ಸಂಪಾದಕೀಯ-ಪುತ್ರ ವ್ಯಾಮೋಹದಿಂದ ಕುರುಡಾದ ಆಧುನಿಕ ಧೃತರಾಷ್ಟ್ರರು

ಮಹಾರಾಷ್ಟ್ರದಲ್ಲಿ ಇತಿಹಾಸ ಮರುಕಳಿಸಲಿದೆಯೇ? ಸದ್ಯದ ರಾಜಕೀಯ ಬೆಳವಣಿಗೆಗಳನ್ನು ಗಮನಿಸುವಾಗ ಹಿಂದೆ ಬಾಳಾ ಠಾಕ್ರೆ ಇದ್ದಾಗ ಶಿವಸೇನೆಯೊಳಗೆ ಸಂಭವಿಸಿದ ಘಟನೆಗಳು ನೆನಪಾಗುತ್ತವೆ. ಭಾಳಾ ಠಾಕ್ರೆಯವರ ಬಿಗಿ ಹಿಡಿತದಲ್ಲಿ ಪಕ್ಷದಲ್ಲಿ ಒಡಕು ಮೂಡಿದ್ದು ಠಾಕ್ರೆಯವರ ಅತಿಯಾದ ಪುತ್ರ ವ್ಯಾಮೋಹದಿಂದ. ಇದೀಗ ಶಿವಸೇನೆಯಲ್ಲಿ ಏಕನಾಥ ಶಿಂಧೆ ಬಂಡೇಳಲು ಕೂಡ ಕಾರಣ ಮುಖ್ಯಮಂತ್ರಿ ಉದ್ಧವ ಠಾಕ್ರೆಯವರ ಕುರುಡು ಪುತ್ರ ಪ್ರೇಮ ಎನ್ನುವ ಮಾತುಗಳು ಮರಾಠಿ ರಾಜ್ಯದ ರಾಜಕೀಯ ಪಡಸಾಲೆಯಿಂದ ಕೇಳಿ ಬರುತ್ತಿದೆ.
ರಾಣೆ ಮಾತ್ರವಲ್ಲ, ಸಹೋದರನ ಮಗನೇ ಆಗಿರುವ ರಾಜ್‌ ಠಾಕ್ರೆ, ಹಿರಿಯ ನಾಯಕ ಸುರೇಶ್‌ ಪ್ರಭು, ಛಗನ್‌ ಭುಜಬಲ್‌ ಅವರಂಥ ಘಟಾನುಘಟಿಗಳು ಶಿವಸೇನೆ ತೊರೆಯಲು ಕೂಡಿ ಇಳಿಗಾಲದಲ್ಲಿ ಬಾಳಾ ಠಾಕ್ರೆಯವರಿಗೆ ಆವರಿಸಿಕೊಂಡ ಕುರುಡು ಪುತ್ರ ವ್ಯಾಮೋಹ ಕಾರಣ. ರಾಜಕೀಯವಾಗಿ ಅಪ್ರಬುದ್ಧರಾಗಿದ್ದ ಉದ್ಧವ್‌ ಠಾಕ್ರೆಯವರನ್ನು ಹೇಗಾದರೂ ಮೇಲೆ ತರಬೇಕೆಂಬ ಹಪಾಹಪಿ ಪಕ್ಷ ಹಲವು ಸಲ ದುರ್ಬಲಗೊಳ್ಳಲು ಕಾರಣವಾಯಿತು. ಅಂದಿನ ತನ್ನ ದೃತರಾಷ್ಟ್ರ ಸ್ವಭಾವಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾದರೂ ಬಾಳಾ ಠಾಕ್ರೆಯವರು ಮಾತ್ರ ತಲೆಕೆಡಿಸಿಕೊಂಡಿರಲಿಲ್ಲ. ಇದೀಗ ಶಿವಸೇನೆಯಲ್ಲಿ ಅದೇ ಪುತ್ರ ವ್ಯಾಮೋಹದ ಇತಿಹಾಸ ಮರುಕಳಿಸುತ್ತಿದೆ.
ಠಾಕ್ರೆ ಕಾಲಾನಂತರ ಶಿವಸೇನೆಯ ಚುಕ್ಕಾಣಿ ಹಿಡಿದ ಉದ್ಧವ ಠಾಕ್ರೆಯವರು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯೂ ಆದರು. ಆದರೆ ಇದಕ್ಕಾಗಿ ಅವರು ಪಕ್ಷದ ಕಠೋರ ಹಿಂದುತ್ವ ನಿಲುವಿಗೆ ತಿಲಾಂಜಲಿಯಿತ್ತು ಶಿವಸೇನೆಯ ಬದ್ಧ ವಿರೋಧಿಗಳಾಗಿದ್ದ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜತೆ ಕೈಜೋಡಿಸಿದ್ದು ಮಾತ್ರ ಈಗಲೂ ನಿಷ್ಠಾವಂತ ಶಿವಸೈನಿಕರಿಗೆ ಒಪ್ಪಿಕೊಳ್ಳಲು ಆಗುತ್ತಿಲ್ಲ. ಇಂಥ ಕೆಲ ನಾಯಕರಲ್ಲಿ ಪ್ರಸ್ತುತ ಬಂಡೆದ್ದಿರುವ ಏಕನಾಥ ಶಿಂಧೆಯವರೂ ಒಬ್ಬರು.
ಬಾಳಾ ಠಾಕ್ರೆಯವರು ಇರುವಾಗಲೇ ಉದ್ಧವ ಪುತ್ರ ಆದಿತ್ಯ ಠಾಕ್ರೆಯ ರಾಜಕೀಯ ಆರಂಗೇಟ್ರಂಗೆ ಮುನ್ನುಡಿ ಬರೆಯಲಾಗಿತ್ತು. ಆದರೆ ಠಾಕ್ರೆ ತೀರಿಕೊಂಡ ಬಳಿಕ ಉದ್ಧವ್‌ಗೆ ಮಗನಿಗೆ ಈಗಲೇ ಪಕ್ಷದಲ್ಲಿ ಗಟ್ಟಿ ನೆಲೆಯೊಂದನನ್ನು ಕಲ್ಪಿಸಬೇಕೆಂಬ ಹಠ ಬಂತು. ಹೀಗಾಗಿ ಹಲವು ಹಿರಿಯ ನಾಯಕರನ್ನು ಬದಿಗೆ ಸರಿಸಿ ಆದಿತ್ಯಗೆ ಉನ್ನತ ಹುದ್ದೆಗಳನ್ನು ನೀಡಲಾಯಿತು. ಇದು ಎಲ್ಲಿಯವರೆಗೆ ಮುಂದುವರಿಯಿತು ಎಂದರೆ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜತೆ ಸೇರಿ ಅನೈತಿಕ ಮೈತ್ರಿಯೊಂದನ್ನು ಮಾಡಿಕೊಂಡು ರಚಿಸಿದ ಸರಕಾರದಲ್ಲಿ ಆದಿತ್ಯನಿಗೆ ಕ್ಯಾಬಿನೆಟ್‌ ದರ್ಜೆಯ ಮಂತ್ರಿ ಪದವಿಯನ್ನು ನೀಡಲಾಯಿತು. ಹೀಗೆ ಅಪ್ಪನ ನೇತೃತ್ವದ ಸರಕಾರದಲ್ಲಿ ಮಗ ಮಂತ್ರಿಯಾದ ಅಪರೂಪದ ಸನ್ನಿವೇಶಕ್ಕೆ ಮಹಾರಾಷ್ಟ್ರದ ʼಮಂತ್ರಾಲಯʼ ಸಾಕ್ಷಿಯಾಯಿತು.
ಇದು ಇಷ್ಟಕ್ಕೆ ಮುಗಿಯಲಿಲ್ಲ, ಸರಕಾರದಲ್ಲಿ ಆದಿತ್ಯ ಯಾವ ಪರಿ ಕೈಯಾಡಿಸತೊಡಗಿದರು ಎಂದರೆ ಎಲ್ಲ ಇಲಾಖೆಗಳಲ್ಲಿ ಅವರು ಮೂಗು ತೂರಿಸಲು ಶುರು ಮಾಡಿದರು.ಶಿವಸೇನೆಗೆ ಮಾಮೂಲು ಕಾರ್ಯಕರ್ತನಾಗಿ ಸೇರಿ ಶಾಖಾ, ಪ್ರಮುಖ, ವಿಭಾಗ ಪ್ರಮುಖದಂಥ ಹುದ್ದೆಗಳನ್ನು ನಿಭಾಯಿಸುತ್ತಾ ಹಂತಹಂತವಾಗಿ ಪಕ್ಷದಲ್ಲಿ ಮೇಲೇರಿ ಸಚಿವರಾದಂಥ ಏಕನಾಥ ಶಿಂಧೆ ಹಾಗೂ ಅವರಂಥ ಹಲವು ಹಿರಿಯರಿಗೆ ಎಳಸು ಆದಿತ್ಯ ಠಾಕ್ರೆಯ ಎಲ್ಲದರಲ್ಲೂ ಮೂಗು ತೂರಿಸುವ ಅಭ್ಯಾಸ ಕಿರಿಕರಿಯಾಗತೊಡಗಿತು.ಹುಡುಗುತನದ ಆದಿತ್ಯ ಹಲವು ಪ್ರಕರಣಗಳಲ್ಲಿ ಸಿಲುಕಿ ಹಾಕಿಕೊಂಡು ಸರಕಾರದ ಹೆಸರು ಕೆಡಿಸುತ್ತಿರುವುದನ್ನು ನೋಡಿ ಇಂಥ ನಾಯಕರು ಅಸಹನೆ ವ್ಯಕ್ತಪಡಿಸತೊಡಗಿದರು. ಈ ಕುರಿತು ಹಲವು ದೂರುಗಳು ಬಂದರೂ ಉದ್ಧವ ಠಾಕ್ರೆ ಮಗನನ್ನು ಹದ್ದುಬಸ್ತನಲ್ಲಿಡಲು ಪ್ರಯತ್ನಿಸಲಿಲ್ಲ. ಅದರ ಪರಿಣಾಮವೇ ಈಗ ಕಾಣಿಸಿಕೊಂಡಿರುವ ಬಂಡಾಯ.
ಹಿಂದೆ ರಾಣೆ ಮತ್ತಿತರರು ಬಂಡೆದ್ದಾಗ ಅದನ್ನು ನಿಭಾಯಿಸುವ ಛಾತಿ ಬಾಳಾ ಠಾಕ್ರೆಯವರಿಗಿತ್ತು. ಆಕಾಶವೇ ಕಳಚಿ ಬಿದ್ದರೂ ಜತೆಗೆ ನಿಲ್ಲುವ ಒಂದಷ್ಟು ನಿಷ್ಠಾವಂತ ಕಾರ್ಯಕರ್ತರ ಮತ್ತು ಮುಖಂಡರ ಪಡೆ ಅವರ ಜತೆಗಿತ್ತು. ಆದರೆ ಉದ್ಧವ ಠಾಕ್ರೆ ವಿಚಾರದಲ್ಲಿ ಈ ಮಾತನ್ನು ಹೇಳುವಂತಿಲ್ಲ. ಅವರು ಸಿದ್ಧಾಂತಕ್ಕೆ ಬದ್ಧ ವಿರೋಧಿಯಾಗಿರುವ ಹಾಗೂ ಜೀವಮಾನವಿಡೀ ಬಾಳಾ ಠಾಕ್ರೆಯವರು ವಿರೋಧಿಸುತ್ತಾ ಬಂದಿದ್ದ ಕಾಂಗ್ರೆಸ್‌ ಜತೆ ಅಧಿಕಾರಕ್ಕಾಗಿ ಕೈಜೋಡಿಸಿದಾಗಲೇ ಅವರು ರಾಜಕೀಯ ದೂರದೃಷ್ಟಿ ಎಷ್ಟು ದುರ್ಬಲ ಎಂಬುದು ಹೆಚ್ಚಿನವರಿಗೆ ಅರ್ಥವಾಗಿದೆ. ಈಗ ಅವರ ಜತೆಗಿರುವವರು ಒಂದಷ್ಟು ಭಟ್ಟಂಗಿಗಳು ಮತ್ತು ಅಧಿಕಾರ ಲಾಲಸಿಗಳು ಮಾತ್ರ ಎನ್ನುವುದನ್ನು ನಿಷ್ಠಾವಂತ ಶಿವಸೈನಿಕರು ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಹೀಗಾಗಿ ಉದ್ಧವ ಮುಂದಿನ ಹಾದಿ ಬಹಳ ಕಠಿಣವಿದೆ.ಪುತ್ರ ವ್ಯಾಮೋಹದಿಂದ ಕುರುಡಾದ ನಾಯಕರು ಮುಂದೆ ರಾಜಕೀಯವಾಗಿ ಅಪ್ರಸ್ತುತರಾದ ಹತ್ತಾರು ಉದಾಹರಣೆಗಳು ಕಣ್ಣ ಮುಂದಿದ್ದರೂ ಉದ್ಧವ ಕಣ್ಣು ತೆರೆಸುವವರು ಪಕ್ಷದಲ್ಲಿ ಇಲ್ಲ ಎನ್ನುವುದು ಶಿವಸೇನೆಯ ದುರಂತ.









































































































































































error: Content is protected !!
Scroll to Top