ಮೇರೆ ಪಾಸ್ ಮಾ ಹೈ

1970ರ ದಶಕದ ಅತ್ಯಂತ ಜನಪ್ರಿಯವಾದ ಹಿಂದೀ ಸಿನೆಮಾ ದೀವಾರ್. ಅದರ ಒಂದು ದೃಶ್ಯ ಎಷ್ಟು ವರ್ಷ ಆದರೂ ಮರೆತು ಹೋಗುವುದಿಲ್ಲ. ಅಣ್ಣ ಅಮಿತಾಬ್ ಬಚ್ಚನ್ ಸಣ್ಣ ಪ್ರಾಯದಲ್ಲಿ ತನ್ನ ಸಂಸಾರದ ಹೊಣೆ ಹೊತ್ತುಕೊಂಡು ಅನಿವಾರ್ಯ ಸನ್ನಿವೇಶಗಳಿಂದ ಒಬ್ಬ ಡಾನ್ ಆಗಿ ಪರಿವರ್ತನೆ ಆಗುತ್ತಾನೆ. ಅವನ ತಮ್ಮ ಶಶಿಕಪೂರ್ ಅಣ್ಣನ ಕೃಪೆಯಿಂದ ಕಷ್ಟ ಪಟ್ಟು ಓದಿ ಒಬ್ಬ ಪೊಲೀಸ್ ಇನ್ಸಪೆಕ್ಟರ್ ಆಗುತ್ತಾನೆ. ತಮ್ಮನಿಗೆ ಒಂದು ಹಂತದಲ್ಲಿ ಅಣ್ಣನ ನಿಗೂಢ ಕಾರಸ್ತಾನಗಳು ಗಮನಕ್ಕೆ ಬರುತ್ತವೆ. ಅಣ್ಣ ಅಡ್ದ ದಾರಿ ಹಿಡಿದಿರುವುದನ್ನು ತಮ್ಮ ಆಕ್ಷೇಪಿಸುತ್ತಾನೆ. ಆಗ ಅಣ್ಣ ಸಿಟ್ಟಿನಲ್ಲಿ ನನ್ನ ಹತ್ತಿರ ದೊಡ್ಡ ಬಂಗಲೆ ಇದೆ. ಬ್ಯಾಂಕ್ ಬ್ಯಾಲೆನ್ಸ್ ಇದೆ. ಕಾರ್ ಇದೆ. ನಿನ್ನ ಹತ್ತಿರ ಏನಿದೆ? ಎನ್ನುತ್ತಾನೆ. ಆಗ ಇಡೀ ಥಿಯೇಟರಿನಲ್ಲಿ ಒಂದು ಅರ್ಥಗರ್ಭಿತ ಮೌನವನ್ನು ನಿರ್ದೇಶಕರು ಉಂಟು ಮಾಡುತ್ತಾರೆ. ತಮ್ಮ ಒಂದು ಸುದೀರ್ಘ ಉಸಿರು ಎಳೆದುಕೊಂಡು ಅಣ್ಣನ ಕಣ್ಣಲ್ಲಿ ಕಣ್ಣಿಟ್ಟು ಹೇಳುವ ಡೈಲಾಗ್ – ಮೇರೆ ಪಾಸ್ ಮಾ ಹೈ!
ಈ ಸಂಭಾಷಣೆ ಬರೆದ ಸಲೀಂ ಜಾವೇದ್ ಇಂದು ನಮ್ಮ ಜೊತೆಗೆ ಇಲ್ಲ. ಆದರೆ ಆ ಡೈಲಾಗ್ ಮಾತ್ರ ಇಂದಿಗೂ ಅಮರತ್ವ ಪಡೆದಿದೆ. ಭಾರತದಲ್ಲಿ ಎಷ್ಟು ಶತಮಾನ ಕಳೆದರೂ ಅಮ್ಮನ ಬಗ್ಗೆ ಇರುವ ಪ್ರೀತಿ, ಭಾವುಕತೆ, ಅಕ್ಕರೆ ಕಡಿಮೆ ಆಗುವುದೇ ಇಲ್ಲ. ಪ್ರತೀ ಒಬ್ಬರ ಭಾವಕೋಶದಲ್ಲಿ ರಿಜಿಸ್ಟರ್ ಆಗುವ ಮೊದಲ ಹೆಸರೇ ಅಮ್ಮ ಮತ್ತು ಅಮ್ಮ ಮಾತ್ರ. ಅಮ್ಮನ ಬಗ್ಗೆ ರವಿಶಂಕರ್ ಗುರೂಜಿ ಹೇಳಿದ ಒಂದು ಅಕ್ಕರೆಯ ಕತೆ ನಾನು ಇಲ್ಲಿ ಉಲ್ಲೇಖ ಮಾಡಬೇಕು. ಒಬ್ಬಳು ತಾಯಿಗೆ ಒಬ್ಬನೇ ಪ್ರೀತಿಯ ಮಗನಿದ್ದ. ಅವನು ಪ್ರಾಯಕ್ಕೆ ಬಂದಾಗ ಒಂದು ಹುಡುಗಿಯನ್ನು ಪ್ರೀತಿ ಮಾಡುತ್ತಾನೆ. ಅವಳ ಬಳಿ ಹೋಗಿ ತನ್ನ ಪ್ರೀತಿಯನ್ನು ನಿವೇದನೆ ಮಾಡುತ್ತಾನೆ. ಅವಳು ದುರಹಂಕಾರದ ಹುಡುಗಿ. ಅವಳು ಮದುವೆ ಆಗಲು ಒಂದು ಶರ್ತ ಮುಂದೆ ಇಡುತ್ತಾಳೆ. ನಿನ್ನನ್ನು ಮದುವೆ ಆಗಬೇಕಾದರೆ ನಿನ್ನ ಅಮ್ಮನ ಜೀವಂತವಾದ ಹೃದಯ ತಂದು ಕೊಡು! ಹುಡುಗ ಈಗ ದ್ವಂದ್ವಕ್ಕೆ ಒಳಗಾಗುತ್ತಾನೆ. ಒಂದು ಕಡೆ ಅವಳನ್ನು ಮರೆಯಲು ಆಗುತ್ತಿಲ್ಲ. ಇನ್ನೊಂದು ಕಡೆ ಪ್ರೀತಿಯ ಅಮ್ಮನನ್ನು ಕಳೆದುಕೊಳ್ಳಲು ಇಷ್ಟ ಇಲ್ಲ. ಮನೆಗೆ ಬಂದು ಬಾಗಿಲು ಹಾಕಿಕೊಂಡು ಅಳುತ್ತಾನೆ. ಎಷ್ಟು ಕರೆದರೂ ಊಟ ತಿಂಡಿಗೆ ಹೊರಗೆ ಬರುವುದಿಲ್ಲ. ಮಗನಲ್ಲಿ ಆಗಿರುವ ಸೂಕ್ಷ್ಮಬದಲಾವಣೆಯನ್ನು ಅಮ್ಮ ಗಮನಿಸಿ ಏನಾಯ್ತು ಎಂದು ಕೇಳುತ್ತಾರೆ. ಮಗ ಬಾಯಿ ಬಿಡುವುದಿಲ್ಲ. ಈಗ ಅಮ್ಮ ಆಣೆ ಪ್ರಮಾಣದ ಮೊರೆ ಹೋಗುತ್ತಾರೆ. ಈಗ ಹುಡುಗ ನಿಧಾನವಾಗಿ ಬಾಯಿ ಬಿಡುತ್ತಾನೆ. ತುಂಬಾ ಪ್ರೀತಿಯ ಅಮ್ಮ ತಕ್ಷಣ ಅವನ ಕಣ್ಣೀರು ಒರೆಸಿ “ಅಷ್ಟೇನಾ ಮಗಾ? ಅದಕ್ಕೆ ಯಾಕೆ ಇಷ್ಟೊಂದು ಅಳುತ್ತೀಯಾ? ನಾನು ಬದುಕಿ ಇನ್ನು ಏನಾಗಬೇಕು? ನಿನ್ನ ಸಂತೋಷವೇ ನನಗೆ ಮುಖ್ಯ” ಎಂದು ತನ್ನ ಹೃದಯವನ್ನು ಕಿತ್ತು ಅವನ ಕೈಯ್ಯಲ್ಲಿ ಇಡುತ್ತಾರೆ ಮತ್ತು ಸಂತೋಷದಲ್ಲಿ ಕಣ್ಣು ಮುಚ್ಚುತ್ತಾರೆ. ಹುಡುಗಿಯ ಪ್ರೀತಿಯಲ್ಲಿ ಮೈ ಮರೆತಿದ್ದ ಮಗ ಅಮ್ಮನ ತ್ಯಾಗದ ಬಗ್ಗೆ ಯೋಚನೆ ಮಾಡದೆ ಅಮ್ಮನ ಜೀವಂತ ಹೃದಯವನ್ನು ಕೈಯ್ಯಲ್ಲಿ ಹಿಡಿದು ಹುಡುಗಿಯ ಕಡೆಗೆ ಧಾವಿಸುತ್ತಾನೆ. ದಾರಿಯಲ್ಲಿ ಒಂದು ಕಲ್ಲು ತಾಗಿ ನೆಲಕ್ಕೆ ಬೀಳುತ್ತಾನೆ. ಅಮ್ಮನ ಹೃದಯ ನೆಲಕ್ಕೆ ಬಿದ್ದು ಚೂರು ಚೂರಾಗುತ್ತದೆ. ಹುಡುಗ ನೆಲಕ್ಕೆ ಬಿದ್ದವ ಆ ಹೃದಯದ ಚೂರುಗಳ ಧ್ವನಿಗೆ ಕಿವಿ ಕೊಡುತ್ತಾನೆ. ಆ ಪ್ರತೀ ಒಂದು ಚೂರು ಕೂಡ ತುಂಬಾ ಪ್ರೀತಿಯಿಂದ ಹೇಳುತ್ತಿತ್ತು – ನಿನಗೆ ನೋವಾಯ್ತಾ ಮಗಾ! ನೋವಾಯ್ತಾ ಮಗಾ!
ಜಗತ್ತಿನ ಎಲ್ಲಾ ಪ್ರೀತಿ ಮಾಡುವ ಅಮ್ಮಂದಿರಿಗೆ ಇಂದಿನ ಸಂಚಿಕೆ ಅರ್ಪಣೆ. ಹಾಗೆಯೇ ಅಮ್ಮನನ್ನು ತುಂಬಾ ಭಾವನಾತ್ಮಕ ಆಗಿ ಪ್ರೀತಿ ಮಾಡುತ್ತಿರುವ ಹಾಗೂ ಅಮ್ಮನ ಋಣವನ್ನು ತೀರಿಸಲು ತಾನೇನು ಮಾಡಲು ಸಾಧ್ಯ ಎಂದು ಯೋಚನೆ ಮಾಡುತ್ತಿರುವ ಮಕ್ಕಳಿಗೆ ಕೂಡ! ಎಲ್ಲರಿಗೂ ಅಮ್ಮನ ದಿನದ ಶುಭಾಶಯಗಳು.





























































































error: Content is protected !!
Scroll to Top