Sunday, October 2, 2022
spot_img
Homeಅಂಕಣಕಲಿಯುವ ಸಂಕಲ್ಪ ಇದ್ದರೆ ಪಾದುಕೆಯೂ ಗುರು ಆಗಬಹುದು!

ಕಲಿಯುವ ಸಂಕಲ್ಪ ಇದ್ದರೆ ಪಾದುಕೆಯೂ ಗುರು ಆಗಬಹುದು!

*ಇಂದು ಗುರು ಪೂರ್ಣಿಮೆ. ಆ ನಿಮಿತ್ತ ಇಂದಿನ ಶಿಕ್ಷಣ ಮತ್ತು ಹಿಂದಿನ ಗುರುಕುಲ ಪದ್ಧತಿಯ ಮೇಲೆ ಬೆಳಕು ಚೆಲ್ಲುವ ಲೇಖನ.
ಗುರು ಅಂದರೆ ದೊಡ್ಡದು ಅಂತ ಅರ್ಥ. ಭಾರ ಇರುವುದು ಗುರುತ್ವ. ಭೂಮಿಗೆ ಭಾರ ಬಂದಿರುವುದೇ ಗುರುತ್ವದಿಂದ!
ನಮ್ಮ ಭಾರತವು ಹೇಳಿ ಕೇಳಿ ಗುರು ಪರಂಪರೆಯ ರಾಷ್ಟ್ರ. ಕಲಿಯಲು ಮನಸ್ಸಿದ್ದರೆ ಇಲ್ಲಿ ಹೆಜ್ಜೆ ಹೆಜ್ಜೆಗೂ ಶ್ರೇಷ್ಠರಾದ ಗುರುಗಳು ದೊರೆಯುತ್ತಾರೆ. ಹಿಂದೆ ಭಾರತದಲ್ಲಿ ಮಾತ್ರ ಇದ್ದ ಗುರುಕುಲ ಶಿಕ್ಷಣ ಪದ್ಧತಿಯ ಸ್ಫೂರ್ತಿದಾಯಕ ಹಾಗೂ ರೋಮಾಂಚಕವಾದ ಕತೆಗಳನ್ನು ಓದಿದಾಗ ನಿಜಕ್ಕೂ ರೋಮಾಂಚನ ಆಗುತ್ತದೆ.
ಗುರುಕುಲ ಶಿಕ್ಷಣದ ಮಾದರಿಯು ಮುಂದೆ ಬಂದ ಬ್ರಿಟಿಷ್ ಶಿಕ್ಷಣ ಪದ್ಧತಿಗಿಂತ ಎಷ್ಟೋ ಪಾಲು ಮೇಲಿತ್ತು. ಅದನ್ನು ನಾವು ಸಾಂಕೇತಿಕವಾಗಿ ಆದರೂ ಇಂದು ಉಳಿಸಿಕೊಳ್ಳಲೆಬೇಕಿತ್ತು!
ಗುರುವಿಗೆ ಬೇಧ ಭಾವವೇ ಇರಲಿಲ್ಲ. ಕೃಷ್ಣನು ಕಲಿಯುತ್ತಿದ್ದ ಸಾಂದೀಪನಿ ಆಶ್ರಮದಲ್ಲಿ ಅತೀ ಬಡವನಾದ ಕುಚೇಲನೂ ಕಲಿಯುತ್ತಿದ್ದ. ರಾಜ, ಮಂತ್ರಿ, ಸೇನಾಧಿಪತಿ ಎಲ್ಲರೂ ತಮ್ಮ ಮಕ್ಕಳನ್ನು ಉಪನಯನ ಸಂಸ್ಕಾರ ಮಾಡಿ ಏಳು ವರ್ಷ ಗುರುಕುಲಕ್ಕೆ ಕಳುಹಿಸಲೇಬೇಕಾಗಿತ್ತು. ರಾಜ,ಮಹಾರಾಜರ ಮಕ್ಕಳು ಎಂದು ತಲೆಯ ಮೇಲೆ ಹೊತ್ತುಕೊಳ್ಳುವ ದರ್ದು ಗುರುವಿಗೆ ಇರಲಿಲ್ಲ! ಎಲ್ಲ ಶಿಷ್ಯರೂ ದೇಹ ದಂಡನೆಯನ್ನು ಮಾಡಲೇ ಬೇಕಿತ್ತು!
ಗುರುಕುಲ ಅಂದರೆ ಈಗಿನ ‘ಬೋರ್ಡಿಂಗ್ ಸ್ಕೂಲ್’ ಆಗಿರಲಿಲ್ಲ. ವಾರಕ್ಕೊಮ್ಮೆ ಹೋಗಿ ಮಕ್ಕಳನ್ನು ತಬ್ಬಿಕೊಂಡು ಆಳುವ ಪೋಷಕರು ಆಗ ಇರಲಿಲ್ಲ. ಏಳು ವರ್ಷ ಗುರುವೇ ಶಿಷ್ಯರಿಗೆ ಅಪ್ಪ, ಅಮ್ಮ ಎಲ್ಲವೂ ಆಗಿದ್ದ ಕಾಲ ಅದು.
ರಾಜ ಮಹಾರಾಜರ ಮಕ್ಕಳು ಕೂಡ ಪ್ರತಿ ದಿನ ನಗರಕ್ಕೆ ಹೋಗಿ ಭಿಕ್ಷೆಯನ್ನು ಬೇಡಿ ತಮ್ಮ ಮಧ್ಯಾಹ್ನದ ಊಟವನ್ನು ತಾವೇ ಸಂಪಾದನೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಇದರಿಂದ ಅವರ ಇಗೋ ನಾಶ ಆಗುತ್ತಿತ್ತು!
ಆಶ್ರಮದ ಸ್ವಚ್ಛತೆ, ಅಡುಗೆ ಇತ್ಯಾದಿ ಕೆಲಸಗಳನ್ನು ಶಿಷ್ಯರೇ ಮಾಡುತ್ತಿದ್ದರು. ಗುರುಗಳ ಮತ್ತು ಗುರುಪತ್ನಿಯ ಸೇವೆ ಮಾಡುವುದು ಆಗ ಹೆಮ್ಮೆಯ ಸಂಗತಿ ಆಗಿತ್ತು. ಗುರುವಿನ ಪಾದ ಸ್ಪರ್ಶವೇ ರೋಮಾಂಚನ ಕೊಡುತ್ತಿತ್ತು.
ಎಲ್ಲಕ್ಕಿಂತ ಹೆಚ್ಚಾಗಿ ಅಲ್ಲಿ ಸಿಲೆಬಸ್ ಇರಲಿಲ್ಲ. ಗುರುಗಳೇ ಸಿಲೆಬಸ್, ಕರಿಕುಲಮ್ ಎಲ್ಲವೂ ಆಗಿದ್ದರು! ಪಠ್ಯಪುಸ್ತಕದ ಹಂಗು ಇಲ್ಲದ ಅದ್ಭುತ ವ್ಯವಸ್ಥೆ ಅದು. ಗುರುವೇ ರೂಪಿಸಿದ್ದ ವೇಳಾಪಟ್ಟಿ ಅಲ್ಲಿತ್ತು. ಶಿಸ್ತು, ಸಮಯ ಪ್ರಜ್ಞೆ, ಸಂಯಮ, ಕಠಿಣ ಅನುಶಾಸನ, ದುಡಿಮೆ, ಕಾಯಕ ಪ್ರಜ್ಞೆ, ಸಹಕಾರ, ಜೀವನ ಪ್ರೀತಿ, ಮಾನವೀಯ ಮೌಲ್ಯಗಳು, ಸೇವೆಯ ದೀಕ್ಷೆ ಎಲ್ಲವೂ ಅಲ್ಲಿ ಪ್ರಾಕ್ಟಿಕಲ್ ಆಗಿ ದೊರೆಯುತ್ತಿದ್ದವು.
ಶಿಷ್ಯರು ಗುರುಗಳ ಕೃಷಿ ಭೂಮಿಯಲ್ಲಿ ವ್ಯವಸಾಯ, ಕೃಷಿ ಕೆಲಸವನ್ನು ಮಾಡುತ್ತಿದ್ದರು.ತೀರಾ ವೈಜ್ಞಾನಿಕವಾದ ಮಳೆ ನೀರು ಕೊಯ್ಲು, ನೀರು ಇಂಗಿಸುವುದು ಮೊದಲಾದ ಸಂಗತಿಗಳು ಅಲ್ಲಿ ಕಲಿಕೆಯ ಭಾಗ ಆಗಿದ್ದವು!
ಆಶ್ರಮದ ಗುರುಗಳು ತಮ್ಮದೇ ಅದ ಶ್ರೇಷ್ಠ ವಿಧಾನದಲ್ಲಿ ಪರೀಕ್ಷೆಗಳನ್ನು ಮಾಡುತ್ತಿದ್ದರು. ಅಲ್ಲಿ ಲಿಖಿತ ಪರೀಕ್ಷೆಗಳು ಇರಲಿಲ್ಲ. ರಾಂಕಿಂಗ್, ಕೋಡಿಂಗ್, ಗ್ರೇಡಿಂಗ್ ಯಾವುದೂ ಇರಲಿಲ್ಲ. ವಿದ್ಯಾರ್ಥಿಗಳು ತಮ್ಮ ಧಾರಣೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ಕಲಿಯುವ ಮುಕ್ತ ವಾತಾವರಣವು ಅಲ್ಲಿ ಇತ್ತು. ಎಲ್ಲಕ್ಕಿಂತ ಮುಖ್ಯವಾಗಿ ಒತ್ತಡವೇ ಇಲ್ಲದ ಕಲಿಕೆಯು ಅಲ್ಲಿತ್ತು.
ಅತ್ಯಂತ ಪ್ರಶಾಂತವಾದ, ಮಾಲಿನ್ಯವೇ ಇಲ್ಲದ, ಯಾವುದೇ ನೆಗೆಟಿವ್ ಯೋಚನೆ ಇಲ್ಲದ, ತಾರತಮ್ಯದ ಹಂಗು ಇಲ್ಲದ ವಾತಾವರಣದಲ್ಲಿ ಕಲಿಕೆಯು ಅದ್ಭುತವಾಗಿ ನಡೆಯುತ್ತಿತ್ತು.
ಏಳು ವರ್ಷಗಳ ಕಾಲ ಗುರುಕುಲದಲ್ಲಿಯೆ ಇದ್ದು, ಗುರುಗಳ ಸೇವೆ ಮಾಡಿ, ಕಲಿತು ಹೊರಬರುತ್ತಿದ್ದ ಎಲ್ಲ ವಿದ್ಯಾರ್ಥಿಗಳು ಒಳ್ಳೆಯ ರಾಜ, ಒಳ್ಳೆಯ ಮಂತ್ರಿ, ಒಳ್ಳೆಯ ಸೇನಾಧಿಪತಿ, ಒಳ್ಳೆಯ ಕೋಶಾಧಿಕಾರಿ, ಒಳ್ಳೆಯ ಸೈನಿಕರು, ಒಳ್ಳೆಯ ರೈತರು, ಒಳ್ಳೆಯ ವಿಜ್ಞಾನಿಗಳು, ಒಳ್ಳೆಯ ಪರಿಶ್ರಮಿಗಳು, ಒಳ್ಳೆಯ ಪ್ರಜೆಗಳು, ಒಳ್ಳೆಯ ವೈದ್ಯರು, ಒಳ್ಳೆಯ ಗುರು, ಒಳ್ಳೆಯ ಪಂಡಿತರು…. ಎಲ್ಲವೂ ಆಗುತ್ತಿದ್ದರು. ಈ ಖಾತರಿ ಇಂದು ನಾವು ಕಲಿಯುತ್ತಿರುವ ಬ್ರಿಟಿಷ್ ಶಿಕ್ಷಣ ಪದ್ಧತಿಯಲ್ಲಿ ಇದೆಯೇ?
ಅಂತಹ ಮಹಾ ಗುರುಗಳನ್ನು ಮೇಷ್ಟ್ರ ಮಟ್ಟಕ್ಕೆ ಇಳಿಸಿದ ಇಂದಿನ ಶಿಕ್ಷಣ ಪದ್ಧತಿಯ ಬಗ್ಗೆ ತುಂಬಾ ದುಃಖ ಆಗುತ್ತಿದೆ!
ಏನಿದ್ದರೂ ನಮಗೆ ಸುಜ್ಞಾನದ ಬೆಳಕು ನೀಡಿದ ಗುರುವಿಗೆ ತಸ್ಮೈ ಶ್ರೀ ಗುರವೆ ನಮಃ.
ರಾಜೇಂದ್ರ ಭಟ್‌ ಕೆ.

LEAVE A REPLY

Please enter your comment!
Please enter your name here

Most Popular

error: Content is protected !!