ಸಂಪಾದಕೀಯ

ಬೆಳ್ಳಾರೆಯಲ್ಲಿ ಅಲುಗಾಡಿದ್ದು ಕಾರು ಅಲ್ಲ – ಬಿಜೆಪಿ ಸರಕಾರ

ಸುಳ್ಯದ ಬೆಳ್ಳಾರೆಯಲ್ಲಿ ಹಿಂದೂ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಅವರನ್ನು ಮತಾಂಧ ದುಷ್ಕರ್ಮಿಗಳು ಕೊಲೆ ಮಾಡಿರುವುದು ಇಡೀ ದೇಶದಲ್ಲಿ ಸಂಚಲನ ಮೂಡಿಸಿದ ಘಟನೆ. ಶಿವಮೊಗ್ಗದಲ್ಲಿ ಹರ್ಷ ಎಂಬ ಹಿಂದೂ ಕಾರ್ಯಕರ್ತನ ಹತ್ಯೆಯಾಗಿ ಹರಿದ ನೆತ್ತರ ಕಲೆ ಒಣಗುವ ಮೊದಲೇ ಇನ್ನೋರ್ವ ಹಿಂದೂ ಕಾರ್ಯಕರ್ತ ಹತ್ಯೆಯಾಗಿರುವುದು ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಇನ್ನಿಲ್ಲದಂತೆ ಹತಾಶೆಗೆ ತಳ್ಳಿದೆ. ಆ ಹತಾಶೆಯೇ ಈಗ ಆಕ್ರೋಶದ ರೂಪ ಪಡೆದು ಸಿಡಿಯುತ್ತಿದೆ. ಅದರ ಪ್ರತಿಫಲವೇ ಹಲವು ಯುವ ಪದಾಧಿಕಾರಿಗಳ ರಾಜೀನಾಮೆ ಪರ್ವ.
ಕಳೆದ ಕೆಲವು ಸಮಯದಿಂದ ನಡೆಯುತ್ತಿರುವ ಘಟನಾವಳಿಗಳನ್ನು ಅವಲೋಕಿಸುವಾಗ ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಮತೀಯ ಸಾಮರಸ್ಯವನ್ನು ಕದಡಿ ಹಿಂಸೆಯನ್ನು ಕೆರಳಿಸಲು ವ್ಯವಸ್ಥಿತ ಪಿತೂರಿ ನಡೆದಿರುವ ಅನುಮಾನ ಮೂಡುತ್ತಿದೆ. ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆದ ಶಿರಚ್ಛೇದ ಘಟನೆಯಾಗಿರಬಹುದು ಅಥವಾ ಉತ್ತರ ಪ್ರದೇಶದಲ್ಲಿ ಆಗಾಗ ನಡೆಯುತ್ತಿರುವ ಹಿಂಸಾಚಾರಗಳಾಗಿರಬಹುದು, ಇವುಗಳನ್ನು ಬಿಡಿಯಾಗಿ ನೋಡದೆ ಸಮಸ್ತವಾಗಿ ಗ್ರಹಿಸಿದರೆ ಈ ಪಿತೂರಿಯ ಶಂಕೆ ದಟ್ಟವಾಗುತ್ತಿದೆ.
ಕರ್ನಾಟಕಕ್ಕೆ ಈ ಮಾದರಿಯ ಘಟನೆಗಳು ಹೊಸದೇನೂ ಆಲ್ಲವಾದರೂ ಈಗ ನಡೆಯುತ್ತಿರುವ ಘಟನೆಗಳು ರಾಜ್ಯ ಮತೀಯವಾದಿಗಳ ಮತ್ತು ಭಯೋತ್ಪಾದಕರ ಸುರಕ್ಷಿತ ತಾಣವಾಗುತ್ತಿರುವ ಅತಂಕವನ್ನುಂಟು ಮಾಡಿದೆ. ಇಲ್ಲಿ ನಡೆಯುತ್ತಿರುವ ಕೊಲೆಗಳಿಗೂ ಬೆಂಗಳೂರು ಸೇರಿದಂತೆ ಕೆಲವು ನಗರಗಳಲ್ಲಿ ಆಗಾಗ, ಐಸಿಸ್‌, ಅಲ್‌ ಕಾಯಿದಾ, ಲಷ್ಕರ್‌ನಂಥ ಅಂತಾರಾಷ್ಟ್ರೀಯ ಭೀತಿವಾದಿ ಸಂಘಟನೆಗಳಿಗೆ ಸೇರಿದ ಉಗ್ರರು ಸೆರೆಯಾಗುತ್ತಿರುವ ಘಟನೆಗಳಿಗೂ ನಂಟು ಇದೆಯಾ ಎಂಬ ಅನುಮಾನ ಸುಳಿದಾಡುತ್ತಿದೆ. ಪ್ರತಿ ಬಾರಿ ಉಗ್ರ ನಂಟಿನ ವ್ಯಕ್ತಿಗಳು ಸೆರೆಯಾದಾಗ ಸರಕಾರ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡದ್ದಲ್ಲದೆ ಅದರ ಮೂಲವನ್ನು ಪತ್ತೆ ಹಚ್ಚುವ ಗೋಜಿಗೆ ಹೋಗಿಲ್ಲ. ಹೀಗಾಗಿ ಇಂದು ಮತಾಂಧ ಶಕ್ತಿಗಳು ವಿಜೃಂಭಿಸುತ್ತಿವೆ.
ಕೊಲೆ ಮಾಡಿ, ಹಿಂಸಾಚಾರ ಕೆರಳಿಸಿ ಭೀತಿಯ ವಾತಾವರಣ ನಿರ್ಮಿಸಿ, ಅಶಾಂತಿ ಉಂಟು ಮಾಡುವುದು ಇಂಥ ಶಕ್ತಿಗಳ ಉದ್ದೇಶ. ಕಳೆದ ಹಲವು ವರ್ಷಗಳಿಂದ ಪದೇ ಪದೆ ಈ ಮಾದರಿಯ ಘಟನೆಗಳು ನಡೆಯುತ್ತಿದ್ದರೂ ಅವುಗಳನ್ನು ನಿಭಾಯಿಸುವಲ್ಲಿ ಸರಕಾರ ಎಡವಿರುವುದು ಸ್ಪಷ್ಟ. ಅದರಲ್ಲೂ ಕಳೆದ ಕೆಲವು ಸಮಯದಿಂದೀಚೆಗೆ ನಡೆಯುತ್ತಿರುವ ಕೊಲೆ ಮತ್ತು ಮತೀಯ ಮತ್ತು ಧಾರ್ಮಿಕ ವಿವಾದಗಳನ್ನು ನಿಭಾಯಿಸುವಲ್ಲಿ ಸರಕಾರ ಸಂಪೂರ್ಣವಾಗಿ ವಿಫಲಗೊಂಡಿದೆ ಎಂದೇ ಹೇಳಬೇಕಾಗುತ್ತದೆ. ಕಠಿನ ಕ್ರಮ ಕೈಗೊಳ್ಳುತ್ತೇವೆ, ಕಾನೂನು ಪ್ರಕಾರ ಶಿಕ್ಷಿಸುತ್ತೇವೆ ಎಂಬೆಲ್ಲ ಸವಕಲು ಭರವಸೆಗಳನ್ನು ಕೇಳಿ ಕೇಳಿ ಜನರು ರೋಸಿ ಹೋಗಿದ್ದಾರೆ. ಅದರ ಪರಿಣಾಮವೇ ಪ್ರವೀಣ್‌ ಹತ್ಯೆ ಬಳಿಕ ಭುಗಿಲೆದ್ದ ಆಕ್ರೋಶ. ಹಿಂದುತ್ವದ ಹೆಸರು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದ ಆಡಳಿತದಲ್ಲೇ ಹಿಂದುಗಳು ಸುರಕ್ಷಿತರಾಗಿಲ್ಲ ಎಂಬ ಭಾವನೆಯೊಂದು ವ್ಯಾಪಿಸಲು ಈ ಘಟನೆಗಳು ಕಾರಣವಾಗಿವೆ. ಹೀಗಾಗಿ ಜನರ ಆಕ್ರೋಶ ಸರಕಾರದತ್ತ ತಿರುಗಿರುವುದು ಸಹಜವೇ ಆಗಿದೆ.
ಇಂಥ ಸಂದರ್ಭದಲ್ಲಿ ಸರಕಾರ ಜನೋತ್ಸವವನ್ನು ರದ್ದುಪಡಿಸುವುದು ಅನಿವಾರ್ಯವೇ ಅಗಿತ್ತು. ಆದರೆ ಜನೋತ್ಸವ ಸಿದ್ಧತೆಗೆ ಕೋಟಿಗಟ್ಟಲೆ ಹಣ ಖರ್ಚು ಆಗಿದೆ. ಒಂದೂವರೆ ಲಕ್ಷ ಜನರನ್ನು ಕರೆದುಕೊಂಡು ಬರುವ, ಭರ್ಜರಿ ಪೆಂಡಾಲ್, ಊಟ, ಉಪಾಹಾರ, ಬೃಹತ್ ಎಲ್ಇಡಿ ವೇದಿಕೆ ಎಲ್ಲವೂ ರೆಡಿಯಾಗಿದೆ.

ಕಠಿಣ ಕ್ರಮ ಎಂಬ ಶಬ್ದ ಮೂರು ಸಲ ಹೇಳಿದ್ದು ಯಾಕೆ ?
ರಾಜ್ಯದಾದ್ಯಂತ ಸೂತಕದ ಛಾಯೆ ಇರುವಾಗ ಸಿದ್ಧರಾಮೊತ್ಸವ ನಡೆಯುತ್ತದೆಯಾ ? ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಗೃಹಮಂತ್ರಿ ಆರಗ ಜ್ಞಾನೇಂದ್ರ ಪದೇ ಪದೆ ಹೇಳುತ್ತಿರುವುದು ಯಾಕೆ ? ಹಿಂದೆ ಆಗಿರುವ ಹಿಂದೂ ಯುವಕರ ಕೊಲೆಗೆ ನ್ಯಾಯ ಸಿಕ್ಕಿದೆಯಾ ? ಶಿವಮೊಗ್ಗ ಜೈಲಿನಲ್ಲಿ ಹರ್ಷ ಕೊಲೆ ಪ್ರಕರಣದ ಆರೋಪಿಗಳು ವಿಡಿಯೋ ಕಾಲ್ ಮಾಡಿ ಕುಟುಂಬದವರ ಜತೆ ಮಾತಾಡಿದ್ದರ ಬಗ್ಗೆ ವಿಚಾರಣೆ ಆಗಿದೆಯಾ ? ಹರ್ಷನ ಸಹೋದರಿ ನ್ಯಾಯ ಕೇಳಲು ಬಂದಾಗ ಆರಗ ಜ್ಞಾನೇಂದ್ರ ಏರು ಧ್ವನಿಯಲ್ಲಿ ಮಾತಾಡಿದ್ದು ಸರಿಯೇ ? ಇವೆಲ್ಲವೂ ಸರಕಾರಕ್ಕೆ ಸಾರ್ವಜನಿಕರು ಕೇಳುವ ಪ್ರಶ್ನೆ. ಪ್ರಶಾಂತ್ ನೆಟ್ಟಾರು ಹತ್ಯೆ ಆದಾಗ ಪಕ್ಷದ ಕಾರ್ಯಕರ್ತರ ಆಕ್ರೋಶ ಭುಗಿಲೇಳಲು ಈ ಅಂಶಗಳೇ ಕಾರಣ. ಜನಾಕ್ರೋಶಕ್ಕೆ ಟಾರ್ಗೆಟ್ ಆಗಿರುವ ಬಿಜೆಪಿ ಸರಕಾರದ ಮುಂದಿನ ನಡೆ ಏನು ? ಈ ಪ್ರಶ್ನೆಗಳಿಗೆಲ್ಲ ಜನ ಉತ್ತರ ನಿರೀಕ್ಷಿಸುತ್ತಿದ್ದಾರೆ. ಬೆಳ್ಳಾರೆಯಲ್ಲಿ ಅಲ್ಲಾಡಿದ್ದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕಾರು ಮಾತ್ರ ಅಲ್ಲ. ಇಡೀ ಸರಕಾರ ಎನ್ನುವುದು ಅಷ್ಟೇ ಸತ್ಯ.







































































































error: Content is protected !!
Scroll to Top