ಪ್ರಮೋದ್ ಮಧ್ವರಾಜ್ ಬಿಜೆಪಿಗೆ ?

ಇವತ್ತು ಬಂದಿರೋ ನ್ಯೂಸ್ ಪ್ರಕಾರ ಮಾಜಿ ಸಚಿವ, ಉಡುಪಿಯ ಪ್ರಮೋದ್ ಮಧ್ವರಾಜ್ ಬಿಜೆಪಿ ಪಕ್ಷಕ್ಕೆ ಸೇರುವ ಬಗ್ಗೆ ಬಿಜೆಪಿಯ ಹೈಕಮಾಂಡ್ ಒಪ್ಪಿಗೆ ಕೊಟ್ಟಿದೆ ಎನ್ನಲಾಗಿದೆ. ಅಲ್ಲಿಗೆ ಕರಾವಳಿಯ ಬಲಿಷ್ಠ ಕಾಂಗ್ರೆಸ್ ನಾಯಕರೊಬ್ಬರು ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಪಕ್ಷಾಂತರ ಮಾಡುವುದು ಖಚಿತ ಎನ್ನಲಾಗಿದೆ.

ಇದೇನು ಶಾಕಿಂಗ್ ನ್ಯೂಸ್ ಅಲ್ಲ ! ಸುಮಾರು ತಿಂಗಳಿಂದ ಪ್ರಮೋದ್ ಅವರ ನಡೆಗಳನ್ನು ನೋಡುತ್ತಾ ಬಂದವರಿಗೆ ಅವರು ಬಿಜೆಪಿಯ ಕಡೆಗೆ ವಾಲುತ್ತಿರುವುದು ದೊಡ್ಡ ಸಂಗತಿಯಲ್ಲ.

ಇತ್ತೀಚೆಗೆ ಉಡುಪಿ ರಾಜಾಂಗಣದ ಒಂದು ಮುಖ್ಯ ಕಾರ್ಯಕ್ರಮದಲ್ಲಿ ಅವರು ಪದ್ಮಭೂಷಣ ಪ್ರಶಸ್ತಿಗಳಿಗೆ ಮೌಲ್ಯ ತಂದು ಕೊಟ್ಟ ಬಗ್ಗೆ ಮೋದಿಯವರನ್ನು ಮುಕ್ತವಾಗಿ ಶ್ಲಾಘನೆ ಮಾಡಿದ್ದರು. ಅದೇ ರೀತಿ ಹಲವು ಕಾರ್ಯಕ್ರಮಗಳಲ್ಲಿ ಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿಕೆಗಳನ್ನು ಕೊಡುತ್ತ ಬಂದಿದ್ದರು. ಬಿಜೆಪಿಗೆ ಸೇರುತ್ತೀರಾ ? ಎಂಬ ಪತ್ರಕರ್ತರ ಪ್ರಶ್ನೆಗೆ ಸಮರ್ಪಕವಾಗಿ ಯಾವೊಂದು ಉತ್ತರವನ್ನು ನೀಡುತ್ತಿರಲಿಲ್ಲ.

ಪಕ್ಷ ತೊರೆಯಲು ಕಾರಣ
ಸಿದ್ದರಾಮಯ್ಯ ಕ್ಯಾಬಿನೆಟ್‌ನಲ್ಲಿ ಯುವಜನ ಸೇವೆ, ಕ್ರೀಡಾ ಇಲಾಖೆ ಹಾಗೂ ಮೀನುಗಾರಿಕಾ ಇಲಾಖೆಯನ್ನು ಉತ್ತಮವಾಗಿ ನಿಭಾಯಿಸಿದ್ದರು. ರಾಜ್ಯಮಟ್ಟದ ಪತ್ರಿಕೆಯೊಂದು ನಡೆಸಿದ ಸಮೀಕ್ಷೆಯೊಂದರಲ್ಲಿ ಅತ್ಯುತ್ತಮ ಶಾಸಕ ಎಂಬ ಹಿರಿಮೆಗೂ ಅವರು ಪಾತ್ರರಾಗಿದ್ದರು. ಜನ ಸಂಪರ್ಕ, ಅನುದಾನ, ವರ್ಚಸ್ಸು ಯಾವುದರಲ್ಲಿ ಕೂಡ ಅವರು ಕಡಿಮೆ ಇರಲಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ಅವರು ಮತ್ತೆ ಸ್ಪರ್ಧೆ ಮಾಡಿದಾಗ ಅವರ ನಾಮಪತ್ರ ಸಲ್ಲಿಸುವ ಕಾರ್ಯಕ್ರಮಕ್ಕೆ ದಾಖಲೆ ಸಂಖ್ಯೆಯ ಜನ ಸೇರಿದ್ದರು. ಆದರೆ ಚುನಾವಣೆಗೆ ಕೆಲವೇ ದಿನ ಬಾಕಿಯಿರುವಾಗ ಪ್ರಧಾನಿ ಮೋದಿ ಉಡುಪಿಗೆ ಬಂದರು. ಅತೀ ದೊಡ್ಡ ರಾಲಿ ನಡೆಯಿತು. ಅಲ್ಲಿಗೆ ಹಿಂದುತ್ವದ ಮತಗಳ ಧ್ರುವೀಕರಣವಾಯ್ತು. ರಘುಪತಿ ಭಟ್ ಗೆದ್ದರು. ಪ್ರಮೋದ್ ಮಧ್ವರಾಜ್ ಆ ಸೋಲನ್ನು ನಿರೀಕ್ಷೆ ಮಾಡಿರಲಿಲ್ಲ. ನಂಬಿಕೆ ಇಟ್ಟ ಕಾರ್ಯಕರ್ತರೇ ಕೈ ಕೊಟ್ಟರು ಎಂದು ಪ್ರಮೋದ್ ತುಂಬಾ ಬಾರಿ ಆತ್ಮೀಯರಲ್ಲಿ ನೋವನ್ನು ತೋಡಿಕೊಂಡಿದ್ದರು. ಅಲ್ಲಿಗೆ ಭಾವನಾತ್ಮಕವಾಗಿ ಪಕ್ಷದಿಂದ ಹೊರಬರುವ ಬಗ್ಗೆ ಅವರು ಆಗಲೇ ಯೋಚನೆ ಮಾಡಿದ್ದರು ಎನ್ನಲಾಗುತ್ತಿದೆ.

ಲೋಕಸಭೆ ಚುನಾವಣೆಯಲ್ಲಿ ಮತ್ತೆ ಸೋಲು
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅವರು ಭ್ರಮನಿರಸನಗೊಂಡು ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಬೇಕಾಯಿತು. ಪ್ರಮೋದ್ ತಾನು ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ಅಭ್ಯರ್ಥಿ ಎಂದು ಹೇಳಿಕೊಂಡು ಮತಯಾಚನೆ ಮಾಡಿದ್ದರು. ಎರಡೂ ಪಕ್ಷಗಳ ಚಿಹ್ನೆಯಿರುವ ಶಾಲು ಧರಿಸಿಕೊಂಡು ಕ್ಷೇತ್ರದ ಉದ್ದಗಲ ಓಡಾಡಿದ್ದರು. ಆಗಲೂ ಸೋಲು ಅನುಭವಿಸಿದರು. ಶೋಭಾ ಕರಂದ್ಲಾಜೆ ಗೆದ್ದರು. ಈ ಸೋಲು ಕೂಡ ಅರಗಿಸಿಕೊಳ್ಳಲು ಅವರಿಂದ ಕಷ್ಟವಾಯಿತು. ಅಲ್ಲಿಂದ ಅವರು ನಿಧಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಮಾನಸಿಕವಾಗಿ ಹೊರಬರಲು ಯೋಚನೆ ಮಾಡುತ್ತಿದ್ದರು ಎನ್ನಲಾಗುತ್ತಿದೆ.

ಬಿಜೆಪಿಯಲ್ಲಿ ಏನು ಸ್ಥಾನಮಾನ ?
ಬಿಜೆಪಿ ಪಕ್ಷದಲ್ಲಿ ಹೊರಗಿನಿಂದ ಬಂದವರನ್ನು ಸಂಶಯದಿಂದ ನೋಡುವ ಪ್ರವೃತ್ತಿ ಹಿಂದಿನಿಂದ ಇದೆ. 2000-2004ರ ಅವಧಿಯಲ್ಲಿ ಬಿಜೆಪಿಯಿಂದ ಲೋಕಸಭೆಗೆ ಆಯ್ಕೆ ಆಗಿದ್ದ ಪ್ರಮೋದ್ ಅವರ ತಾಯಿ ಮನೋರಮಾ ಅವರು ನಿರ್ಣಾಯಕ ವಿಶ್ವಾಸ ಮತದಲ್ಲಿ ಬಿಜೆಪಿಗೆ ವಿರುದ್ಧವಾಗಿ ಮತ ಚಲಾವಣೆ ಮಾಡಿದ್ದನ್ನು ಬಿಜೆಪಿ ಪಕ್ಷದವರು ಯಾವಾಗಲೂ ಮರೆಯಲು ಸಾ‍ಧ್ಯವಿಲ್ಲ. ಇನ್ನು ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ರಘುಪತಿ ಭಟ್ ಸ್ಪರ್ಧೆ ಮಾಡದಿರುವ ಪ್ರಶ್ನೆ ಖಂಡಿತ ಇಲ್ಲ. ಹಾಗಿರುವಾಗ ಪ್ರಮೋದರಿಗೆ ಬಿಜೆಪಿಯಲ್ಲಿ ಯಾವ ಸ್ಥಾನಮಾನ ದೊರೆಯಲಿದೆ ಎನ್ನುವ ಲೆಕ್ಕಾಚಾರ ನಡೆಯುತ್ತಿದೆ.
ರಾಯಲ್ ಕುಟುಂಬದಿಂದ ಬಂದ ಪ್ರಮೋದ್ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯಲು ಸಾಧ್ಯವೇ ಇಲ್ಲ. ವಿಧಾನ ಪರಿಷತ್ ಚುನಾವಣೆ ಸದ್ಯಕ್ಕಿಲ್ಲ. ಬಿಜೆಪಿ ಹೈಕಮಾಂಡ್‌ ಪ್ರಮೋದ್ ಅವರಿಗೆ ಏನು ಭರವಸೆ ಕೊಟ್ಟಿದ್ದಾರೆ, ಅಥವಾ ಪ್ರಮೋದ್ ಯಾವ ಶರತ್ತು ಬಿಜೆಪಿಯ ಹೈಕಮಾಂಡ್ ಮುಂದೆ ಇಟ್ಟಿದ್ದಾರೆ ಎನ್ನುವುದು ಬಹಿರಂಗವಾಗಿಲ್ಲ. ಉಡುಪಿ ಜಿಲ್ಲ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್‌ ಅವರು ಎಲ್ಲವನ್ನೂ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದೇವೆ ಅಂತ ಹೇಳಿದ್ದಾರೆ.

ಕಾಂಗ್ರೆಸ್‌ ನಲ್ಲಿ ಮೂಲೆಗುಂಪು ಆಗ್ತಿರುವ ಪ್ರಮೋದ್‌ ಮಧ್ವರಾಜ್ ಅವರು ಬಿಜೆಪಿಯಲ್ಲಿ ತನ್ನನ್ನು ಹೇಗೆ ತೊಡಗಿಸಿಕೊಳ್ಳಲಿದ್ದಾರೆ ? ಬಿಜೆಪಿಯಲ್ಲಿ ಆಯಕಟ್ಟಿನ ಸ್ಥಾನ ಪಡೆಯುತ್ತಾರಾ ? ಅಥವಾ ಕಾಂಗ್ರೆಸ್ ನಾಯಕರು ಪ್ರಮೋದ್‌ ಅವರನ್ನು ಸಮಾಧಾನಪಡಿಸಿ ಪಕ್ಷದಲ್ಲಿಯೇ ಉಳಿಸಿಕೊಳ್ಳುತ್ತಾರಾ ? ಕಾದು ನೋಡಬೇಕು.





































































error: Content is protected !!
Scroll to Top