ಆರೋಗ್ಯಧಾರ – ಮನೆಯಲ್ಲಿ ಬೆಳೆಸಬಹುದಾದ ಔಷಧಿ ಸಸ್ಯಗಳು

ಮನೆಯಲ್ಲಿ ಚಿಕ್ಕ ಅಂಗಳವಿದ್ದಲ್ಲಿ ಸಸ್ಯಗಳನ್ನು ನೆಟ್ಟರೆ ಆ ಮನೆಯ ಸೊಬಗು ಹೆಚ್ಚುವುದಲ್ಲದೆ ನಮ್ಮ ಮನಸ್ಸಿಗೆ ಮುದ ಕೂಡ ನೀಡುತ್ತದೆ. ನಮ್ಮ ಆರೋಗ್ಯವೂ ಸುಧಾರಿಸುತ್ತದೆ. ನಾವು ಪರಿಸರದಲ್ಲಿ ಕಾಲ ಕಳೆದಷ್ಟೂ ಸ್ವಸ್ಥದಿಂದ ಇರುತ್ತೇವೆ. ಮನೆಯಂಗಳದಲ್ಲಿ ಹೂವಿನ ಗಿಡಗಳು ಹಸಿರು ಗಿಡಮರಗಳು ಕಣ್ಣಿನ ಆರೋಗ್ಯಕ್ಕೆ ಮನಸ್ಸಿನ ಆರೈಕೆಗೆ ಸಹಾಯಕಾರಿ. ಅಂಗಳವಿಲ್ಲದಿದ್ದರೆ ಚಿಕ್ಕಚಿಕ್ಕ ಕುಂಡಗಳಲ್ಲಿ ಗಿಡಗಳನ್ನು ಬೆಳೆಸಬಹುದು. ಮನೆಯಲ್ಲಿ ಸುಲಭವಾಗಿ ಬೆಳೆಯಬಹುದಾದ ಔಷಧ ಸಸ್ಯಗಳ ಬಗ್ಗೆ ತಿಳಿದುಕೊಳ್ಳೋಣ.


ಅಲೋವೆರಾ – ಚಿಕ್ಕದೊಂದು ಅಲೋವೆರಾ ಗಿಡ ನೆಟ್ಟರೆ ಸಾಕು ಮುಂದೆ ಅದು ಬೆಳೆದು ಅದರಿಂದ ಚಿಕ್ಕ ಚಿಕ್ಕ ಸಸಿಗಳನ್ನು ಪಡೆಯಬಹುದು. ಅಲೋವೆರಾ ರಸವನ್ನು ಗಾಯ, ಒಣ ಚರ್ಮ ಇನ್ನಿತರ ತ್ವಚೆಯ ಎಲ್ಲಾ ಸಮಸ್ಯೆಗಳಿಗೆ ಹಾಗೂ ಕೂದಲಿನ ಸಮಸ್ಯೆಗಳಿಗೆ ಬಳಸುತ್ತಾರೆ. ಬಾಹ್ಯ ಹಾಗೂ ಆಂತರಿಕ ಸಮಸ್ಯೆಗಳಿಗೂ ಕೂಡ ಸಹಾಯಕವಾಗಿದೆ. ಇದೊಂದು ಅತ್ಯುಪಯೋಗಿ ಸಸ್ಯ. ಎಲ್ಲ ಕಾಲದಲ್ಲಿ ಎಲ್ಲೆಡೆ ಬೆಳೆಯುವಂತಹ ಸಸ್ಯವಿದು.


ತುಳಸಿ ಗಿಡ -ಎಲ್ಲರ ಮನೆಯಲ್ಲಿ ತುಳಸಿ ಗಿಡ ಇದ್ದೇ ಇರುತ್ತದೆ. ಯಾವ ರೋಗವೇ ಇರಲಿ ತುಳಸಿ ಎಲೆಯನ್ನು ಬಳಸಿದರೆ ರೋಗವು ಶೀಘ್ರವಾಗಿ ಗುಣವಾಗುತ್ತದೆ. ಕೆಮ್ಮು, ಶೀತ, ಜ್ವರ, ತ್ವಚೆಯ ಸಮಸ್ಯೆ, ಅಜೀರ್ಣದ ಸಮಸ್ಯೆಗಳಿಗೆ ಯೋಗ್ಯವಾಗಿರುವ ಸಸ್ಯ. ಒಣಗಿದ ಬೀಜದಿಂದ ಗಿಡಗಳನ್ನು ಬೆಳೆಸಬಹುದು. ಮನೆಯಲ್ಲಿ ತುಳಸಿ ಗಿಡಗಳಿಂದ ಚಿಕ್ಕ ವನ ಕೂಡ ಮಾಡಬಹುದು. ಇದರಿಂದ ಗಾಳಿಯು ಶುದ್ಧವಾಗಿರುತ್ತದೆ. ಎಲ್ಲೆಡೆ ಎಲ್ಲ ಕಾಲದಲ್ಲಿ ಬೆಳೆಯಬಹುದಾದ ಸಸ್ಯವಿದು. ಇದರ ಕಷಾಯ ಹಾಗೂ ಚೂರ್ಣ ಬಳಸುತ್ತಾರೆ.


ಪುದೀನಾ– ಅಜೀರ್ಣ ಸಮಸ್ಯೆಗಳಿಗೆ ಇದರ ರಸವನ್ನು ಉಪಯೋಗಿಸುತ್ತಾರೆ .ಬೇಸಿಗೆಯಲ್ಲಿ ಯಥೇಚ್ಚವಾಗಿ ಬೆಳೆಯುವಂತಹ ಸಸ್ಯವಿದು. ಮಳೆಗಾಲದಲ್ಲಿ ಹಾಳಾಗುತ್ತದೆ.ಕುಂಡಗಳಲ್ಲಿ ಸುಲಭವಾಗಿ ಬೆಳೆಯ ಬಹುದಾದಂತಹ ಸಸ್ಯವಿದು.


ವೀಳ್ಯದೆಲೆ – ಹೊಟ್ಟೆಯ ಎಲ್ಲಾ ಸಮಸ್ಯೆಗಳಿಗೆ ಇದರ ರಸವನ್ನು ಉಪಯೋಗಿಸುತ್ತಾರೆ. ಅಧಿಕ ಶುಷ್ಕ ಹಾಗೂ ಬಿಸಿಲಿರುವ ಪ್ರದೇಶದಲ್ಲಿ ಬೆಳೆಸುವುದು ಕಷ್ಟ. ಬಿಸಿಲು ಕಡಿಮೆ ಇರುವ ಶೀತ ಹವೆಯ ಪ್ರದೇಶದಲ್ಲಿ ಇದನ್ನು ಬೆಳೆಯಬಹುದು. ಕೆಮ್ಮಿಗೆ, ಹೊಟ್ಟೆಯ ಸಮಸ್ಯೆಗಳಿಗೆ ಇದರ ರಸವು ಅತ್ಯುಪಯೋಗಿ.


ಕರಿಬೇವು– ಬಿಸಿಲು ಹಾಗೂ ನೀರು ಯಥೇಚ್ಚವಾಗಿ ಇಷ್ಟಪಡುವ ಸಸ್ಯವಿದು. ಇದನ್ನು ಕೂದಲಿನ ಸಮಸ್ಯೆಗಳಿಗೆ ಉಪಯೋಗಿಸುತ್ತಾರೆ. ವರ್ಷವಿಡಿ ಬೆಳೆಯುವಂತಹ ಸಸ್ಯ ಇದು. ಕುಂಡದಲ್ಲಿಯೂ ಕೂಡ ಬೆಳೆಸಬಹುದು. ಇದರ ಎಲೆಗಳನ್ನು ಬಳಸಿ ಎಣ್ಣೆಯನ್ನು ಮಾಡಬಹುದು. ಅದು ಕೂದಲಿಗೆ ಒಳ್ಳೆಯದು. ಅಡುಗೆಯಲ್ಲಿ ಕರಿಬೇವಿನ ಒಗ್ಗರಣೆ ದೇಹಕ್ಕೆ ಹಿತ.


ಅಮೃತಬಳ್ಳಿ– ಸುಲಭವಾಗಿ ಬೆಳೆಯುವಂತಹ ಸಸ್ಯ ಇದು. ಇದರ ಕಾಂಡದ ಕಷಾಯ ಜ್ವರ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ವೃದ್ಧಾಪ್ಯವನ್ನು ತಡೆಯುವಂತಹ ಗುಣ ಇದಕ್ಕಿದೆ.


ನೆಲನೆಲ್ಲಿ -ಮಳೆಗಾಲದಲ್ಲಿ ಚಿಕ್ಕಚಿಕ್ಕ ಸಸ್ಯಗಳು ನೆಲದಲ್ಲಿ ಯಥೇಚ್ಚವಾಗಿ ಬೆಳೆಯುವುದನ್ನು ನಾವು ಕಾಣುತ್ತೇವೆ. ಇದು ಯಕೃತ್ತಿಗೆ ಬಹಳ ಒಳ್ಳೆಯದು. ಇದರ ಕಷಾಯ ಹಾಗೂ ಚಟ್ನಿಯನ್ನು ಮಾಡಿ ಸೇವಿಸಬಹುದು. ವಾರದಲ್ಲಿ ಒಮ್ಮೆ ಅಥವಾ ಎರಡು ಸಲ ಉಪಯೋಗಿಸಬಹುದು.

ಡಾ.ಹರ್ಷಾ ಕಾಮತ್




























































































































































































































error: Content is protected !!
Scroll to Top