Tuesday, July 5, 2022
spot_img
Homeಅಂಕಣಯಕ್ಷಾಂಕಣ-ಈ ರಡ್ಡ್ ಜನ ಬ್ರಾಣೆರೆನ ಲಡಾಯಿಡ್ ಯಾನ್ ಲಗಾಡಿ

ಯಕ್ಷಾಂಕಣ-ಈ ರಡ್ಡ್ ಜನ ಬ್ರಾಣೆರೆನ ಲಡಾಯಿಡ್ ಯಾನ್ ಲಗಾಡಿ

ಸುಪ್ರಸಿದ್ಧ ಯಕ್ಷಗಾನ ಕಲಾವಿದರ ಸ್ವಾರಸ್ಯಕರ ಘಟನೆ

ಇದು 1950ರ ದಶಕದಲ್ಲಿ ನಡೆದ ಘಟನೆ. ಆಗ ಕಲ್ಲಾಡಿ ಕೊರಗ ಶೆಟ್ಟರು ಕುಂಡಾವು ಮೇಳದ ಯಜಮಾನರಾಗಿದ್ದ ಕಾಲ. ಟೆಂಟ್ ಮೇಳವಾಗಿ ಕೊರಗ ಶೆಟ್ಟರ ಯಜಮಾನಿಕೆಯಲ್ಲಿ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಕುಂಡಾವು ಮೇಳವು ವಿಜೃಂಭಿಸುತ್ತಿತ್ತು. ಘಟಾನುಘಟಿ ಕಲಾವಿದರ ಗಡಣವೇ ಕುಂಡಾವು ಮೇಳದಲ್ಲಿದ್ದ ಕಾರಣ ಹೋದಲೆಲ್ಲಾ ಪ್ರೇಕ್ಷಕರಿಂದ ಮೇಳಕ್ಕೆ ಉತ್ತಮ ಬೆಂಬಲ. ಒಮ್ಮೆ ರಾವಣ ವಧೆ ಪ್ರಸಂಗದ ಪ್ರದರ್ಶನ. ಇಬ್ಬರು ವಿದ್ವಾಂಸ ಕಲಾವಿದರು ರಾವಣ-ಮಂಡೋದರಿ ಪಾತ್ರದಲ್ಲಿದ್ದರು. ಯಾವಾಗಲೂ ಈ ಇಬ್ಬರು ಕಲಾವಿದರಿಂದ ಉತ್ತಮವಾಗಿ ಸಾಗುವ ಪ್ರಸಂಗವಿದು. ಆದರೆ, ಅಂದು ಕೆಟ್ಟ ಘಳಿಗೆಯೋ ಏನೋ ? ಅಂದು ರಾವಣ-ಮಂಡೋದರಿ ಸಂಭಾಷಣೆ ಪ್ರಾರಂಭದಲ್ಲಿ ಉತ್ತಮವಾಗಿ ಸಾಗಿದರೂ ನಂತರದಲ್ಲಿ ವಾಗ್ವಾದಕ್ಕೆ ತಿರುಗಿತು. ಇಬ್ಬರೂ ವಿದ್ವಾಂಸರೇ ಆದ ಕಾರಣ ಸಂಸ್ಕೃತ ಶ್ಲೋಕ, ಶಾಸ್ತ್ರ, ವೇದಾಂತ, ಪುರಾಣ ಎಲ್ಲವನ್ನೂ ತಮ್ಮ ತಮ್ಮ ಪಾತ್ರ ಪೋಷಣೆಗೆ ತಂದರು. ವಾದ ತೀವ್ರವಾಗಿ ಮಾತಿನ ಜಟಾಪಟಿಗೆ ತಿರುಗಿತು. ಇಬ್ಬರೂ ತಮ್ಮ ವಾದ ಬಿಡಲೊಲ್ಲರು. ಕೊನೆಗೆ ಯಕ್ಷಗಾನ ಪ್ರದರ್ಶನ ಅರ್ಧದಲ್ಲೇ ನಿಲ್ಲುವಂತಾಯಿತು.

ಪರಸ್ಪರ ಮಾತನಾಡುತ್ತಿರಲಿಲ್ಲ
ಯಜಮಾನರಾದ ಕಲ್ಲಾಡಿಯವರು ದೂರದಲ್ಲಿ ಕುಳಿತು ಇದನ್ನೆಲ್ಲಾ ವೀಕ್ಷಿಸುತ್ತಿದ್ದವರು. ಈ ರಡ್ಡ್ ಜನ ಬ್ರಾಣೆರೆನ ಲಡಾಯಿಡ್ ಯಾನ್ ಲಗಾಡಿ (ಈ ಇಬ್ಬರು ಬ್ರಾಹ್ಮಣರ ಜಗಳದಿಂದ ನಾನು ಪೂರಾ ಸೋತೆ) ಎಂದು ತಲೆಗೆ ಕೈ ಇಟ್ಟು ಉದ್ಗರಿಸಿದರು. ಅಂದು ವಾಗ್ವಾದ ಮಾಡಿದ ಯಕ್ಷಗಾನ ಕಲಾವಿದರು ಯಾರು ಗೊತ್ತೇ ? ರಾವಣನ ಪಾತ್ರ ನಿರ್ವಹಿಸಿದವರು ಯಕ್ಷರಂಗದ ಭೀಷ್ಮ ಎನಿಸಿದ ಅಪ್ರತಿಮ ಮಾತುಗಾರ ಡಾ. ಶೇಣಿ ಗೋಪಾಲಕೃಷ್ಣ ಭಟ್‌ ಅವರು. ಅಂಥಹ ಶೇಣಿಯವರ ಎದುರು ಅಂದು ಮಂಡೋದರಿಯಾಗಿ ನಿರ್ವಹಿಸಿದವರು ಶ್ರೀದೇವಿಮಹಾತ್ಮೆ ಪ್ರಸಂಗದ ಶ್ರೀದೇವಿಯ ಪಾತ್ರದಲ್ಲಿ ಅಪೂರ್ವ ನಿರ್ವಹಣೆಯಿಂದಾಗಿ ದೇವಿ ಭಟ್ರು ಎಂದು ಪ್ರಸಿದ್ಧಿ ಪಡೆದ ದಿ. ಕಡಂದೇಲು ಪುರುಷೋತ್ತಮ ಭಟ್‌ ಅವರು. (ಘಟನೆಯ ಅನಂತರ ಈ ಇಬ್ಬರು ಕಲಾವಿದರು ಹಲವಾರು ವರ್ಷಗಳ ಕಾಲ ಪರಸ್ಪರ ಮಾತಾಡುತ್ತಿರಲಿಲ್ಲ ಹಾಗೂ ಜತೆಯಾಗಿ ಪಾತ್ರವನ್ನೂ ನಿರ್ವಹಿಸುತ್ತಿರಲಿಲ್ಲ).

ಪ್ರಾತ: ಕಾಲ ಸ್ಮರಣೀಯರು
ದಿ. ಕುರಿಯ ವಿಠಲ ಶಾಸ್ತ್ರಿಯವರ ಕುರಿತು ತಿಳಿಯದವರು ಯಾರೂ ಇರಲಿಕ್ಕಿಲ್ಲ. ಯಕ್ಷಗಾನವಿಂದು ಈ ಮಟ್ಟದಲ್ಲಿ ಬೆಳೆಯುವಲ್ಲಿ ಕುರಿಯ ಶಾಸ್ತ್ರಿಗಳ ಕೊಡುಗೆಯೂ ಅಪಾರ. ಯಕ್ಷಗಾನದಲ್ಲಿ ಅಮೂಲಾಗ್ರ ಸುಧಾರಣೆ ತಂದವರು ಅವರು. ಯಕ್ಷಗಾನ ಎಂದರೆ ಮೂಗು ಮುರಿಯುತ್ತಿದ್ದ ಆ ಕಾಲದಲ್ಲಿ ಯಕ್ಷಗಾನಕ್ಕೊಂದು ಶಾಸ್ತ್ರೀಯ ನೆಲೆಗಟ್ಟನ್ನು ತಂದವರು ಶಾಸ್ತ್ರೀಯವರು. ಯಕ್ಷಗಾನದ ಕೆಲವೊಂದು ಪಾತ್ರಗಳಿಗೆ ಕಾಯಕಲ್ಪ ಒದಗಿಸಿ ಆ ಮೂಲಕ ಯಕ್ಷಗಾನಕ್ಕೆ ಪುನರುತ್ಥಾನ ಕೊಟ್ಟ ಪ್ರಾತಃಕಾಲ ಸ್ಮರಣೀಯರು ಕುರಿಯ ವಿಠಲ ಶಾಸ್ತ್ರಿಯವರು.
ಕುರಿಯರು ಧರ್ಮಸ್ಥಳ ಮೇಳದ ಸಂಚಾಲಕರಾಗಿರುವ ಕಾಲದಲ್ಲಿ ಬಾಲ ಕಲಾವಿದರಿಗೆ ಒಂದು ನಿಯಮ ವಿಧಿಸಿದ್ದರು. ಮೇಳದ ಬಿಡಾರ, ಚೌಕಿ ಹಾಗೂ ರಂಗಸ್ಥಳ ಈ ಮೂರರಲ್ಲಿ ಮಾತ್ರ ಗಮನ ನೀಡಬೇಕೇ ಹೊರತು ಬಾಹ್ಯ ಪ್ರಪಂಚವಿರಕೂಡದು ಎಂಬುದು ಅವರ ಬಾಲಪಾಠವಾಗಿತ್ತು. ಇದು ಕಲಾವಿದರ ಬೆಳವಣಿಗೆಗೆ ಬೇಕಾದ ಮೂರು ನಿಯಮಗಳು ಎಂಬುದು ಶಾಸ್ತ್ರಿಯವರ ಅಭಿಮತ. ಇದನ್ನು ಮೀರಿದರೆ ಶಾಸ್ತ್ರಿಯವರು ಸಹಿಸಿಕೊಳ್ಳುತ್ತಿರಲಿಲ್ಲ.

ಏಟಿನ ಸವಿಯುಂಡ ಆ ಬಾಲಕ
ಒಂದು ದಿನ ಕುರಿಯರ ಕಿರಿಯ ಶಿಷ್ಯ ಹಾಗೂ ಧರ್ಮಸ್ಥಳ ಮೇಳದ ಬಾಲ ಕಲಾವಿದನೋರ್ವ ಸಂಜೆಯ ಹೊತ್ತಿಗೆ ಮೇಳದ ಬಿಡಾರದ ಬಳಿಯಿದ್ದ ಮೈದಾನದಲ್ಲಿ ಮಕ್ಕಳು ಚೆಂಡಾಟ ಆಡುತ್ತಿರುವುದನ್ನು ನೋಡಿ‌ದ. ಬಾಲ್ಯ ಸಹಜವಾದ ಆಸೆ ಮೂಡಿ, ತಾನೂ ಆಡಲು ಆ ಮಕ್ಕಳೊಂದಿಗೆ ಸೇರಿಕೊಂಡ. ಅಷ್ಟರಲ್ಲಿ ಬಿಡಾರಕ್ಕೆ ಬಂದ ಶಾಸ್ತ್ರಿಗಳು ಆ ಹುಡುಗ ಬಿಡಾರದಲ್ಲಿ ಇರದೇ ಚೆಂಡಾಟ ಆಡುವುದನ್ನು ಗಮನಿಸಿದರು. ಕೋಪೋದ್ರಿಕ್ತರಾದ ಶಾಸ್ತ್ರೀಯವರು ಕೈಯಲ್ಲಿ ಒಂದು ಗಟ್ಟಿಯಾದ ದೊಡ್ಡ ಕೋಲು ಹಿಡಿದೇ ಮೈದಾನಕ್ಕೆ ಬಂದರು. ಶಾಸ್ತ್ರೀಯವರನ್ನು ಕಂಡ ಆ ಬಾಲಕ ಭಯದಿಂದ ನಡುಗಿದ. ತನಗೀಗ ಶಿಕ್ಷೆ ಕಾದಿದೆ ಎಂದೆಣಿಸಿಯೇ ತತ್ತರಿಸಿದ. ಶಾಸ್ತ್ರಿಗಳು ಆ ಬಾಲಕನಲ್ಲಿ ಎಲ್ಲಿ ಕೈ ಮುಂದಕ್ಕೆ ಚಾಚು ಎಂದಾಗ ಕೈ ಚಾಚಿದ ಆ ಬಾಲಕನ ಕೈಗೆ ಎರಡು ಬಿಗಿಯಾದ ಏಟು ಕೊಟ್ಟರು. ಆ ಏಟಿನ ಸವಿಯುಂಡ ಆ ಬಾಲಕ ಮುಂದಕ್ಕೆ ಎಂದೂ ಚೆಂಡಾಟ ಆಡಲೇ ಇಲ್ಲ. ಯಕ್ಷಗಾನದ ಪಾಠಗಳಲ್ಲೇ ತೊಡಗಿಸಿಕೊಂಡ. ಇನ್ನೊಮ್ಮೆ ಅದೇ ಬಾಲ ಕಲಾವಿದ ದೇವತೆ ಬಲ ಮಾಡಿ ರಂಗಸ್ಥಳದಲ್ಲಿ ಆಕಳಿಸಿದ. ಆಗ ಈಶ್ವರನ ಪಾತ್ರದಲ್ಲಿ ರಂಗದಲ್ಲಿದ್ದ ಶಾಸ್ತ್ರಿಗಳು ಆ ಬಾಲಕನನ್ನು ದುರುಗುಟ್ಟಿ ನೋಡಿ, ಇನ್ನು ಆ ರೀತಿ ಮಾಡಬೇಡ ಎಂದು ಎಚ್ಚರಿಸಿದ್ದು ಮುಂದೆಂದೂ ಆ ಕಲಾವಿದ ರಂಗದಲ್ಲಿ ಆಕಳಿಸಲಿಲ್ಲ.
ಶಾಸ್ತ್ರಿಯವರಿಂದ ಶಿಕ್ಷೆಗೊಳಪಟ್ಟ ಆ ಬಾಲ ಕಲಾವಿದನೇ ಮುಂದಕ್ಕೆ ತನ್ನದ್ದಾದ ಅಸಾಮಾನ್ಯ ಪ್ರತಿಭೆಯಿಂದ ಶಾಸ್ತ್ರಿಗಳ ಪಾತ್ರದ ಎದುರು ನಾಯಕಿ ಪಾತ್ರ ಮಾಡುವ ಮಟ್ಟಕ್ಕೆ ಬೆಳೆದರು. ಶಾಸ್ತ್ರಿಗಳ “ಪಟ್ಟಶಿಷ್ಯ” ಎಂದೂ ಗುರುತಿಸಿಕೊಂಡರು. ಈಶ್ವರನಿಗೆ ದಾಕ್ಷಾಯಣಿ, ದುಷ್ಯಂತನಿಗೆ ಶಕುಂತಲಾ, ವಿಶ್ವಾಮಿತ್ರನಿಗೆ ಮೇನಕೆಯಾಗಿ ಅಭಿನಯಿಸಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿ, ಅಪಾರ ಪ್ರಸಿದ್ಧಿ ಗಳಿಸಿದರು ಮಾತ್ರವಲ್ಲ ಸ್ತ್ರೀ ಪಾತ್ರಗಳಿಗೊಂದು ಹೊಸ ರೂಪು ಕೊಟ್ಟ ಮಹಾನ್ ಕಲಾವಿದ ಎನಿಸಿಕೊಂಡರು. ಅಂದಿನ ಆ ಬಾಲ ಕಲಾವಿದರೇ ಇಂದಿನ ಸುಪ್ರಸಿದ್ಧ ಸ್ತ್ರೀಪಾತ್ರಧಾರಿ ಸ್ತ್ರೀ ಪಾತ್ರಗಳ ಮೂಲಕ ಪರಕಾಯ ಪ್ರವೇಶ ಮಾಡಿ ಪ್ರೇಕ್ಷಕರಲ್ಲಿ ಸಂಚಲನ ಮೂಡಿಸಿದ ಯಕ್ಷಗಾನದಲ್ಲಿಯ ಸಾಧನೆಗಾಗಿ ಡಾಕ್ಟರೇಟ್ ಪಡೆದ ಡಾ. ಕೊಳ್ಯೂರು ರಾಮಚಂದ್ರ ರಾವ್. ಕೊಳ್ಯೂರರಿಗೆ ಇದೀಗ 85 ವರ್ಷ ವಯಸ್ಸು. ಇಂತಹ ಘಟನೆಯನ್ನು ಕೊಳ್ಯೂರು ಈಗಲೂ ಮೆಲುಕು ಹಾಕುತ್ತಾರೆ.

ಎಂ. ಶಾಂತರಾಮ ಕುಡ್ವ ಮೂಡುಬಿದಿರೆ


---

1 COMMENT

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!