ಕಾರ್ಕಳ : ಹಿಜಾಬ್ ವಿವಾದ ಮಧ್ಯೆ ಸೋಮವಾರ ಪ್ರೌಢಶಾಲೆ ಹಾಗೂ ಕಾಲೇಜು ಪುನರಾರಂಭಕ್ಕೆ ಸರಕಾರ ಆದೇಶ ನೀಡಿದ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಲ್ಪಿಸುವ, ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಸಲುವಾಗಿ ಶುಕ್ರವಾರ ಕಾರ್ಕಳ ಪೇಟೆಯಲ್ಲಿ ಪೊಲೀಸರು ರೂಟ್ ಮಾರ್ಚ್ ನಡೆಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯಂತೆ ಕಾರ್ಕಳ ಡಿವೈಎಸ್‌ಪಿ ವಿಜಯ ಪ್ರಸಾದ್ ನೇತೃತ್ವದಲ್ಲಿ ಕಾರ್ಕಳ ಅನಂತಶಯನದಿಂದ ಜೋಡುರಸ್ತೆವರೆಗೆ ಪಥಸಂಚಲನ ನಡೆಯಿತು. ವೃತ್ತ ನಿರೀಕ್ಷಕ ಸಂಪತ್ ಕುಮಾರ್, ಕಾರ್ಕಳ ನಗರ ಠಾಣೆ ಎಸ್‌ಐ ಪ್ರಸನ್ನ ಎಂ.ಎಸ್., ಗ್ರಾಮಾಂತರ ಠಾಣೆ ಎಸ್‌ಐ ತೇಜಸ್ವಿ, ಅಜೆಕಾರು ಎಸ್‌ಐ ಸುದರ್ಶನ್, ಹೆಬ್ರಿ ಎಸ್‌ಐ ಮಹೇಶ್, ನಗರ ಠಾಣೆ ಅಪರಾಧ ವಿಭಾಗದ ಎಸ್‌ಐ ದಾಮೋದರ್ ಸೇರಿದಂತೆ ಸುಮಾರು 80 ಮಂದಿ ಪೊಲೀಸರು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.









































