ಕಾರ್ಕಳ : ಭಾರತದಲ್ಲಿ ವಾಜಪೇಯಿಯವರ ಸುಶಾಸನದ ಆಡಳಿತ ಎಂದಿಗೂ ಸ್ಮರಣೀಯ. ಅವರ ಆದರ್ಶ ಆಡಳಿತವನ್ನು ಅನುಸರಿಸಿ ಕಾರ್ಕಳದಲ್ಲಿ ವಿವಿಧ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ವಾಜಪೇಯಿಯವರ ಹೆಸರಿನ ಉದ್ಯಾನವನ ಮನೋಲ್ಲಾಸ ನೀಡುವುದರ ಜೊತೆಗೆ ಜನರಲ್ಲಿ ಅಜಾತಶತ್ರುವಿನ ಆಡಳಿತ ಜೀವಂತವಾಗಿರಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಡಿ. 24 ರಂದು ತಾಲೂಕು ಕಚೇರಿಯ ಸಮೀಪ ಪ್ರದೇಶಾಭಿವೃದ್ಧಿ ನಿಧಿ, ಎಂ.ಆರ್.ಪಿ.ಎಲ್.ನ ಸಿಎಸ್‌ಆರ್ ಪಂಡ್ ಹಾಗೂ ಇನ್ನಿತರೆ ಅನುದಾನಗಳ ಮೂಲಕ ನಿರ್ಮಾಣವಾದ ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಊರು ಬೆಳೆದಂತೆ ಅಭಿವೃದ್ಧಿ ಚಟುವಟಿಕೆಗಳು ಹೊಸ ದಿಕ್ಕಿನಡೆಗೆ ಸಾಗಬೇಕು. ಒಂದು ಪ್ರದೇಶದ ಅಭಿವೃದ್ಧಿ ಎಂದರೆ ರಸ್ತೆ, ಸೇತುವೆ ನಿರ್ಮಾಣ, ನೀರಿನ ಸೌಲಭ್ಯ ಇವುಗಳಿಗೆ ಮಾತ್ರ ಸೀಮಿತವಾಗದೆ ಅಲ್ಲಿನ ಸರ್ವತೋಮುಖ ಬೆಳೆವಣಿಗೆಯಾಗಿದೆ. ಈ ನಿಟ್ಟಿನಲ್ಲಿ ಸ್ವರ್ಣ ಕಾರ್ಕಳದ ಪರಿಕಲ್ಪನೆಯಲ್ಲಿ ಅಭಿವೃದ್ಧಿಪರ ಕಾರ್ಯಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದೆ. ಕಾರ್ಕಳದ ಭವಿಷ್ಯದ ದೂರದೃಷ್ಠಿಯೊಂದಿಗೆ ಇಲ್ಲಿನ ವಿವಿಧ ಕ್ಷೇತ್ರಗಳ ಅಭಿವೃದ್ಧಿಗಾಗಿ ವಿನೂತನ ಯೋಜನೆಗಳನ್ನು ಕೈಗೊಳ್ಳುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಎಂಆರ್‌ಪಿಎಲ್‌ನ ಎಂಡಿ ವೆಂಕಟೇಶ್, ತಾ. ಪಂ. ಆಡಳಿತಾಧಿಕಾರಿ ಪ್ರತಿಭಾ, ಕುಕ್ಕುಂದೂರು ಗ್ರಾ. ಪಂ. ಅಧ್ಯಕ್ಷೆ ಶಶಿಮಣಿ, ಹಿರಿಯ ನ್ಯಾಯವಾದಿ ಎಂ. ಕೆ. ವಿಜಯ್ ಕುಮಾರ್, ಪ್ರಭಾಕರ್ ಕಾಮತ್ ಬೋಳ, ಶ್ರೀಧರ ಪೈ ಮೊದಲಾದವರು ಉಪಸ್ಥಿತರಿದ್ದರು. ಜ್ಯೋತಿ ರಮೇಶ್ ಪ್ರಾರ್ಥಿಸಿದರು. ತಾ. ಪಂ. ಕಾರ್ಯ ನಿರ್ವಹಣಾಧಿಕಾರಿ ಗುರುದತ್ತ್ ಸ್ವಾಗತಿಸಿದರು. ಹರೀಶ್ ಕಾರ್ಯಕ್ರಮ ನಿರೂಪಿಸಿದರು. ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ವಂದಿಸಿದರು.


























