• ಪೋಷಕರೆ ! ನಮ್ಮ ಮಕ್ಕಳು ಹೇಗೆ ಬೆಳೆಯುತ್ತಿದ್ದಾರೆ ?
• ಜೀವನದ ಯಾವ ವಿಷಯದಲ್ಲಿ ಬೇಯುತ್ತಿದ್ದಾರೆ ?
ಮಕ್ಕಳು ನಮ್ಮ ಮನೆಯ ಒಕ್ಕಲು ಎನ್ನುವ ಕಾಲದಲ್ಲಿ ಅಯ್ಯೋ ನನ್ನ ಮಗನಿಗೆ ಹೇಳಿದಷ್ಟು ಭಾಷೇನೆ ಅರ್ಥಾಗಲ್ಲ. ಮಗಳು ಬಹಳ ಹಠ ಹಿಡಿತ್ತಾಳೆ. ಕೋಳಿ, ನಾಯಿ, ಹಸುವನ್ನಾದರೂ ಸಾಕಬಹುದು ! ಅಬ್ಬಾ ! ಈ ಮಕ್ಕಳನಲ್ಲಪ್ಪ ಅಂತ ಸಿಟ್ಟಿನ ಭರದಲ್ಲಿ ಹೆತ್ತ ಕರುಳು ಮಾತಿನ ಭರೆ ಎಳೆದು ಬಿಡುತ್ತದೆ. ಇಂತಹ ಮಾತು ಕೇಳಿದವನಿಗೆ ಅಪ್ಪ-ಅಮ್ಮನಿಗೆ ಸಿಟ್ಟು ಬಂದಿದೆ ಅನ್ನ ಬೇಕೋ? ಅಥವಾ ಅದ್ಯಾವುದೋ ಆತಂಕದ ಧಾವಂತದಲ್ಲಿ ಈ ಮಾತನ್ನು ಅಂದು ಬಿಟ್ಟರೋ ಅನ್ನ ಬೇಕೋ ! ಯೋಚಿಸ ಬೇಕಾದ ವಿಷಯ.
ಮೀನಿನ ಹೆಜ್ಜೆಯನ್ನಾದರೂ ಹುಡುಕಬಹುದು. ಆದರೆ ಬೆಳೆಯುತ್ತಿರುವ ಹಸಿಮನಸಿನ ಹದಿಹರೆಯದ ಮಕ್ಕಳ ಹೆಜ್ಜೆಯ ಗುರುತು ಹಿಡಿಯುವುದು ಇಂದಿನ ಪೋಷಕರಿಗೆ ಯಕ್ಷ ಪ್ರಶ್ನೆಯಾಗಿದೆ.
ನಮಗೆ ಎಷ್ಟು ಮಕ್ಕಳಿದ್ದಾರೆ ಎಂಬುದು ಮುಖ್ಯವಲ್ಲ, ಆ ಮಕ್ಕಳು ಹೇಗಿದ್ದಾರೆ? ಏನಾಗುತ್ತಿದ್ದಾರೆ? ಎಂಬುದು ಬಹಳ ಮುಖ್ಯ. ಹಗಲು ಇರುಳು ಜಗತ್ತು ನೋಡುತ್ತಿರುವ ಕಂದನ ಕಂಗಳು ಏನನ್ನು ನೋಡುತ್ತಿದೆ. ಏನನ್ನು ಸ್ವೀಕರಿಸುತ್ತಿದೆ ಅನ್ನೋದನ್ನು ಆಲೋಚಿಸಬೇಕಾಗಿದೆ.
ಮಗುವಿನ ಬೇಕು ಬೇಡಗಳಿಗೆ ಹಣ ಖರ್ಚು ಮಾಡಬಹುದು. ಆಗ ಮಗು ಯಾಂತ್ರಿಕವಾಗಿ ತೃಪ್ತಿ ಹೊಂದುತ್ತದೆ ಭಾವಾನಾತ್ಮಕವಾಗಿ ಅಲ್ಲ. ಮಗುವಿನ ಸ್ವಭಾವ, ನಡವಳಿಕೆ, ವರ್ತನೆಯ ಬೆಳವಣಿಗೆಗೆ ನಾವು ಹಣ ಖರ್ಚು ಮಾಡಲಿಕ್ಕಾಗದು. ಅಲ್ಲಿ ಮಗುವಿಗೆ ನಾವೆಷ್ಟೂ ಸಮಯವನ್ನು ಮೀಸಲಿಟ್ಟಿದ್ದೇವೆ ಮುಖ್ಯ.
ನಾನು ನನ್ನ ಮಗ-ಮಗಳಿಗೆ ಇಷ್ಟು ಖರ್ಚು ಮಾಡಿದ್ದೇನೆ ಎಂದು ಪಟ್ಟಿ ಮಾಡಬಹುದು. ಆ ಖರ್ಚು ಮಾಡಿದ ಹಣದ ಮೌಲ್ಯವನ್ನು ಮಗುವಿಗೆ ಅರ್ಥೈಸಿದ್ದೇವಾ? ನನ್ನಿಂದಾ ಎಲ್ಲಾ ಸಾದ್ಯವಿದೆ ಎಂದು ಬೀಗುವ ಅಪ್ಪ ಅಮ್ಮನಿಗೆ ಮಗುವಿನ ಮನಸ್ಸು ಯಾಕೆ ಅರ್ಥವಾಗುತ್ತಿಲ್ಲ. ನಮ್ಮ ಮಗುವಿಗೋಸ್ಕರ ನಾವೆಷ್ಟು ತ್ಯಾಗಮಾಡಿದ್ದೇವೆ ಎಂದು ಭಾವಾನಾತ್ಮಕವಾಗಿ ಮಗುವನ್ನು ಸೆಳೆಯಬಹುದು. ಆದರೂ ಮಗುವಿಗೆ ಅಪ್ಪ-ಅಮ್ಮನ ಬೆಲೆ ಯಾಕೆ ಗೊತ್ತಾಗುತ್ತಿಲ್ಲ. ಇದಕೆಲ್ಲ ಪೋಷಕರ ನಡೆ-ನುಡಿಲ್ಲಿಯೇ ಉತ್ತರ. ಪಾಠ ಹೇಳಿಕೊಡುವ ಶಿಕ್ಷಕರನ್ನು, ವಿದ್ಯಾಲಯವನ್ನು ಮಕ್ಕಳೆದುರು ಹೇಗೆ ತೋರಿಸಿದ್ದೇವೆ. ನಮ್ಮ ಮನೆಯ ಕೆಲಸ ಮಾಡುವ ಆಳು-ಕಾಳುಗಳನ್ನು ಮಕ್ಕಳೆದುರು ಹೇಗೆ ಗುರುತಿಸುತ್ತೇವೆ. ಆದೇಶಿಸುವುದನ್ನು ಮಗು ಕೇಳಿದರೆ ಅದು ಉಪದೇಶಿಸುವುದನ್ನು ಕಲಿಯುವುದಿಲ್ಲ ಆದೇಶಿಸುವುದನ್ನೆ ಕಲಿಯುತ್ತದೆ. ವ್ಯಕ್ತಿ ಸಣ್ಣವನಾಗಲಿ, ದೊಡ್ಡವನಾಗಲಿ, ಅವನೆದುರು ಗೌರವದಲ್ಲಿ ಮಾತಾಡಿಸದ ಮಗು ಲಘುವೇ ಹೊರತು ಗುರುವಾಗದು.
ಮನೆಯಲ್ಲಿ ನಂಬಿಕೆ, ವಿಶ್ವಾಸವೆಂಬುದನ್ನು ನಾವು ಹೇಗೆ ಬಿತ್ತುತ್ತಿದ್ದೇವೆ ಎಂಬುದಕ್ಕೆ ಇದೆಲ್ಲ ಸಾಕ್ಷಿ. ಇದೊಂದು ಸಣ್ಣ ವಿಚಾರವಾದರೂ ಬೆಳೆಯುತ್ತಿರುವ ಮಗುವಿಗೆ ದೊಡ್ಡ ಸಮಾಚಾರವೇ ಆಗಿದೆ.
ಮನೆಯ ಒಳಗಡೆ ಮಗುವಿನ ಎದುರು ನಾವೆಷ್ಟು ಲೋಕಾಭಿರಾಮ ಮಾತನಾಡುತ್ತೇವೆ. ದೊಡ್ಡವರ ವಿಷಯ ಸಣ್ಣವರಾದ ನಿಮಗ್ಯಾಕೆ ಅಂತಲೇ ಮೂದಲಿಸುತ್ತೇವೆ. ನಾವು ಇನ್ನೊಬ್ಬರ ಗೆಲುವನ್ನು ವೈಭವೀಕರಿಸುತ್ತೇವೆ ಹೊರತು, ಸೋತ, ಕಳಕೊಂಡ, ಕಷ್ಟ-ನಷ್ಟ, ದುಃಖ, ನೋವು, ತಳಮಳ, ಕಳವಳವನ್ನು ವಿಷಾದವನ್ನು ಮಕ್ಕಳೆದುರು ವ್ಯಕ್ತಪಡಿಸುವುದೇ ಇಲ್ಲ. ಸುಖದ ಸುಪ್ಪತ್ತಿಗೆಯಲ್ಲಿ ಜೀವನದ ಗೆಲುವಿನ ಹಾರ ತೊಡಿಸಿ ಸರದಾರ ಆಗಲು ಬಯಸುತ್ತೇವೆ, ಸೋತ ದಾರವನ್ನು ಸೊಂಟಕ್ಕೆ ಕಟ್ಟಿಕೊಳ್ಳಲು ಬಯಸುವುದಿಲ್ಲ. ಹೀಗಾಗಿ ಮಗುವಿನೆದುರು ಸೋತಾಗ ಪಾತಾಳಕ್ಕಿಳಿದ ಭಾವವನ್ನು ಹೇಗೆ ಮೇಲಕ್ಕೆತ್ತಬೇಕು ಎಂಬುದನ್ನು ತಿಳಿಸದಾಗಿದ್ದೇವೆ.
ಗೆದ್ದು ಬೀಗುವುದು ಗೊತ್ತಿದೆ. ಆದರೆ ಸೋತು ಬಾಗುವುದಕ್ಕೆ ಸುತರಾಂ ಇಷ್ಟ ಇಲ್ಲ. ಗೆಲುವಿನ ಬೆನ್ನೇರಿ ಹೋದವರಿಗೆ ಸೋಲುವ ಅಂಬಾರಿಯನ್ನು ಹೊರಲು ತಯಾರಿಲ್ಲ. ಜಗತ್ತು ಕೂಡಾ ಗೆದ್ದ ಎತ್ತಿನ ಬಾಲವನ್ನಷ್ಟೆ ತೋರಿಸುತ್ತದೆ, ಸೋಲುವುದನ್ನಲ್ಲ. ಸಿನಿಮಾದಲ್ಲಿಯೂ ಹೀರೋ ಗೆದ್ದರಷ್ಟೆ ನಮಗೆ ಇಷ್ಟ, ಸೋತರೆ ರುಚಿಸುವುದಿಲ್ಲ!
ನಾವು ಮಕ್ಕಳಿಗೆ ಶ್ರೀಮಂತಿಕೆ ಕಲಿಸಬಹುದು, ಹೃದಯವಂತಿಕೆ ಕಲಿಸದಿದ್ದರೆ ಏನು ಪ್ರಯೋಜನಾ? ಬರೀ ಮಗುವಿನ ಎದುರು ಗೆದ್ದು ಬೀಗುವುದನ್ನು ಕಲಿಸುತ, ಭಾರೀ ಖುಷಿ ಹಂಚುವುದನ್ನು, ಸುಖಾದಾಸನವನ್ನು ತೋರಿಸುತ್ತೇವೆ. ಸೋತು ಬಾಗುವುದನ್ನು ಕಲಿಸದೆ, ಗೆದ್ದವರ ಬಾಲ ಹಿಡಿದು ನೇತಾಡೋದನ್ನು ಕಲಿಸುತ್ತಿದ್ದೇವೆ. ಮಕ್ಕಳ ಶಾಲೆ ಮನೆಯಲ್ಲಲ್ವೇ? ಅನ್ನುತ್ತಾರೆ. ಅಂತಹ ಮನೆಯ ವಾತಾವರಣ ಇಂದು ಕೆಟ್ಟಿದೆ. ಆಚಾರ, ವಿಚಾರ, ಸಂಸ್ಕೃತಿ, ಸಂಸ್ಕಾರ, ಸದ್ವಿಚಾರ ಎಲ್ಲಾ ಇಂದಿನ ಟ್ರೆಂಡ್ನಲ್ಲಿ ಮುಳುಗುತ್ತಿದೆ. ಇವುಗಳನ್ನೆಲ್ಲ ಮೂರ್ಕಾಸಿಗೆ ಹರಾಜು ಮಾಡುವ ಶೋಗಳು ಗರಿಗೆದರಿವೆ. ಇದನ್ನು ನೋಡಿ ಬೆಳೆಯುವ ಮಕ್ಕಳನ್ನು ಕಂಡು ದಾರಿ ತಪ್ಪಿದ್ದಾರೆ ಎಂದು ಪಟ್ಟಕಟ್ಟಿದ್ದೇವೆ. ಹಾಗಾಗಿ ಮನೆಯೊಳಗೆ ಮಗು ಟೀಕೆಯಲ್ಲಿ ಬದುಕಿದರೆ ಖಂಡಿಸುವುದನ್ನೆ ಕಲಿಯುತ್ತದೆ. ಮಗು ಹೊಗಳಿಕೆಯಲ್ಲಿ ಬದುಕಿದರೆ ಪ್ರಶಂಸಿಸುವುದನ್ನು ಕಲಿಯುತ್ತದೆ. ಮಗು ಹಗೆತನದಲ್ಲಿ ಬದುಕಿದರೆ ಹೊಡೆದಾಟವನ್ನು ಕಲಿಯುತ್ತದೆ. ಮಗು ತಾಳ್ಮೆಯಲ್ಲಿ ಬದುಕಿದರೆ ಸಹನೆಯನ್ನು ಕಲಿಯುತ್ತದೆ. ಮಗುವು ಅಪಹಾಸ್ಯದಲ್ಲಿ ಬದುಕಿದರೆ ನಾಚಿಕೆಯನ್ನು ಕಲಿಯುತ್ತದೆ. ಮಗು ಪ್ರೋತ್ಸಾಹದಲ್ಲಿ ಬದುಕಿದರೆ ವಿಶ್ವಾಸವನ್ನು ಕಲಿಯುತ್ತದೆ. ಮಗು ಅಪಮಾನದಲ್ಲಿ ಬೆಳೆದರೆ ಅಪರಾಧಿ ಭಾವವನ್ನು ಕಲಿಯುತ್ತದೆ. ಮಗು ಸಮ್ಮತಿಯಲ್ಲಿ ಬದುಕಿದರೆ ತನ್ನನ್ನೆ ತಾನು ಇಷ್ಟಪಡುವುದನ್ನು ಕಲಿಯುತ್ತದೆ. ಮಗುವು ಭದ್ರತೆಯೊಂದಿಗೆ ಬದುಕಿದರೆ ಭರವಸೆಯನ್ನು ಕಲಿಯುತ್ತದೆ. ಮಗು ನಿಷ್ಪಕ್ಷಪಾತದಲ್ಲಿ ಬದುಕಿದರೆ ನ್ಯಾಯವನ್ನು ಕಲಿಯುತ್ತದೆ. ಮಗುವು ಸ್ವೀಕೃತಿ ಹಾಗೂ ಮಿತ್ರತ್ವದಲ್ಲಿ ಬದುಕಿದರೆ ಈ ಜಗತ್ತಿನಲ್ಲಿ ಪ್ರೀತಿ ಹುಡುಕುವುದನ್ನು ಕಲಿಯುತ್ತದೆ ಎನ್ನುತ್ತಾರೆ ಮ್ಯಾನೇಜ್ಮೆಂಟ್ ಗುರು ಶಿವಖೆರಾ. ಕೊನೆಗೂ ಮಗು ತಾನು ಏನು ಪಡೆಯುತ್ತದೋ ಅದನ್ನೆ ಸಮಾಜಕ್ಕೆ ನೀಡುತ್ತದೆ ಅನ್ನೋದರಲ್ಲಿ ಸಂಶಯವಿಲ್ಲ.
ಶಾಲೆಯಲ್ಲಿ ಸೌಮ್ಯ, ಸೌಜನ್ಯಯುತ ಸ್ವಭಾವದ ವಿದ್ಯಾರ್ಥಿಯ ನಡವಳಿಕೆಯನ್ನು ಗಮನಿಸಿದ ಶಿಕ್ಷಕರು ʼಈ ನಯ-ವಿನಯ, ಸೌಜನ್ಯವನ್ನು ಕಲಿಸಿದ್ದು ಯಾರು? ಎಂದು ಕೇಳಿದಾಗ, ಅದು ಹೇಳುತ್ತದೆ “ಮತ್ಯಾರೂ ಅಲ್ಲ, ನನ್ನ ಕುಟುಂಬ, ನಮ್ಮ ಕುಟುಂಬದಲ್ಲಿ ಆ ಗುಣ ರಕ್ತಗತವಾಗಿ ಹರಿಯುತ್ತಿದೆ”. ಈ ಉತ್ತರವನ್ನು ಇಂದಿನ ಮಕ್ಕಳಿಂದ ನಿರೀಕ್ಷಿಸಲು ಸಾಧ್ಯವೇ? ಇಂದಿನ ಮಕ್ಕಳ ವರ್ತನೆಗೆ ಯಾರು ಕಾರಣ? ಯೋಚಿಸಬೇಕಾಗಿದೆ.
✒️ಸಂತೋಷ್ ನೆಲ್ಲಿಕಾರು























