ಕಾರ್ಕಳ/ಹೆಬ್ರಿ : ಕಳೆದ 10 ದಿನಗಳಿಂದ ಕಂಡು ಕೇಳರಿಯದ ಪ್ರಮಾಣದಲ್ಲಿ ಕಾರ್ಕಳ ಹೆಬ್ರಿ ಉಭಯ ತಾಲೂಕಿನಲ್ಲಿ ಸತತವಾಗಿ ಮಳೆ ಸುರಿದಿದ್ದು, ಮಂಗಳವಾರ ಮಾತ್ರ ವರುಣ ತುಸು ಬಿಡುವು ಮಾಡಿಕೊಂಡತ್ತಿತ್ತು. ಎರಡು ದಿನಗಳಲ್ಲಿ ಮಳೆ ತಗ್ಗಿದ್ದರೂ ಪ್ರಾಕೃತಿಕ ವಿಕೋಪ ಮಾತ್ರ ಅಧಿಕವಾಗಿತ್ತು. ಕಾರ್ಕಳದಲ್ಲಿ ಕಳೆದೆರಡು ದಿನದಲ್ಲಿ 13 ಮನೆಗಳಿಗೆ ಹಾನಿಯಾಗಿದೆ. ಇನ್ನಾ ಗ್ರಾಮದ ಅಪ್ಪಿ ಎಂಬವರ ಮನೆ ಗೋಡೆ ಬಿರುಕು ಬಿಟ್ಟಿದ್ದು, ಹಂಚು ಛಾವಣಿಗೆ ಹಾನಿಯಾಗಿದೆ. ಅದರಿಂದ ಸುಮಾರು 90 ಸಾವಿರ ರೂ. ನಷ್ಟ ಸಂಭವಿಸಿದೆ. ಹೆರ್ಮುಂಡೆ ಗ್ರಾಮದ ಕೈರೋಳಿ ಎಂಬಲ್ಲಿ ಧನಲಕ್ಷ್ಮೀ ರಂಗಪ್ಪ ಗೌಡ ಎಂಬವರ ಮನೆಯು ಹಾನಿಗೀಡಾಗಿದ್ದು 10 ಸಾವಿರ ರೂ. ನಷ್ಟವಾಗಿದೆ. ಎಳ್ಳಾರೆ ಗ್ರಾಮದ ಮಾವಿನಕಟ್ಟೆ ಇಂದಿರಾ ರಮೇಶ್ ಪ್ರಭು ಅವರ ವಾಸ್ತವ್ಯದ ಮನೆ ಗೋಡೆಯು ಕುಸಿದಿದ್ದು, 50 ಸಾವಿರ ರೂ., ಕಡ್ತಲ ಗ್ರಾಮದ ಹೆಬ್ಬಾರಬೆಟ್ಟು ನಿವಾಸಿ ಪ್ರಭಾವತಿ ದಯಾನಂದ ಹೆಗ್ಡೆ ಅವರ ಮನೆಯ ಗೋಡೆಯು ಕುಸಿದಿದ್ದು 15 ಸಾವಿರ ರೂ., ನಿಟ್ಟೆ ಗ್ರಾಮದ ಕೆಮ್ಮಣ್ಣು ನಿವಾಸಿ ಜಾನಕಿ ಎಂಬವರ ಮನೆಯು ಗಾಳಿಗೆ ಹಾನಿಗೀಡಾಗಿದ್ದು, 30 ಸಾವಿರ ರೂ., ಲೀಲಾ ಸೇರಿಗಾರ್ತಿ ಎಂಬವರ ಮನೆಯ ಪಕ್ಕದ ಜಮೀನು ಕುಸಿದು ಮನೆಯ ಗೋಡೆ ಬಿರುಕು ಬಿಟ್ಟಿದೆ. ಯೆರ್ಲಪಾಡಿ ಗ್ರಾಮದ ವಸಂತಿ ನಾಯ್ಕ್ ಎಂಬವರ ಮನೆ ಗೋಡೆ ಕುಸಿದಿದ್ದು, 30 ಸಾವಿರ ರೂ. ನಷ್ಟ ಸಂಭವಿಸಿದೆ. ನಿಟ್ಟೆ ಗ್ರಾಮದ ಕೆಮ್ಮಣ್ಣು ವಾರಿಜ ಪೂಜಾರಿ ಎಂಬವರ ವಾಸ್ತವ್ಯದ ಮನೆಯ ಗೋಡೆಯು ಕುಸಿದು ಬಿದ್ದಿದ್ದು ಭಾಗಶಃ ಹಾನಿಯಾಗಿದೆ. ಹಿರ್ಗಾನ ಗ್ರಾಮದ ಕಾನಂಗಿ ಜಗದೀಶ್ ಎಂಬವರ ಮನೆ ಗೋಡೆ ಮಳೆಯಿಂದ ಕುಸಿದಿದ್ದು ಶೇ. 75 ಹಾನಿಯಾಗಿದೆ. ಇದರಿಂದ ಅಂದಾಜು 30 ಸಾವಿ ರೂ. ನಷ್ಟವುಂಟಾಗಿದೆ.
ಕಾರ್ಕಳ : ಇಳಿದ ಮಳೆ – ಏರಿದ ಮನೆ ಹಾನಿ
