ನವದೆಹಲಿ: ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರ ಕಡಿತ ಆದೇಶವನ್ನು ಹಿಂತೆಗೆದುಕೊಳ್ಳಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸುತ್ತಿದ್ದಂತೆ ಅವರನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.
ಕೋಟ್ಯಂತರ ಜನರ ಮೇಲೆ ಪರಿಣಾಮ ಬೀರುವ ಸಣ್ಣ ಉಳಿತಾಯಗಳ ಯೋಜನೆಗಳ ಮೇಲಿನ ಬಡ್ಡಿದರ ಕಡಿತ ಘೋಷಣೆ ಪ್ರಮಾದದಿಂದ ಆಗಿದೆ ಎಂದು ಸಚಿವೆ ಹೇಳಿದ್ದಾರೆ. ಕೋಟ್ಯಂತರ ಜನರ ಮೇಲೆ ಪರಿಣಾಮ ಬೀರುವ ಇಂತಹ ಆದೇಶದಿಂದ ದೇಶದ ಆರ್ಥಿಕತೆ ಮೇಲೆ ಎಂತಹ ಗಂಭೀರ ಪರಿಣಾಮ ಬೀರುತ್ತದೆ ಎಂಬ ಕಲ್ಪನೆಯಿದೆಯೇ ಅವರಿಗೆ, ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವೆಯಾಗಿ ಮುಂದುವರಿಯುವ ನೈತಿಕ ಹಕ್ಕು ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದೆ.
ಹಲವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಶೇಕಡಾ 1.1ರವರೆಗೆ ಕಡಿತಗೊಳಿಸಿ ನಿನ್ನೆ ಹಣಕಾಸು ಸಚಿವಾಲಯ ಆದೇಶ ಹೊರಡಿಸಿತ್ತು. ಈ ಬಗ್ಗೆ ಸಮಾಜದ ವಿವಿಧ ವರ್ಗಗಳಿಂದ ತೀವ್ರ ಟೀಕೆಗಳು, ವಿರೋಧ ವ್ಯಕ್ತವಾದವು. ಇಂದು ಬೆಳಗ್ಗೆಯೇ ಆದೇಶ ಹಿಂಪಡೆದಿರುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು.

ಇಂದು ಬೆಳಗ್ಗೆಯ ಬೆಳವಣಿಗೆಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ನಿಜವಾಗಿಯೂ ಇದು ಪ್ರಮಾದದಿಂದ ಆಗಿದ್ದೇ ಅಥವಾ ಈಗ ಕೆಲವು ರಾಜ್ಯಗಳಲ್ಲಿ ಚುನಾವಣೆ ಇರುವುದರಿಂದ ಮತ್ತು ಜನರ ವಿರೋಧ ಕೇಳಿಬಂದ ನಂತರ ಮಾಡಿಕೊಂಡಿರುವ ಪಶ್ಚಾತ್ತಾಪವೇ ಎಂದು ಪ್ರಶ್ನಿಸಿದ್ದಾರೆ






























































