ಕಾರ್ಕಳ : ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ಇಡೀ ರಾಜ್ಯದ ಜನರಿಗೆ ಹಿಜಾಬ್ ಹಾಕಿಸುತ್ತಾರೆ ಎಂಬ ಸಚಿವ ಸುನೀಲ್ ಕುಮಾರ್ ಹೇಳಿಕೆ ಖಂಡನೀಯ. ಕಾಂಗ್ರೇಸ್ ತನ್ನ 70 ವರ್ಷದ ಆಡಳಿತದಲ್ಲಿ ಅವರ ಮನೆಯ ಎಷ್ಟು ಹೆಣ್ಣು ಮಕ್ಕಳಿಗೆ ಹಿಜಾಬ್ ಹಾಕಿಸಿದೆ ಎಂದು ಸ್ಪಷ್ಟ ಪಡಿಸಬೇಕು ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದ ರಾವ್ ಸವಾಲು ಹಾಕಿದರು.
ಕ್ಷಮೆಯಾಚಿಸಿ
ಹಿಜಾಬ್ ಒಂದು ಧಾರ್ಮಿಕ ಆಚರಣೆ. ಅದು ಅವರ ವೈಯಕ್ತಿಕ ವಿಷಯ. ಅದನ್ನು ನಿಮ್ಮ ರಾಜಕೀಯ ಲಾಭಕ್ಕಾಗಿ ಬಳಸಿದ್ದು ದುರಾದೃಷ್ಟ. ಹಿಜಾಬ್ ಧರಿಸಿ ಶಾಲೆಗೆ ಹೋಗುವ ಕೆಲವೇ ಕೆಲವು ಮಕ್ಕಳನ್ನು ಗುರಿಯಾಗಿಸಿ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಿದ್ದೀರಿ. ಇದರ ಫಲವಾಗಿ ಮಕ್ಕಳು ತರಗತಿಗಳಿಲ್ಲದೇ ಮನೆಯಲ್ಲಿಯೇ ಉಳಿದು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಹಿಜಾಬ್ ವಿಷಯವಾಗಿ ನ್ಯಾಯಕ್ಕಾಗಿ ವಿದ್ಯಾರ್ಥಿಗಳು ಹೈಕೊರ್ಟ್ ಮೊರೆ ಹೋದಾಗ ಅವರನ್ನು ಹೀಯಾಳಿಸಿ ಅವರಿಗೆ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಿರಿ. ಹಾಗಾದರೆ ಬಡವರು ನ್ಯಾಯ ಕೇಳುವುದು ತಪ್ಪೆ ? ನಿಮ್ಮ ಮೇಲೆಯೇ ಆರೋಪ ಬಂದಾಗ ಮಾಧ್ಯಮಗಳ ಮೇಲೆ ನಿರ್ಬಂಧಕ್ಕೆ ತಾವೂ ಕೊರ್ಟ್ ಮೆಟ್ಟಿಲು ಹತ್ತಲ್ಲಿಲವೇ ? ಜವಾಬ್ದಾರಿ ಸ್ಥಾನದಲ್ಲಿರುವ ತಾವು ಹೇಳಿಕೆಯನ್ನು ನೀಡುವಾಗ ಇನ್ನಾದರೂ ಎಚ್ಚರ ವಹಿಸಿ ಎಂದು ಶುಭದ ರಾವ್ ಪ್ರಕಟನೆಯಲ್ಲಿ ತಿಳಿಸಿದರು.