Sunday, October 2, 2022
spot_img
Homeಸ್ಥಳೀಯ ಸುದ್ದಿಕುವೆಂಪು ಕನ್ನಡ ಸಾಹಿತ್ಯದ ಇಂಪು

ಕುವೆಂಪು ಕನ್ನಡ ಸಾಹಿತ್ಯದ ಇಂಪು

ಮಲೆನಾಡಿನ ಸೊಬಗಿನ ಐಸಿರಿಯ ಚೆಲುವಿನ ಹಳ್ಳಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿ. ಈ ಪುಟ್ಟ ಹಳ್ಳಿಯಲ್ಲಿ ಜನಿಸಿ, ವಿಶ್ವ ಮಾನವ ಸಂದೇಶದ ಮೂಲಕ ವಿಶ್ವ ಮಾನ್ಯತೆ ಗಳಿಸಿದವರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ. ಕನ್ನಡ ಸಾಹಿತ್ಯದ ಮೂಲಕ ಕನ್ನಡ ನಾಡನ್ನು ವಿಶ್ವಕ್ಕೆ ಪರಿಚಯಿಸಿದ ಮೇರು ವ್ಯಕ್ತಿತ್ವ ಅವರದ್ದು.
ಸಾಹಿತ್ಯ ಸಾಧನೆಯ ಶಿಖರಪ್ರಾಯರಾಗಿ ಇಂದಿಗೂ ಕನ್ನಡ ನಾಡಿನ ಮೇರು ಸದೃಶ ವ್ಯಕಿತ್ವದ ಪ್ರಾಥಃಸ್ಮರಣೀಯರೆನಿಸಿದ ಸಾಹಿತ್ಯ ದಿಗ್ಗಜರಾಗಿದ್ದಾರೆ. ಕನ್ನಡದಲ್ಲಿ ಶ್ರೀರಾಮಾಯಣ ದರ್ಶನಂ ಮಹಾಕಾವ್ಯವನ್ನು ಬರೆದು ತನ್ನ ಗುರುಗಳಾದ ಟಿ.ಎಸ್. ವೆಂಕಣ್ಣಯ್ಯರಿಗೆ ಗುರುದಕ್ಷಿಣೆಯಾಗಿ ಸಮರ್ಪಿಸಿದಂತಿದೆ. ಇದು ಮೊದಲ ಜ್ಞಾನಪೀಠ ಪ್ರಶಸ್ತಿಯನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಪಡೆಯಿತು. ಹಾಗೆಯೇ ಕನ್ನಡ ಸಾಹಿತ್ಯ ಸೇವೆಗಾಗಿ ನೀಡುವ ಎಲ್ಲಾ ಶ್ರೇಷ್ಠ ಪ್ರಶಸ್ತಿಯನ್ನು ಅರ್ಹವಾಗಿಯೇ ಮೊದಲು ಪಡೆದವರು ಪುಟ್ಟಪ್ಪ. ನಾಡಿನ ರಸಋಷಿ ಕವಿಯೆಂದು, ಮಲೆನಾಡ ಕವಿಯೆಂದು, ಕನ್ನಡದ ವರ್ಡ್ಸ್ ವರ್ತ್ ಎಂದೂ ಸಾಹಿತ್ಯ ಪ್ರೇಮಿಗಳಿಂದ ಕರೆಸಿಕೊಂಡರು ಅವರು. ರಾಷ್ಟ್ರಕವಿಯೆಂದು ಗೌರವಿಸಲ್ಪಡುವ ಇವರು ಪಂಪ ಪ್ರಶಸ್ತಿ, ಪದ್ಮಭೂಷಣ, ಕರ್ನಾಟಕ ರತ್ನ ಪ್ರಶಸ್ತಿ ಗಳಂತೆ ಅನೇಕ ಗೌರವವನ್ನು ಪಡೆದರಲ್ಲದೇ ಮೈಸೂರು ಬೆಂಗಳೂರು, ಕರ್ನಾಟಕ, ಗುಲ್ಬರ್ಗ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಪಡೆದಿದ್ದಾರೆ.

ಕನ್ನಡಾಭಿಮಾನ
ಸರ್ವೋದಯ, ಸರ್ವಧರ್ಮ, ಸಮನ್ವಯ, ಪೂರ್ಣದೃಷ್ಟಿ, ಪ್ರಕೃತಿ ಸೌಂದರ್ಯೋಪಾಸನೆ ಮತ್ತು ಅನಿಕೇತನ ಪ್ರಜ್ಞೆಯು ಕುವೆಂಪುರವರ ಜೀವನದ ಆದರ್ಶಸೂತ್ರಗಳಾಗಿವೆ. ಕೋಟಿಕನ್ನಡಿಗರ ಸುಪ್ರಭಾತದ ಗೀತೆಯಂತಿರುವ ಜೈ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ …ಈ ಗೀತೆಯು ಪ್ರತಿಯೊಬ್ಬ ಕನ್ನಡಿಗನಲ್ಲೂ ಕನ್ನಡಾಭಿಮಾನ ಹಾಗೂ ರಾಷ್ಟ್ರೀಯತೆಯ ಭಾವವನ್ನು ಮೂಡಿಸುವಂತೆ ಕುವೆಂಪುರವರಿಂದ ರಚನೆಗೊಂಡಿದೆ. ಅಂತೆಯೇ ದೇಶದ ಬೆನ್ನೆಲುಬು, ನೇಗಿಲಯೋಗಿ, ಅನ್ನದಾತನೆಂದು ಕರೆಸಿಕೊಂಡಿರುವ ರೈತನ ಬೆವರ ಹನಿಗಳಲ್ಲೂ ಶ್ರಮಸಂಸ್ಕೃತಿಯ ನಿಷ್ಠೆಯಿದೆ ಎಂದು ಹೇಳುತ್ತಾ ಆತನಿಗೆ ಗೌರವ ಸಲ್ಲಿಸಲು ನೇಗಿಲ ಹಿಡಿದಾ ಹೊಲದೊಳು ಹಾಡುವ ಉಳುವ ಯೋಗಿಯ ನೋಡಲ್ಲಿ ….” ಎಂದು ರಚಿಸಿದ್ದರು. ಈ ಗೀತೆಯ ಪ್ರತೀ ಸಾಲುಗಳು ಕೃಷಿ ಸಂಸ್ಕೃತಿಯನ್ನು ಬಿಂಬಿಸುವುದರ ಜೊತೆಗೆ ಅನ್ನಬ್ರಹ್ಮನಿಗೆ ಗೌರವ ಸಲ್ಲಿಸಿದಂತಿದೆ. ಇಂದು ನಾಡಿನೆಲ್ಲೆಡೆ ರೈತ ಗೀತೆಯಾಗಿಯೂ ಸರಕಾರಿ ಕಾರ್ಯಕ್ರಮಗಳಲ್ಲಿ ಅಧಿಕೃತವಾಗಿ ಹಾಡು ಮೊಳಗುತ್ತಿದೆ. ನವೋದಯ ಚಿಂತನೆಯಲ್ಲಿ ಗುರುತಿಸಿಕೊಳ್ಳುವ ಕವಿ ಕುವೆಂಪುರವರಿಗೆ ಪ್ರಕೃತಿ ಆರಾಧನೆಯು ವಿಶೇಷವಾದ ಅನುಭೂತಿಯನ್ನು ನೀಡುತ್ತಿತ್ತು. ಆಧ್ಯಾತ್ಮದ ನೆಲೆಯಲ್ಲಿ ಪ್ರಕೃತಿ ಮತ್ತು ಕವಿ ಒಂದಾದಂತಿದೆ. ಈ ಒಳನೋಟವನ್ನು ಅವರ ಪಕ್ಷಿಕಾಶಿ ಕವನ ಸಂಕಲನದಲ್ಲಿರುವ ಹಸುರು ಪದ್ಯದ ಸಾಲುಗಳಲ್ಲೇ ಹಸುರತ್ತಲ್ ಹಸುರಿತ್ತಲ್ ಹಸುರೆತ್ತಲ್ ಕಡಲಿನಲಿ ಹಸುರ್ಗಟ್ಟಿತೊ ಕವಿಯಾತ್ಮಂ ಹಸುರ್ ನೆತ್ತರ್ ಒಡಲಿನಲಿ ” ಎಂದು ಪ್ರಕೃತಿಯ ಜೊತೆಯಲ್ಲಿಯೇ ಆತ್ಮಾನುಸಂಧಾನ ಮಾಡಿಕೊಂಡಿದ್ದಾರೆ.

ನಗರದತ್ತ ಆಕರ್ಷಿತರಾದವರಲ್ಲ
ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ತೊಡಗಿಸಿಕೊಂಡ ಕುವೆಂಪು ಅವರ ಬರವಣಿಗೆಯು ಓದುಗರಲ್ಲಿ ಆಸಕ್ತಿಯನ್ನು ಮತ್ತು ವಿಮರ್ಶಿಸುವಲ್ಲಿಯೂ ಮೌಲ್ಯಯುತ ಕೃತಿಗಳೆನಿಸಿಕೊಂಡಿವೆ. ಮಲೆನಾಡಿನ ಪರಿಸರದ ಸ್ವಚ್ಛಂದ ಜೀವನ ಮತ್ತು ಹಳ್ಳಿಯ ಸಂಸ್ಕೃತಿಯನ್ನು ಪ್ರೀತಿಸುತ್ತಲೇ ಅದನ್ನ ಯಥಾವತ್ತಾಗಿ ಕೃತಿಯಲ್ಲೂ ಬಿಂಬಿಸಿದ್ದಾರೆ. ಅವರು ಎಂದೂ ಹಳ್ಳಿಯಿಂದ ನಗರೆದೆಡೆ ವಲಸೆ ಹೋಗುವ ಕುರಿತು ಯೋಚನೆ ಮಾಡಿದವರಲ್ಲ. ಅಧ್ಯಾಪನದ ಕಾರಣಕ್ಕಾಗಿ ಕರ್ನಾಟಕವನ್ನು ಸುತ್ತಿದವರು. ಹಾಗೆಯೇ ‌ಹಳ್ಳಿಯ ಮನೆಗಳ ಮನಗಳು ಸಂಭ್ರಮಿಸುವ ಅಪ್ಪಟರೂಪವನ್ನು ತನ್ನ ಕಾದಂಬರಿಗಳ ಮೂಲಕವೂ ಅಂತೆಯೇ ಇನ್ನಿತರ ಕೃತಿಗಳ ಮೂಲಕ ಚಿತ್ರಿಸಿದ್ದಾರೆ. ಕುವೆಂಪು ಅವರ ಜೀವನ ರೀತಿ, ಸಾಹಿತ್ಯ ಪ್ರೀತಿ ತನ್ನ ಮನೆಯ ಸಮೀಪದ ಕವಿಶೈಲದ ಕಲ್ಲಿನ ಪೀಠದಲ್ಲೇ ನಡೆಯುತ್ತಿತ್ತು. ಸುತ್ತಮುತ್ತಲಿನ ದಟ್ಟ ಹಸಿರ ಕಾನನ, ಬೆಟ್ಟ ಗುಡ್ಡ ನದಿ ಮುಗಿಲು, ಖಗ ಮಿಗಗಳೇ ಕವಿತೆ ಕಾದಂಬರಿಗೆ ಉಸಿರಾಗಿತ್ತು.

ವಾಗ್ದೇವಿ ಕೃಪೆಗೆ ಪಾತ್ರ
ಕುವೆಂಪುರವರು ಹೈಸ್ಕೂಲ್ ಓದುತ್ತಿದ್ದ ಸಂದರ್ಭದಲ್ಲೇ ಕವಿತೆ ಬರೆಯುತ್ತಿದ್ದರು. ಆಂಗ್ಲಭಾಷೆಯಲ್ಲಿ ಕವಿತೆಯನ್ನು ಬರೆಯಬೇಕು ಆ ಭಾಷೆಯಲ್ಲಿ ಇರುವಷ್ಟು ಉದಾತ್ತ ಭಾವಗಳು ಉನ್ನತ ವಿಚಾರಗಳು ಕನ್ನಡ ಭಾಷೆಯಲ್ಲಿ ಇಲ್ಲ ಎಂದು ಭಾವಿಸಿದ್ದರು. ಆದರೆ, ಅಂದು ವಿಶೇಷ ಉಪನ್ಯಾಸ ನೀಡಲು ಬರುತ್ತಿದ್ದ ಐರಿಷ್ ಕವಿ ಜೇಮ್ಸ್ ಎಚ್. ಕಸಿನ್ಸ್ ಅವರೇ ಕನ್ನಡ ಭಾಷೆಯಲ್ಲೇ ಬರೆಯುವಂತೆ ಪುಟ್ಟಪ್ಪನವರಿಗೆ ಸೂಚಿಸಿದ್ದರು. ಅಂದಿನಿಂದಲೇ ಕನ್ನಡದಲ್ಲೇ ಎಲ್ಲಾ ಸಾಹಿತ್ಯವನ್ನು ಬರೆಯುವೆನು ಎಂದು ತೀರ್ಮಾನಿಸಿದರು ಪುಟ್ಟಪ್ಪ. ಕನ್ನಡದಲ್ಲೇ ಸಾಹಿತ್ಯ ಕೃಷಿ ಮಾಡುವ ಮೂಲಕ ಕನ್ನಡ ವಾಗ್ದೇವಿಯ ಕೃಪೆಗೆ ಪಾತ್ರರಾದರು. ಅನಂತರದ ದಿನಗಳಲ್ಲೂ ಇಂಗ್ಲೀಷ್ ವಿರೋಧಿಯಾಗದೇ ಕೊನೆ ಕೊನೆಗೆ ಇಂಗ್ಲೀಷ್ ಬಿಟ್ಟು ಕನ್ನಡದಲ್ಲೇ ಬರೆಯಲು ಮುಂದಾದರು. ಒಂದು ವೇಳೆ ಪುಟ್ಟಪ್ಪ ಕನ್ನಡದಲ್ಲೇ ಬರೆಯಲು ಮನಸ್ಸು ಮಾಡದಿರುತ್ತಿದ್ದರೇ ಇಂದು ನಮ್ಮ ಕನ್ನಡ ಸಾಹಿತ್ಯ ಬಡವಾಗಿ ಬಿಡುತ್ತಿತ್ತೆನೋ ಎಂದು ಅನ್ನಿಸುತ್ತಿದೆ.

ಕುವೆಂಪು ಕಾದಂಬರಿ
ಕುವೆಂಪು ಅವರು ಎರಡು ಕಾದಂಬರಿ ಬರೆದಿದ್ದಾರೆ. ಒಂದು ಮಲೆಗಳಲ್ಲಿ ಮದುಮಗಳು ಇನ್ನೊಂದು ಕಾನೂರು ಹೆಗ್ಗಡಿತಿ. ಅವೆರಡು ಕೃತಿಯ ವಿಷಯಗಳು ಸಿನಿಮಾವಾಗಿ ಬಹಳಷ್ಟು ಪ್ರಸಿದ್ಧಿಯನ್ನು ಪಡೆಯಿತ್ತಲ್ಲದೇ ಈ ಎರಡೂ ಕೃತಿಗಳ ಮೇಲೆ ವಿಮರ್ಶಕರ ವ್ಯಾಖ್ಯಾನ ರೂಪವು ಬೇರೆ ಬೇರೆ ಕೃತಿಗಳಾಗಿ ಮತ್ತೆ ಓದುಗರಿಗೆ, ಸಂಶೋಧಕರಿಗೆ ಇನ್ನಷ್ಟು ವಿಚಾರಗಳನ್ನು ತಿಳಿಸಿಕೊಡುತ್ತಿದೆ. ಕುವೆಂಪುರವರ ಭಾವಗೀತೆಗಳು ಕೂಡ ಪ್ರಕೃತಿದತ್ತವಾಗಿಯೇ ಬಂದ ಸೃಜನ ಸಾಹಿತ್ಯವಾಗಿ ಲೋಕಪ್ರಸಿದ್ಧಿಯಾಗಿದೆ. ಕುವೆಂಪು ನಾಟಕಗಳು ಸಮಾಜದ ಕಟ್ಟಕಡೆಯ ಶ್ರೀಸಾಮಾನ್ಯನಿಗೂ ನ್ಯಾಯ ಒದಗಿಸಿಕೊಡುವ ಧ್ವನಿಯಾಗಿಯೂ ಮೂಡಿ ಬಂದಿದೆ. ಸಣ್ಣಕತೆಗಳು, ಮಹಾ ಸಾಧಕರ ಜೀವನಚರಿತ್ರೆಗಳು ವಿಮರ್ಶಾ ಲೇಖನಗಳು, ಮಕ್ಕಳ ಸಾಹಿತ್ಯಗಳು ವೈಚಾರಿಕ ಲೇಖನಗಳು ಬಿಡಿಬರಹಗಳು ಮೊದಲಾದವುಗಳೆಲ್ಲವೂ ತನ್ನ ಲೇಖನಿಯ ನಿರೂಪಣೆಯಲ್ಲಿ ವಿಶೇಷವಾದ ಮೌಲ್ಯಗಳು ಮತ್ತು ಶಬ್ದಸಂಪತ್ತಿನ ಗಣಿಯಾಗಿ ತುಂಬಿ ಬಂದಿದೆ. ವಿಜ್ಞಾನ ವಿಷಯಗಳಲ್ಲೂ ಆಸಕ್ತಿ ಹೊಂದಿದ್ದರು. ಅವರ ಆತ್ಮಕತೆ ನೆನಪಿನ ದೋಣಿಯಲ್ಲಿ ತನ್ನನ್ನು ತಾನೇ ಮುಚ್ಚುಮರೆ ಇಲ್ಲದೆಯೇ ಎಲ್ಲವನ್ನೂ ಚಿತ್ರಿಸಿಕೊಂಡಿದ್ದಾರೆ. ದಶಂಬರ ೨೯ ಸಾಹಿತ್ಯ ಗಂಗೆಯಲ್ಲಿ ಮಿಂದು ಪುನೀತರಾದ ಕವಿ ಕುವೆಂಪುರವರ ಜನ್ಮ ದಿನವಾಗಿದೆ. ಆಶ್ಚರ್ಯವೆಂದರೆ ಒಬ್ಬನ ಹುಟ್ಟಿನಿಂದ ಅದೆಷ್ಟೋ ಸಾಹಿತ್ಯ ಕೃತಿಗಳು ಹುಟ್ಟಿ ಮತ್ತೆ ಆ ಕೃತಿಗಳು ಒಬ್ಬೊಬ್ಬ ಸಹೃದಯಿಗನಿಂದ ಮೌಖಿಕವಾಗಿಯೂ ಉಪನ್ಯಾಸರೂಪದಲ್ಲಿ, ಕೃತಿಯ ರೂಪದಲ್ಲಿಯೂ ಮತ್ತೆ ‌ಹುಟ್ಟು ಪಡೆಯುವುದು. ಅದರ ಮೂಲ ಹುಟ್ಟಿನಿಂದಲೇ ಎಂಬುದು ಗಮನಾರ್ಹ ವಿಷಯ.

ಕೊನೆಯ ಮಾತು
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕಾರ್ಕಳ ತಾಲೂಕು ಘಟಕ ವಿಶೇಷವಾಗಿ ಸಾಹಿತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಕುವೆಂಪು ಜನ್ಮ ದಿನಾಚರಣೆಯನ್ನು ಆಚರಿಸುತ್ತಿದೆ. ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಅವರ ತಂಡ ಕಳೆದ ೫ ವರುಷಗಳಿಂದ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಈ ಕಾರ್ಯಕ್ರಮದ ಮೂಲಕ ಕುವೆಂಪು ಸಾಹಿತ್ಯ ಸಂಪದವನ್ನು ಮತ್ತೆ ಮತ್ತೆ ಓದುವಂತೆಯೂ ಹಾಗೂ ಯುವ ಮನಸ್ಸುಗಳಲ್ಲಿ ಸೃಜನ ಸಾಹಿತ್ಯ ಪರಂಪರೆಯನ್ನು ಸೃಷ್ಟಿಸಲು ಉತ್ತಮ ಅವಕಾಶಗಳನ್ನು ನೀಡುತ್ತಿದೆ. ಕುವೆಂಪು ಸಾಹಿತ್ಯ ಅಧ್ಯಯನ ಅದೊಂದು ಮಹಾಸಾಧನೆ. ಅದರಲ್ಲಿಯೂ ಮಹಾದಾನಂದವಿದೆ ಆಳ ಅರಿವಿನ ಹರವಿದೆ. ಸರ್ವ ಜನಾಂಗದ ಶಾಂತಿಯ ತೋಟವೆನಿಸಿದ ಈ ನಾಡಿನಲ್ಲಿ ಪ್ರತಿಯೊಬ್ಬರೂ ಒಟ್ಟಿಗೆ ಬಾಳುವ ತೆರದಲಿ ಹರಸಿದ್ದಾರೆ. ಅಂತೆಯೇ ಬಾಳೋಣ… ಸಾಹಿತ್ಯ ಸೇವೆಯನು ಮಾಡೋಣ.

ಗಣೇಶ್ ಜಾಲ್ಸೂರು. ಶಿಕ್ಷಕರು ಕಾರ್ಕಳ

2 COMMENTS

  1. ಕುವೆಂಪು ಅವರ ಜನ್ಮದಿನದ ಶುಭ ಸಂದರ್ಭದಲ್ಲಿ ಅವರ ಕುರಿತ ವಿಚಾರಗಳ ಮಂಡನೆ ಬಹಳ ಚೆನ್ನಾಗಿದೆ ಗಣೇಶ ಸರ್

LEAVE A REPLY

Please enter your comment!
Please enter your name here

Most Popular

error: Content is protected !!