ಸರಕಾರಿ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಲಸಿಕೆ ಲಭ್ಯವಿರದ ಕುರಿತು ಪ್ರಸ್ತಾಪ
ಕಾರ್ಕಳ : ಕಾರ್ಕಳ ಸರಕಾರಿ ಆಸ್ಪತ್ರೆ ಸೇರಿದಂತೆ ಕೆಲವೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಶೀಲ್ಡ್ ಲಸಿಕೆ ಲಭ್ಯವಿಲ್ಲ. ಈ ಕುರಿತು ತಕ್ಷಣ ವ್ಯವಸ್ಥೆ ಮಾಡಬೇಕಾಗಿದೆ ಎಂದು ತಾ.ಪಂ. ಸದಸ್ಯ ಸುಧಾಕರ ಶೆಟ್ಟಿ ಅವರು ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದರು.
ಮಂಗಳವಾರ ತಾ.ಪಂ. ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷೆ ಸೌಭಾಗ್ಯ ಮಡಿವಾಳ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ಸುಧಾಕರ್, ಕಾರ್ಕಳದ ವಿವಿಧೆಡೆಯಿಂದ ಕಾರ್ಕಳ ಸರಕಾರಿ ಆಸ್ಪತ್ರೆಗೆ ಹಿರಿಯರು ಆಟೋದಲ್ಲಿ ಬಂದು ಲಸಿಕೆ ಸಿಗದೇ ವಾಪಸ್ಸಾಗುತ್ತಿದ್ದಾರೆ ಎಂದು ಗಮನ ಸೆಳೆದರು.
ಈ ವೇಳೆ ತಾ.ಪಂ. ಇಒ ಶಶಿಧರ್ ಜಿ.ಎಸ್. ಆರೋಗ್ಯಾಧಿಕಾರಿಯೊಂದಿಗೆ ಮಾಹಿತಿ ಪಡೆದರು. ಬಳಿಕ ಲಸಿಕೆಯ ಅಭಾವ ಕಾರ್ಕಳದಲ್ಲಿ ಇಲ್ಲವೆಂದರು. ಈ ವೇಳೆ ಸುಧಾಕರ್ ಅವರು ಇದು ತಪ್ಪು ಮಾಹಿತಿ, ಇಂದು ಆಸ್ಪತ್ರೆಗೆ ತೆರಳಿ ವಾಪಾಸಾದವರನ್ನು ಇಲ್ಲಿಗೇ ಕರೆಸುತ್ತೇನೆ ಎಂದು ಸವಾಲೆಸೆದರು. ಕೋವಾಕ್ಸಿನ್, ಕೋವಿಶೀಲ್ಡ್ ಕೊರತೆ ಖಂಡಿತವಾಗಿಯೂ ಇದೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಈ ಬಗ್ಗೆ ಪರಿಶೀಲನೆ ನಡೆಸುವುದು ಉತ್ತಮವೆಂದರು.
ಮಾಳ, ಚೌಕಿಯಂಗಡಿ ಶಾಲೆಯಲ್ಲಿ ಅಪಾಯಕಾರಿ ಮರ ಬೀಳುವ ಸ್ಥಿತಿಯಲ್ಲಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸೌಭಾಗ್ಯ ಮಡಿವಾಳ ಸಂಬಂಧಪಟ್ಟ ಅಧಿಕಾರಿಯನ್ನು ಒತ್ತಾಯಿಸಿದರು.
ಬೋಳ ಮುಗುಳಿ ರಸ್ತೆಯನ್ನು ಶಾಸಕರ ವಿಶೇಷ ಅಭಿವೃದ್ಧಿ ಅನುದಾನದಲ್ಲಿ ಅಭಿವೃದ್ಧಿಪಡಿಸುತ್ತಿದ್ದು, 25 ಲಕ್ಷ ರೂ.ಗೆ ಟೆಂಡರ್ ಪ್ರಕ್ರಿಯೆ ಕೂಡಾ ಪೂರ್ಣಗೊಂಡಿದೆ. ಗುತ್ತಿಗೆದಾರ ರಸ್ತೆಗೆ ಜಲ್ಲಿ ಹಾಕಿ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಇದರಿಂದ ತೊಂದರೆಯಾಗಿದೆ ಎಂದು ಪುಷ್ಪಾ ಸತೀಶ್ ಆರೋಪಿಸಿದರು.
ಮುಡಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಬೀದಿ ವ್ಯಾಪಾರಿಗಳಿಂದ ಸುಂಕ ವಸೂಲಿ ವಹಿಸಿಕೊಂಡ ಗುತ್ತಿಗೆದಾರರಿಂದ ದುಪ್ಪಟ್ಟು ಸುಂಕ ವಸೂಲಿಯಾಗುತ್ತಿದೆ. ಇದರಿಂದ ವ್ಯಾಪಾರಿಗಳಿಗೆ ತೊಂದರೆಯಾಗಿದೆ ಎಂದು ಸುಧಾಕರ ಶೆಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಉಪಾಧ್ಯಕ್ಷ ಹರೀಶ್ ನಾಯಕ್ ಮಾತನಾಡಿ, ಟೆಂಡರ್ ವಹಿಸಿಕೊಂಡ ಸಂದರ್ಭ ಆತನಿಗೆ ವಿಧಿಸಿದ ಷರತ್ತಿನ ಅನ್ವಯ ಕ್ರಮ ಕೈಗೊಳ್ಳಬಹುದು ಎಂದು ಸಲಹೆ ನೀಡಿದರು.

ಮುಂಡ್ಕೂರು ಮುಲ್ಲಡ್ಕ ಸಂತ ಜೋಸೆಫ್ ಶಾಲೆ ಬಳಿಯ ರಸ್ತೆ ಅಭಿವೃದ್ಧಿಗೆ ಖಾಸಗಿಯವರು ಅಡ್ಡಿ ಪಡಿಸುತ್ತಿರುವ ಬಗ್ಗೆ ಗೋಪಾಲ ಮೂಲ್ಯ ಪ್ರಸ್ತಾಪಿಸಿದರು. ತಹಸೀಲ್ದಾರ್ ಪುರಂದರ ಹೆಗ್ಡೆ ಮಾತನಾಡಿ, ಈ ಬಗ್ಗೆ ಗ್ರಾ.ಪಂ. ನಿಂದ ವರದಿ ತರಿಸಿ, ಪರಿಶೀಲಿಸುವುದಾಗಿ ತಿಳಿಸಿದರು. ತಾ.ಪಂ. ಸದಸ್ಯರಿಗೆ ತಲಾ ಐದರಂತೆ ಟರ್ಪಾಲು ಅನ್ನು ಫಲಾನುಭವಿಗಳಿಗೆ ವಿತರಿಸಲು ಅವಕಾಶವಿದೆ ಎಂದು ಕೃಷಿ ಇಲಾಖೆಯ ಸಿಬ್ಬಂದಿ ತಿಳಿಸಿದರು. ಹರೀಶ್ ನಾಯಕ್ ಮಾತನಾಡಿ, ನಮೂನೆ 57 ರಡಿ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಕಡತ ಪರಿಶೀಲನೆ ವೇಳೆ ಡೀಮ್ಡ್ ಅರಣ್ಯಕ್ಕೆ ಒಳಪಟ್ಟಿದ್ದರೆ, ಅಂತಹ ಫಲಾನುಭವಿಗಳ ಕಡತಗಳನ್ನು ಮೊದಲೇ ಬಾಕಿಯಿರಿಸಬೇಕು. ಅರ್ಜಿ ವಿಲೇಯ ಪ್ರಕ್ರಿಯೆಗಳು ಆರಂಭಗೊಂಡು ಕೊನೆ ಕ್ಷಣದಲ್ಲಿ ಡೀಮ್ಡ್ ಆರಣ್ಯ ಎಂಬ ಕಾರಣಕ್ಕೆ ಬಾಕಿ ಉಳಿದ ಸಂದರ್ಭಗಳಲ್ಲಿ ಫಲಾನುಭವಿಗಳು ನಮ್ಮನ್ನೇ ಪ್ರಶ್ನಿಸುತ್ತಾರೆ. ಅದಕ್ಕೆ ಅವಕಾಶ ಮಾಡಿಕೊಡಬೇಡಿ. ಮಂಜೂರಾತಿಗೊಳಿಸಬಹುದಾದ ಕಡತಗಳನ್ನು ಮಾತ್ರ ವಿಲೇ ಪ್ರಕ್ರಿಯೆಗೆ ತನ್ನಿ ಎಂಬ ಸಲಹೆ ನೀಡಿದರು. ಇದೇ ಸಂದರ್ಭ ತಾ.ಪಂ.ನ ಕೊನೆಯ ಸಾಮಾನ್ಯ ಸಭೆ ಇದಾಗಿರುವ ಹಿನ್ನೆಲೆಯಲ್ಲಿ ಸಹಕರಿಸಿದ ಅಧಿಕಾರಿಗಳಿಗೆ, ಸದಸ್ಯರಿಗೆ ಕೃತಜ್ಞತೆ ಸಲ್ಲಿಸಲಾಯಿತು.
ಉಪಾಧ್ಯಕ್ಷ ಹರೀಶ್ ನಾಯಕ್, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರವೀಣ್ ಕೋಟ್ಯಾನ್, ಪ್ರಭಾರ ಇಒ ಶಶಿಧರ್ ಜಿ.ಎಸ್., ತಹಸೀಲ್ದಾರ್ ಪುರಂದರ ಹೆಗ್ಡೆ ವೇದಿಕೆಯಲ್ಲಿದ್ದರು.







































