ಬೈಲೂರು : ಕಾರ್ಕಳ ತಾಲೂಕು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಹಯೋಗದಲ್ಲಿ ಬೈಲೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯು ಕಣಜಾರಿನ ಲೂರ್ಡ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಲೂರ್ಡ್ ಮಾತೆಯ ಚರ್ಚಿನ ಧರ್ಮಗುರುಗಳು, ಸಂಸ್ಥೆಯ ಸಂಚಾಲಕ ರೆ| ಫಾದರ್ ವಿಶಾಲ್ ಲೋಬೊ ನೆರವೇರಿಸಿದರು.
ಈ ಸಂದರ್ಭದಲ್ಲಿ ನೀರೆ ಗ್ರಾ. ಪಂ. ಅಧ್ಯಕ್ಷೆ ಶಾಲಿನಿ, ಉಪಾಧ್ಯಕ್ಷ ಸತೀಶ್ ದೇವಾಡಿಗ, ಬೈಲೂರು ಗ್ರಾ. ಪಂ. ಅಧ್ಯಕ್ಷ ಜಗದೀಶ ಪೂಜಾರಿ, ಭೂನ್ಯಾಯ ಮಂಡಳಿಯ ಸದಸ್ಯ ವಿಕ್ರಮ್ ಹೆಗ್ಡೆ, ನಿಕಟಪೂರ್ವ ಜಿ. ಪಂ. ಸದಸ್ಯ ಸುಮಿತ್ ಶೆಟ್ಟಿ ಕೌಡೂರು, ತಾ. ಪಂ. ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಸ್ಥಳೀಯ ಪಂಚಾಯತ್ ಸದಸ್ಯ ಸಚ್ಚಿದಾನಂದ ಪ್ರಭು, ಶಿಕ್ಷಕ-ರಕ್ಷಕ ಸಮಿತಿಯ ಅಧ್ಯಕ್ಷ ಅಂತೋಣಿ ಮಿರಾಂದ, ಚರ್ಚ್ ಪಾಲಾನಾ ಸಮಿತಿಯ ಸದಸ್ಯರಾದ ಮೇಬಲ್ ನಜ್ರತ್, ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿ ವೆಂಕಟರಮಣ ಕಲ್ಕೂರ್, ಶಿಕ್ಷಣ ಸಂಯೋಜಕ ಬಾಲಕೃಷ್ಣ ನಾಯಕ್ ಉಪಸ್ಥಿತರಿದ್ದರು.
ಲೂರ್ಡ್ಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಜಾಸ್ಮಿನ್ ಪಿಂಟೋ ಸ್ವಾಗತಿಸಿ, ಬೈಲೂರು ಸಮೂಹ ಸಂಪನ್ಮೂಲ ವ್ಯಕ್ತಿ ಉಮೇಶ್ ನಾಯಕ್ ಪೆರಣಂಕಿಲ ಪ್ರಸ್ತಾವನೆಗೈದರು. ಶ್ರೀಲತಾ ಮತ್ತು ಕವಿತಾ ಕಾರ್ಯಕ್ರಮ ನಿರೂಪಿಸಿ, ಸುಪ್ರಿಯಾ ವಂದನಾರ್ಪಣೆ ಗೈದರು. ಬೈಲೂರು ಕ್ಲಸ್ಟರ್‌ನ 17 ಶಾಲೆಗಳ 400 ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಸಂಸ್ಥೆಯ ಶಿಕ್ಷಕರು ನಿರ್ವಾಹಕರಾಗಿ, ತಾಲೂಕಿನ ವಿವಿಧ ಶಾಲೆಗಳ ಅನುಭವೀ ಶಿಕ್ಷಕರು ತೀರ್ಪುಗಾರರಾಗಿ ಸಹಕರಿಸಿದರು. ವೈವಿಧ್ಯಮಯ ಛದ್ಮವೇಷ ಸ್ಪರ್ಧೆಗಳು, ಹಾಸ್ಯ, ಮಿಮಿಕ್ರಿ, ಕಂಠಪಾಠ, ಭಾಷಣ, ಜಾನಪದ ನೃತ್ಯಗಳು, ಕವ್ವಾಲಿ, ರಂಗೋಲಿ, ಚಿತ್ರಕಲೆ, ಪ್ಲೇ ಮಾಡೆಲ್ಲಿಂಗ್ ಹೀಗೆ ಹಲವಾರು ಸ್ಪರ್ಧೆಗಳಲ್ಲಿ ದಿನಪೂರ್ತಿ ವಿದ್ಯಾರ್ಥಿಗಳು ಭಾಗವಹಿಸಿ ಆನಂದಿಸಿದರು. ವಿಜೇತರಾಗಿ ತಾಲೂಕು ಮಟ್ಟದಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಅಭಿನಂದನಾ ಪತ್ರಗಳನ್ನು ವಿತರಿಸಲಾಯಿತು. ಪ್ರತಿಭಾ ಕಾರಂಜಿ ಮಕ್ಕಳ ಹಬ್ಬವಾಗಿ ಮೂಡಿಬಂತು.
ಬೈಲೂರು : ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

































































