ಗ್ರಾಹಕರ ಸಂರಕ್ಷಣೆ ಕಾಯ್ದೆಯ ಮುಖ್ಯ ಅಂಶಗಳು- 2ನೇ ಸಂಚಿಕೆ

ಗ್ರಾಹಕರ ಸಂರಕ್ಷಣೆ ಕಾಯ್ದೆಯ ಪ್ರಕಾರ ಗ್ರಾಹಕನೆಂದರೆ:

  1. ಹಣ ಪಾವತಿಸಿ ಅಥವಾ ಪಾವತಿಸುವ ವಾಗ್ದಾನದ ಅನ್ವಯ ಸ್ವಂತ ಉಪಯೋಗಕ್ಕಾಗಿ ಸರಕುಗಳನ್ನು ಅಥವಾ ಯಾವುದೇ ವಸ್ತುವನ್ನು ಖರೀದಿಸುವವ, ಬಾಡಿಗೆಗೆ ಪಡೆಯುವವ ಅಥವಾ ಯಾವುದೇ ಸೇವೆಗಳನ್ನು ಪಡೆಯುವವನು.
  2. ಖರೀದಿದಾರನ, ಮಾರಾಟಗಾರನ ಅಥವಾ ಬಾಡಿಗೆಗೆ ನೀಡುವವನ ಅನುಮತಿಯಿಂದ ಸರಕುಗಳನ್ನು ಅಥವಾ ಯಾವುದೇ ವಸ್ತುವನ್ನು ಉಪಯೋಗಿಸುವವ ಅಥವಾ ಸೇವೆಗಳನ್ನು ಪಡೆಯುವವನು.
  3. ಸ್ವಂತ ಉದ್ಯೋಗದ ಮೂಲಕ ಜೀವನ ನಿರ್ವಹಣೆಗಾಗಿ ಲಾರಿ, ಕಾರು, ಆಟೋರಿಕ್ಷಾ ಮುಂತಾದ ವಾಹನಗಳನ್ನು ಖರೀದಿಸುವವ ಅಥವಾ ಯಾವುದೇ ಸೇವೆಯನ್ನು ಪಡೆಯುವವನು.
    ಗ್ರಾಹಕನ ಹಿತರಕ್ಷಣೆ ಎಂದರೆ ಗ್ರಾಹಕನ ಭೌತಿಕ, ಆರ್ಥಿಕ ಮತ್ತು ಇತರೆ ಹಿತಾಸಕ್ತಿಗಳನ್ನು ವ್ಯವಹಾರ ಸಂಸ್ಥೆಗಳ ಶೋಷಣೆಯಿಂದ ಶಾಸನಬದ್ಧ ಹಾಗೂ ಇತರೆ ವಿಧಾನಗಳಿಂದ ರಕ್ಷಿಸುವುದಾಗಿದೆ. ಸಾಮಾನ್ಯವಾಗಿ ಗ್ರಾಹಕನನ್ನು ತೂಕ ಮತ್ತು ಅಳತೆಯಲ್ಲಿ ಕೊರತೆ, ತಪ್ಪು ಮಾಹಿತಿಯ ಜಾಹೀರಾತು, ಕಡಿಮೆ ಗುಣಮಟ್ಟದ ಸರಕುಗಳು, ಕಲಬೆರಕೆ, ಕಾಳಸಂತೆ ವ್ಯಾಪಾರ, ಕೃತಕ ಅಭಾವ ಸೃಷ್ಟಿಸುವ, ಮಾರಾಟ ನಂತರದ ಸೇವೆಗಳನ್ನು ನಿರಾಕರಿಸುವ ಅಥವಾ ಮಾರಾಟ ಪಟ್ಟಿ ನೀಡದೇ ಶೋಷಿಸುವುದು.

ಗ್ರಾಹಕರ ರಕ್ಷಣೆಯ ಅವಶ್ಯಕತೆ :
ಗ್ರಾಹಕರ ಅಜ್ಞಾನ ಅಂದರೆ ಗ್ರಾಹಕರು ಅನೇಕ ಸಂದರ್ಭಗಳಲ್ಲಿ ಸರಿಯಾದ ಜ್ಞಾನವನ್ನು ಹೊಂದಿಲ್ಲದಿರುವುದರಿಂದ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳುವಲ್ಲಿ ಅಥವಾ ವ್ಯಾಪಾರ ಸಂಸ್ಥೆಗಳ ಶೋಷಣೆಯ ವಿರುದ್ಧ ಧ್ವನಿ ಎತ್ತುವಲ್ಲಿ ವಿಫಲರಾಗಿ ಅನ್ಯಾಯಕ್ಕೊಳಗಾಗುತ್ತಾರೆ. ಆದುದರಿಂದ ಗ್ರಾಹಕರಿಗೆ ತಮ್ಮ ಹಿತರಕ್ಷಣೆ ಬಗ್ಗೆ ಸೂಕ್ತ ಶಿಕ್ಷಣ ಹಾಗೂ ಹಕ್ಕುಗಳ ಅವಶ್ಯಕತೆ ಇದೆ.
ಅಸಂಘಟಿತ ಗ್ರಾಹಕರು ಅಂದರೆ ಗ್ರಾಹಕರು ಅಸಂಘಟಿತರಾಗಿರುವುದರಿಂದ ವ್ಯವಹಾರ ಸಂಸ್ಥೆಗಳು ಅವರನ್ನು ಶೋಷಿಸುತ್ತಿವೆ. ಆದುದರಿಂದ ಗ್ರಾಹಕರು ಶೋಷಣೆಯ ವಿರುದ್ಧ ಹೋರಾಡಲು ಸಂಘಟಿತರಾಗಬೇಕಾಗಿದೆ.
ಗ್ರಾಹಕರ ಶೋಷಣೆ ಅಂದರೆ ವ್ಯಾಪಾರ ಸಂಸ್ಥೆಗಳು ಅನುಚಿತ ವ್ಯಾಪಾರಿ ಪದ್ಧತಿಗಳಾದ ಕಲಬೆರಕೆ, ಕಾಳಸಂತೆ ವ್ಯಾಪಾರ, ತೂಕ ಮತ್ತು ಅಳತೆಯಲ್ಲಿ ಕೊರತೆ, ವಂಚನೆಯ ಜಾಹೀರಾತು, ಮುಂತಾದವುಗಳಿಂದ ಗ್ರಾಹಕನನ್ನು ಶೋಷಿಸುತ್ತಿರುವುದರಿಂದ ಗ್ರಾಹಕನ ಹಿತರಕ್ಷಣೆ ಅಗತ್ಯವಾಗಿದೆ.
ವ್ಯವಹಾರ ಸಂಸ್ಥೆಗಳ ದೀರ್ಘಾವಧಿ ಹಿತಾಸಕ್ತಿಗಾಗಿ ಉತ್ತಮ ಗುಣಮಟ್ಟದ ಸರಕು ಮತ್ತು ಸೇವೆಗಳನ್ನು ನಿರಂತರವಾಗಿ ನ್ಯಾಯಬೆಲೆಯಲ್ಲಿ ಪೂರೈಸುವುದರ ಮೂಲಕ ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸಬೇಕಾಗಿದೆ.
ವ್ಯವಹಾರ ಸಂಸ್ಥೆಗಳು ಗ್ರಾಹಕರ ಹಿತರಕ್ಷಣೆಯನ್ನು ಸಾಮಾಜಿಕ ಜವಾಬ್ದಾರಿಯನ್ನಾಗಿ ಒಪ್ಪಿಕೊಳ್ಳುವುದರ ಮೂಲಕ, ಅನುಚಿತ ವ್ಯಾಪಾರಿ ಪದ್ಧತಿಗಳನ್ನು ಸ್ವತಃ ನಿಯಂತ್ರಿಸಿಕೊಳ್ಳುವುದರ ಮೂಲಕ ಗ್ರಾಹಕರ ಹಿತರಕ್ಷಣೆಯನ್ನು ಕಾಪಾಡುತ್ತಿವೆ.
ಸರ್ಕಾರ ಕಾಲಕಾಲಕ್ಕೆ ಶಾಸನಗಳನ್ನು ರೂಪಿಸುವುದರ ಮೂಲಕ ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುತ್ತಿದೆ. ಆದುದರಿಂದ ವ್ಯಾಪಾರಿ ಸಂಸ್ಥೆಗಳು ಸರ್ಕಾರದ ಕಾನೂನು ಕಟ್ಟಲೆಗಳನ್ನು ಪಾಲಿಸುವುದರ ಮೂಲಕ ಸ್ವಯಂಪ್ರೇರಣೆಯಿಂದ ಗ್ರಾಹಕರನ್ನು ರಕ್ಷಿಸುವುದು ಅನಿವಾರ್ಯವಾಗಿದೆ.

ಈ ಕೆಳಕಂಡ ವ್ಯಕ್ತಿಗಳು ಸಂಬಂಧಿಸಿದ ಗ್ರಾಹಕ ನ್ಯಾಯಾಲಯದಲ್ಲಿ ದೂರನ್ನು ದಾಖಲಿಸಬಹುದು.

  1. ಯಾವುದೇ ಗ್ರಾಹಕ
  2. ಯಾವುದೇ ನೊಂದಾಯಿತ ಗ್ರಾಹಕ ಸಂಘಟನೆ
  3. ಕೇಂದ್ರ ಅಥವಾ ಯಾವುದೇ ರಾಜ್ಯ ಸರ್ಕಾರ
  4. ಒಂದೇ ರೀತಿಯ ಹಿತಾಸಕ್ತಿಯನ್ನು ಹೊಂದಿರುವ ಒಬ್ಬ ಅಥವಾ ಅನೇಕ ಗ್ರಾಹಕರು
  5. ಗ್ರಾಹಕನ ವಾರಸುದಾರ (ಗ್ರಾಹಕನ ನಿಧನಾನಂತರ)
    ದೂರಿನಲ್ಲಿರಬೇಕಾದ ಪ್ರಮುಖ ಅಂಶಗಳು
  6. ದೂರುದಾರರ ಹೆಸರು, ವಿಳಾಸ, ಮತ್ತು ದೂರಿನ ವಿವರ.
  7. ಎದುರು ಕಕ್ಷಿದಾರನ ಹೆಸರು, ವಿಳಾಸ, ಮತ್ತು ವಿವರ.
  8. ಯಾವ ಸಂದರ್ಭದಲ್ಲಿ ನ್ಯೂನ್ಯತೆ ಸಂಭಂದಿಸಿದೆ ಎಂಬುದರ ಬಗ್ಗೆ ಮಾಹಿತಿ
  9. ದೂರಿಗೆ ಸಂಭಂದಿಸಿದ ಮಾಹಿತಿಗಳನ್ನೊಳಗೊಂಡ ದಾಖಲೆಗಳು
  10. ದೂರುದಾರ ಅಪೇಕ್ಷಿಸುವ ಪರಿಹಾರದ ವಿವರಗಳು ಇತ್ಯಾದಿ.
ಕೆ. ವಿಜೇಂದ್ರ ಕುಮಾರ್, ಹಿರಿಯ ನ್ಯಾಯವಾದಿ, ಕಾರ್ಕಳ
ಮೊ: 9845232490





























































































































error: Content is protected !!
Scroll to Top