪಚಾರಿಕವಾಗಿ ಮಾತನಾಡುತ್ತಿದ್ದರು, ಇದರಿಂದ ಸಿಟ್ಟಿಗೆದ್ದ ಸುಬ್ಬಯ್ಯ ಗೌಡ ಎಂಬಾತ ಸುಂದರ ಗೌಡ ತನ್ನ ಸಹೋದರ ಕೃಷ್ಣ ಗೌಡ ಅವರೊಂದಿಗೆ ಬೈಕಿನಲ್ಲಿ ಹೋಗುವಾಗ ನೂರಾಲ್ಬೆಟ್ಟು ಶೇಡಿಮನೆ ಎಂಬಲ್ಲಿ ತಡೆದು ನಿಲ್ಲಿಸಿ ಸುಜಾತಾಳ ಜತೆ ಮಾತನಾಡಬಾರದು, ಮಾತನಾಡಿದರೆ ಕೊಂದು ಹಾಕುತ್ತೇನೆ ಎಂದು ಬೆದರಿಕೆಯೊಡ್ಡಿ ಕಲ್ಲನ್ನು ಬಟ್ಟೆಯಲ್ಲಿ ಸುತ್ತಿ ಹಲ್ಲೆ ಮಾಡಿದ್ದಾನೆ. ಸುಂದರ ಗೌಡರ ತಲೆಗೆ ಮತ್ತು ಕೃಷ್ಣ ಅವರ ಕೈಗೆ ಗಾಯವಾಗಿದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರು ಡಿಕ್ಕಿ : ಪಾದಚಾರಿಗೆ ಗಾಯ
ಕಾರ್ಕಳ: ಕಾರು ಡಿಕ್ಕಿ ಹೊಡೆದು ಪಾದಚಾರಿ ಗಾಯಗೊಂಡ ಘಟನೆ ಡಿ.25ರಂದು ಸಂಜೆ ನಿಟ್ಟೆ ಸಮೀಪ ಸಂಭವಿಸಿದೆ. ನಂದಳಿಕೆ ಗ್ರಾಮದ ಮಾವಿನಕಟ್ಟೆಯ ಮಣಿಕಂಠ ನಿವಾಸದ ಮಣಿಕಂಠ ಗಾಯಗೊಂಡವರು. ಅವಿನಾಶ್ ಮೂಲ್ಯ ಎಂಬವರು ಕಾರ್ಕಳ ಕಡೆಯಿಂದ ಅತಿ ವೇಗ ಮತ್ತು ನಿರ್ಲಕ್ಷ್ಯದಿಂದ ಕಾರು ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಣಿಕಂಠ ಅವರಿಗೆ ಡಿಕ್ಕಿ ಹೊಡೆದಿದ್ದಾರೆ. ಮಣಿಕಂಠ ಅವರ ಬಲಗೈ ಮತ್ತು ಎರಡೂ ಕಾಲುಗಳಿಗೆ ಗಾಯವಾಗಿದೆ. ಕಾರಿನಲ್ಲಿದ್ದ ಬಾಬು ಮೂಲ್ಯ ಎಂಬವರು ಕೂಡ ಗಾಯಗೊಂಡಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.































































