ಉಡುಪಿ : ಮಳೆಯಲ್ಲಿ ಆಟವಾಡದಂತೆ ತಾಯಿ ಬುದ್ಧಿಮಾತು ಹೇಳಿದ್ದಕ್ಕೆ 9ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ತಾಲೂಕು ಸಾಲಿಗ್ರಾಮ ಸಮೀಪದ ಕಾರ್ಕಡದಲ್ಲಿ ನಡೆದಿದೆ. ಲಕ್ಷ್ಮೀ ಪೂಜಾರಿ ಎಂಬವರ ಮಗ ನಾಗೇಂದ್ರ (14 ವ.) ಆತ್ಮಹತ್ಯೆಗೆ ಶರಣಾದ ಬಾಲಕ. ನಾಗೇಂದ್ರ ಶಾಲೆಗೆ ರಜೆಯಿದ್ದ ಕಾರಣ ಬೆಳಿಗ್ಗೆ ಶಾಲಾ ಮೈದಾನದಲ್ಲಿ ಆಟವಾಡಲು ತೆರಳಿದ್ದ. ಅಪರಾಹ್ನ ಮನೆಗೆ ಬಂದಾಗ ತಾಯಿ ಮಳೆಯಲ್ಲಿ ಆಟವಾಡದಂತೆ ಬುದ್ಧಿ ಹೇಳಿದ್ದರು.
ನಾಗೇಂದ್ರನ ತಂದೆ ಎರಡು ವರ್ಷಗಳ ಹಿಂದೆ ಮೃತರಾಗಿದ್ದು, ಜೀವನೋಪಾಯಕ್ಕಾಗಿ ಲಕ್ಷ್ಮೀ ಅವರು ಪುಟ್ಟ ಕ್ಯಾಂಟೀನ್ ನಡೆಸುತ್ತಿದ್ದರು. ಕ್ಯಾಂಟೀನ್‌ನಲ್ಲಿ ಗಿರಾಕಿಗಳಿದ್ದು, ಮನೆಗೆ ಹೋಗಿ ಊಟ ಮಾಡುವಂತೆ ನಾಗೇಂದ್ರನಿಗೆ ತಿಳಿಸಿದ್ದರು. ಹಠ ಸ್ವಭಾವದ ನಾಗೇಂದ್ರ ಸಿಟ್ಟುಗೊಂಡು ಮನೆ ಸಮೀಪ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




















