ರಾಷ್ಟ್ರ ರಕ್ಷಣಾ ನಿಧಿಗೆ ರೂ. 2,14,000 ಅರ್ಪಣೆ
ಕಾರ್ಕಳ : ಮೌಲ್ಯಯುತವಾದ ವ್ಯಕ್ತಿತ್ವವಿದ್ದಾಗ ಯಶ್ಸಸು ಖಚಿತ. ಜೀವನದಲ್ಲಿ ಪಠ್ಯ ಶಿಕ್ಷಣ ಅರ್ಹತೆಯನ್ನು ಒದಗಿಸಿದರೆ ನೈತಿಕ ಶಿಕ್ಷಣ ವ್ಯಕ್ತಿತ್ವವನ್ನು ಸದೃಢಗೊಳಿಸುತ್ತದೆ ಎಂದು ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಡೀನ್ ಡಾ. ಕೃಷ್ಣ ಪ್ರಸಾದ್‌ಎಂ.ಎಸ್. ನುಡಿದರು. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದ ಗಣಿತನಗರ ಕ್ರೀಡಾಂಗಣದಲ್ಲಿ ಅಜೆಕಾರ್ ಪದ್ಮಗೋಪಾಲ್‌ಎಜ್ಯುಕೇಶನ್ ಟ್ರಸ್ಟ್‌ನ ವತಿಯಿಂದ ಡಿ.23 ರಂದು ನಡೆದ ಸಂಸ್ಥಾಪಕರ ದಿನಾಚರಣೆ ಹಾಗೂ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಸಾಧನೆಯ ಕನಸಿಗೆ ಹೆತ್ತವರು ಪ್ರೋತ್ಸಾಹ ನೀಡಬೇಕು. ಗುಣಮಟ್ಟದ ಶಿಕ್ಷಣದೊಂದಿಗೆ ಜೀವನ ಮೌಲ್ಯಾಧಾರಿತ ನೈತಿಕ ಶಿಕ್ಷಣವನ್ನು ಜ್ಞಾನಸುಧಾ ಸಂಸ್ಥೆ ವಿದ್ಯಾರ್ಥಿಗಳಿಗೆ ನೀಡುತ್ತಿರುವುದು ಸ್ತುತ್ಯರ್ಹ ಎಂದರು.
ಪ್ರಾಮಾಣಿಕೆಯಿಂದ ಕೂಡಿದ ಬದ್ಧತೆಯ ಕಾರ್ಯವೈಖರಿ ಉತ್ತಮ ಅವಕಾಶ ಕಲ್ಪಿಸುತ್ತದೆ – ಡಾ. ಮಧು ವೀರರಾಘವನ್
ಮಾಹೆ ಮಣಿಪಾಲದ ನಿರ್ವಹಣಾ, ಕಾನೂನು, ಮಾನವಿಕ ಮತ್ತು ಸಮಾಜ ವಿಜ್ಞಾನ ವಿಭಾಗದ ಉಪಕುಲಪತಿ ಡಾ. ಮಧು ವೀರರಾಘವನ್ ಮಾತನಾಡಿ, ಕೌಶಲ್ಯತೆ, ಬದ್ಧತೆ, ಕಾರ್ಯಕ್ಷಮತೆ ಪ್ರಾಮಾಣಿಕತೆಯಿಂದ ಕೂಡಿದ ದುಡಿಮೆಯಿಂದ ಜೀವನದಲ್ಲಿ ಉತ್ತಮ ಅವಕಾಶ ದೊರೆಯುತ್ತದೆ. ಹೆತ್ತವರು ಮಕ್ಕಳ ಮೇಲೆ ಒತ್ತಡ ಹೇರದೆ ಅವರ ಆಸಕ್ತಿಗಳಿಗೆ ಬೆಂಬಲ ನೀಡಬೇಕು ಎಂದರು.
ಸಾಧನೆಯ ಹಾದಿಯಲ್ಲಿ ಸಕಾರಾತ್ಮಕ ಮನೋಭಾವ ಅವಶ್ಯ – ಸೂರಜ್ ಶೆಟ್ಟಿ
ಸಿಂಗಾಪುರದ ಟಿ.ಎಂ.ಟಿ ಹಾಗೂ ಇಂಟರ್ನ್ಯಾಶನಲ್ ಬ್ಯಾಂಕಿಂಗ್ ಗ್ರೂಪ್ ಡಿ.ಬಿ.ಎಸ್. ಬ್ಯಾಂಕ್ ಲಿ. ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಸೂರಜ್ ಶೆಟ್ಟಿ ಮಾತನಾಡಿ, ಸಾಧನೆಯ ಹಾದಿಯಲ್ಲಿ ಸಕಾರತ್ಮಕ ಮನೋಭಾವ, ಕಲಿಯುವ ತುಡಿತ, ಸಾಧಿಸುವ ಛಲ ಜೊತೆಗೆ ಪ್ರಾಮಾಣಿಕ ಪ್ರಯತ್ನವಿದ್ದರೆ ಯಾರೊಂದಿಗೂ ಸ್ಪರ್ಧಿಸುವ ಅಗತ್ಯವಿಲ್ಲ. ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ಬಳಕೆಯು ವಿಫುಲವಾದ ಅವಕಾಶಗಳನ್ನು ನೀಡುತ್ತಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳುವ ಜಾಣ್ಮೆಯನ್ನು ಬೆಳೆಸಿಕೊಳ್ಳಿ ಎಂದು ಆಶಯ ವ್ಯಕ್ತಪಡಿಸಿದರು.
ಸನ್ಮಾನ :
ಎಂ.ಬಿ.ಬಿ.ಎಸ್. ಗೆ ಆಯ್ಕೆಗೊಂಡ ಸಂಸ್ಥೆಯ 109 ಮೆಡಿಕಲ್ ವಿದ್ಯಾರ್ಥಿಗಳನ್ನು, ಸಾವಿರದೊಳಗಿನ ಕೆ.ಸಿ.ಇ.ಟಿ. ಇಂಜಿನಿಯರಿಂಗ್‌ನಲ್ಲಿ ರ‍್ಯಾಂಕ್ ಪಡೆದ 9 ವಿದ್ಯಾರ್ಥಿಗಳನ್ನು, ಎನ್.ಐ.ಟಿ.ಕೆ ಸುರತ್ಕಲ್‌ನಲ್ಲಿ ಪ್ರವೇಶ ಪಡೆದ ಮೂವರು ವಿದ್ಯಾರ್ಥಿಗಳನ್ನು, ರಾಜ್ಯಮಟ್ಟದಲ್ಲಿ ಚಿನ್ನದ ಪದಕ ಪಡೆದ ಇಬ್ಬರು ಕ್ರೀಡಾಪಟುಗಳನ್ನು ಮತ್ತು ರಾಷ್ಟ್ರಮಟ್ಟದಲ್ಲಿ ಸಿ.ಎ.ಫೌಂಡೇಶನ್ ಪರೀಕ್ಷೆಯ ಟಾಪರ್ ಸಾತ್ವಿಕ್ ಪ್ರಭು ಅವರರನ್ನು ಈ ಸಂದರ್ಭ ಸನ್ಮಾನಿಸಲಾಯಿತು.

ರಾಷ್ಟ್ರ ರಕ್ಷಣಾ ನಿಧಿಗೆ ರೂ. 2,14,000 ಅರ್ಪಣೆ
ಈ ಸಂದರ್ಭ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ ವತಿಯಿಂದ ರಾಷ್ಟ್ರದ ರಕ್ಷಣಾ ನಿಧಿಗೆ ಎರಡು ಲಕ್ಷದ ಹದಿನಾಲ್ಕು ಸಾವಿರ ರೂಪಾಯಿಯನ್ನು ಸಂಸ್ಥೆಯ ಎನ್.ಸಿ.ಸಿ ಅಧಿಕಾರಿಗಳಾದ ಸುಮಿತ್.ಇ. ಹಾಗೂ ಮಂಜುನಾಥ್ ಮುದೂರ್‌ರವರಿಗೆ ಹಸ್ತಾಂತರಿಸಲಾಯಿತು.


ವಿದ್ಯಾರ್ಥಿ ವೇತನ
ಈ ಶೈಕ್ಷಣಿಕ ವರ್ಷದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ 1 ಕೋಟಿ 44 ಲಕ್ಷದಷ್ಟು ವಿದ್ಯಾರ್ಥಿ ವೇತನ ನೀಡಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಮಾತನಾಡಿ, ಎಷ್ಟೇ ದೊಡ್ಡ ಸಾಧನೆ ಮಾಡಿದ್ದರೂ, ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳುವ ಹೃದಯ ಶ್ರೀಮಂತಿಕೆ ಇದ್ದರೆ ಮಾತ್ರ ಆತ ನಿಜವಾಗಿ ಸಾಧಕನೆನಿಸಿಕೊಳ್ಳತ್ತಾನೆ. ವಿದ್ಯಾರ್ಥಿಗಳನ್ನು ಅರ್ಥಮಾಡಿಕೊಳ್ಳುವಂತಹ ಶಿಕ್ಷಕರೇ ಜ್ಞಾನಸುಧಾದ ಸಾಧನೆಯ ಹಿಂದಿನ ಬಹುದೊಡ್ಡ ಶಕ್ತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ ಟ್ರಸ್ಟಿ ಎಂ. ಜಿ. ಗೌಡ, ವಿದ್ಯಾವತಿ. ಎಸ್. ಶೆಟ್ಟಿ., ಆಡಳಿತ ಮಂಡಳಿ ಸದಸ್ಯರಾದ ಶಾಂತಿರಾಜ್ ಹೆಗ್ಡೆ, ಪ್ರಕಾಶ್ ಶೆಣೈ, ಕುಕ್ಕುಂದೂರು ಗ್ರಾ. ಪಂ. ಸದಸ್ಯ ರೆಹಮತುಲ್ಲಾ ಮೊದಲಾದವರು ಉಪಸ್ಥಿತರಿದ್ದರು. ಟ್ರಸ್ಟಿ ಅನಿಲ್ ಕುಮಾರ್‌ಜೈನ್ ಸ್ವಾಗತಿಸಿದರು. ಉಪನ್ಯಾಸಕಿ ಸಂಗೀತಾ ಕುಲಾಲ್‌ಕಾರ್ಯಕ್ರಮ ನಿರೂಪಿಸಿದರು. ಪಿ.ಆರ್.ಒ. ಜ್ಯೋತಿ ಪದ್ಮನಾಭ ಭಂಡಿ ವಂದಿಸಿದರು.





















