ನೀವು ನಮ್ಮಲ್ಲಿಗೆ ಬರದಿದ್ದರೆ ನಾವು ನಿಮ್ಮಲ್ಲಿಗೆ ಬರುವುದಿಲ್ಲ

ಪಾಕಿಸ್ಥಾನ ಕ್ರಿಕೆಟ್‌ ತಂಡದ ಹೊಸ ಬೆದರಿಕೆ

ಹೊಸದಿಲ್ಲಿ : ಪಾಕಿಸ್ಥಾನದಲ್ಲಿ ನಡೆಯುವ ಏಷ್ಯಾಕಪ್‌ ಆಡಲು ಭಾರತ ಬರದಿದ್ದರೆ ಮುಂದಿನ ವರ್ಷ ಭಾರತದಲ್ಲಿ ನಡೆಯುವ ವಿಶ್ವಕಪ್‌ ಆಡಲು ನಾವೂ ಬರುವುದಿಲ್ಲ ಎಂದು ಪಾಕಿಸ್ಥಾನ ಕ್ರಿಕೆಟ್‌ ತಂಡ ಹೇಳಿದೆ. ತಟಸ್ಥ ಸ್ಥಳದಲ್ಲಿ ಏಷ್ಯಾಕಪ್ ಆಡಲು ಆದ್ಯತೆ ನೀಡುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪಾಕಿಸ್ಥಾನ, ಭಾರತದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್‌ನಿಂದ ಹಿಂದೆ ಸರಿಯುವುದಾಗಿ ಬೆದರಿಕೆ ಹಾಕಿದೆ.
ಮುಂದಿನ ವರ್ಷ ಏಷ್ಯಾ ಕಪ್ ಪಾಕಿಸ್ಥಾನದಲ್ಲಿ ನಡೆಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಕಾರ್ಯಕಾರಿ ಮಂಡಳಿಯಲ್ಲಿ ನಿರ್ಧರಿಸಲಾಗಿದೆ. ಷಾ ಕೂಡಾ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿದ್ದಾರೆ. ಮುಂಬೈನಲ್ಲಿ ಬಿಸಿಸಿಐ ಎಜಿಎಂ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಯ್ ಶಾ, ಭಾರತವು ಏಷ್ಯಾ ಕಪ್ ತಟಸ್ಥ ಸ್ಥಳದಲ್ಲಿ ಆಡುತ್ತದೆ ಎಂದು ಹೇಳಿದರು. ಶಾ ಅವರ ಹೇಳಿಕೆಯ ನಂತರ ಭಾರತದಲ್ಲಿ ನಡೆಯಲಿರುವ 50 ಓವರ್‌ಗಳ ಐಸಿಸಿ ವಿಶ್ವಕಪ್‌ನಿಂದ ಹೊರಬರಲು ನಾವು ಯೋಚಿಸುತ್ತಿರುವುದಾಗಿ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಹೇಳಿದ್ದಾರೆ.
ಪಾಕಿಸ್ಥಾನ ಭಾರತದಲ್ಲಿ ಆಡದಿದ್ದರೆ ಐಸಿಸಿ ಮತ್ತು ಏಷ್ಯಾಕಪ್ ನಂತಹ ಟೂರ್ನಿಗಳಲ್ಲಿ ನಷ್ಟ ಉಂಟಾಗುವುದನ್ನು ಅರಿತಿರುವ ಪಾಕಿಸ್ಥಾನ ಕಠಿಣ ನಿರ್ಧಾರ ತೆಗೆದುಕೊಳ್ಳಲು ಸಜ್ಜಾಗಿದೆ ಎಂದು ಮೂಲಗಳು ಹೇಳಿವೆ. ಭಾರತ 2008ರ ಏಷ್ಯಾಕಪ್ ನಂತರ ಪಾಕಿಸ್ಥಾನ ಪ್ರವಾಸ ಕೈಗೊಂಡಿಲ್ಲ. ಪಾಕಿಸ್ಥಾನ ಕೊನೆಯದಾಗಿ 2012ರಲ್ಲಿ ಏಕದಿನ ಮತ್ತು ಟಿ-20 ಸರಣಿಗಾಗಿ ಭಾರತಕ್ಕೆ ಆಗಮಿಸಿತ್ತು.

Latest Articles

error: Content is protected !!