ತರಣಿದರ್ಶನಕ್ಕಿಂತ ಕಿರಣಾನುಭವ ಸುಲಭ|
ಪರಮಶಾಸ್ತ್ರಕ್ಕಿಂತ ಸರಿಯುದಾಹರಣೆ||
ಪರಮತತ್ವವ ಕಂಡ ಗುರುವನರಸುದೆಲ್ಲಿ|
ದೊರೆತಂದು ನೀಂ ಧನ್ಯ-ಮಂಕುತಿಮ್ಮ.”
ಸೂರ್ಯನನ್ನು ನೇರವಾಗಿ ದಿಟ್ಟಿಸಿ ನೋಡುವುದು ಕಷ್ಟ. ಆದರೆ, ಸೂರ್ಯಕಿರಣಗಳು ಸೂಸುವ ಬೆಳಕು ನಮಗೆ ಹಿತವನ್ನುಂಟು ಮಾಡುತ್ತವೆ. ಅತ್ಯುತ್ತಮವಾದ ಶಾಸ್ತ್ರವನ್ನು ಸರಿಯಾಗಿ ಅರಿಯುವುದು ಕಷ್ಟ. ಆದರೆ, ಅದರ ಸಾರದ ಉದಾಹರಣೆಯನ್ನು ನೋಡಿ ಆ ಶಾಸ್ತ್ರವನ್ನು ಅರ್ಥಮಾಡಿಕೊಳ್ಳಬಹುದು. ಪರತತ್ವವನ್ನು ಅರಿತ ಗುರುವನ್ನು ಹುಡುಕುವುದೆಲ್ಲಿ? ಅಂತಹ ಶ್ರೇಷ್ಠ ಗುರು ದೊರೆತರೆ ಜೀವನ ಸಾರ್ಥಕವೆಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಹೇಳಿದ್ದಾರೆ.
ಗುರು ಎಂದರೆ ಜ್ಞಾನದ ಬೆಳಕನ್ನು ಬೀರಿ ಅಜ್ಞಾನದ ಕತ್ತಲನ್ನು ದೂರ ಮಾಡುವವನು ಎಂದರ್ಥ. ಜ್ಞಾನ ಸಂಪಾದನೆಯಾಗಬೇಕಾದರೆ ನಿರಂತರ ಅಧ್ಯಯನ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.ಒಳ್ಳೆಯ ಗುರುವಾಗಬೇಕಾದರೆ ಮೊದಲು ಒಳ್ಳೆಯ ವಿದ್ಯಾರ್ಥಿಯಾಗಬೇಕು. “ಗುರುವೊಲಿದು ಹರಸಿದರೆ ದೊರಕುವುದು ಚಿರಮುಕ್ತಿ,ದುರಿತ ಕರ್ಮಗಳೆಲ್ಲ ಬಳಿ ಸುಳಿಯವೋ,ಹರ ಮುನಿಯೆ ಗುರು ಕಾಯ್ವ ಗುರು ಮುನಿಯೆ ಹರನಿಂದಲೂ ಕಾಯಲಸದಳವೊ” ಎಂಬ ನಿಜಗುಣ ಕವಿಯ ಮಾತು ದೇವರ ಅನುಗ್ರಹಕ್ಕಿಂತಲೂ ಗುರುವಿನ ಮಾರ್ಗದರ್ಶನ ಮುಖ್ಯವೆನ್ನುವುದನ್ನು ತಿಳಿಸುತ್ತದೆ.
‘ಗುರುವಿಗೆ ವಂದನೆ ಮೊದಲು ನಂತರ ಗಣಪತಿಗೆ,ಬಳಿಕ ದೇವಿ ಶ್ರೀ ಶಾರದೆಗೆ ,ಇವರ ಕೃಪೆಯು ನಮಗೆ -ಕಬೀರಾ’ ಎಂಬ ಸಂತ ಕಬೀರರ ವಾಣಿಯು ದೇವರ ಪೂಜೆ ಮಾಡುವ ಮೊದಲು ಗುರುವಿಗೆ ವಂದಿಸು ಎನ್ಬುವ ವಿಚಾರವನ್ನು ತಿಳಿಸುತ್ತದೆ. ಜೀವನದ ಶ್ರೇಷ್ಠ ಸತ್ವ ಮತ್ತು ತತ್ತ್ವವನ್ನಿರಿತು ನಮ್ಮ ಬಾಳಿಗೆ ಬೆಳಕನ್ನು ಬೀರಿ ಬದುಕಿನ ಸಾರ್ಥಕತೆಗೆ ನೆರವಾಗುವ ಗುರುವನ್ನು ಹುಡುಕುವುದು ಕಷ್ಟ. ಹುಡುಕಿದರೂ ಸಿಗುವುದು ಇನ್ನೂ ಕಷ್ಟ.ತರಣಿದರ್ಶನ ಬಿಡಿ ಕಿರಣಾನುಭವ ನೀಡುವ ಗುರು ನಮಗೆ ದೊರೆತರೆ ಅದು ನಮ್ಮ ಪುಣ್ಯ. ಆದರೆ ಈ ವಿಚಾರದಲ್ಲಿ ನಾವು ನಿರಾಶರಾಗಬೇಕಿಲ್ಲ. ಜ್ಞಾನದೀವಿಗೆಯಾಗಿ ಬಾಳಾದಾರಿಗೆ ಬೆಳಕನ್ನು ಚೆಲ್ಲಿ ಸರಿದಾರಿಯಲ್ಲಿ ಮುನ್ನಡೆಯುವಲ್ಲಿ ನೆರವಾಗುವ ನಿಜ ಅರ್ಥದ ಗುರುಗಳು ನಮ್ಮ ನಡುವೆ ಹಿಂದೆ ಇದ್ದರು ಮತ್ತು ಇಂದೂ ಇದ್ದಾರೆ. ಅವರೆಲ್ಲಿ ಇದ್ದಾರೆ ಎನ್ನುವುದನ್ನು ನಾವು ಕಂಡುಕೊಳ್ಳಬೇಕು. ಅಂತಹ ಮಹಾಮಹಿಮ ಗುರುವನ್ನು ಕಂಡುಕೊಂಡು ಅವರ ಜ್ಞಾನಾನುಭವದ ನುಡಿಬೆಳಕಲ್ಲಿ ನಡೆದಾಗ ಜೀವನ ಸಾರ್ಥಕವಾಗುವುದಲ್ಲವೆ ?

ಸಾಹಿತ್ಯ ಪರಿಷತ್ ಕಾರ್ಕಳ ತಾಲೂಕು ಅಧ್ಯಕ್ಷರು






























































