ಕಗ್ಗದ ಸಂದೇಶ-ದೇಹವೆಂಬ ರಥಕ್ಕೆ ಬುದ್ಧಿ ಸಾರಥಿ…

“ದೇಹಾತುಮಗಳೆರಡಂಗಗಳು ಜೀವನಕೆ|
ನೇಹದಿಂದೊಂದನೊಂದಾರಿಸೆ ಲೇಸು||
ದಾಹಗೊಂಡಿರಲೊಂದು ಮಿಕ್ಕೊಂದಕ್ಕೆಲ್ಲಿ ಸುಖ|
ದ್ರೋಹ ಬೇಡೊಂದಕಂ-ಮಂಕುತಿಮ್ಮ”.

ದೇಹ ಮತ್ತು ಆತ್ಮಗಳು ನಮ್ಮ ಜೀವನದ ಎರಡು ಅಂಗಗಳು. ಇವರೆಡೂ ಪರಸ್ಪರ ಸ್ನೇಹದಿಂದ ಇದ್ದರೆ ಒಳ್ಳೆಯದು. ಯಾವುದಾದರೊಂದು ತನ್ನದೇ ಆದ ಅವಶ್ಯಕತೆಯ ದಾಹದಲ್ಲಿ ಸಿಲುಕಿದರೆ ಮತ್ತೊಂದಕ್ಕೆ ಸುಖವಿರುವುದಿಲ್ಲ. ಇವೆರಡಲ್ಲಿ ಯಾವೊಂದಕ್ಕೂ ದ್ರೋಹ ಬಗೆಯದೆ ಪರಸ್ಪರ ಹೊಂದಾಣಿಕೆಯಿದ್ದಾಗ ಜೀವನ ನೆಮ್ಮದಿಯಿಂದ ಕೂಡಿರುತ್ತದೆ ಎಂದು ಡಿ.ವಿ.ಜಿ. ಈ ಮಕ್ತಕದಲ್ಲಿ ಹೇಳಿದ್ದಾರೆ.
‘ಶರೀರಂ ಆದ್ಯಂ, ಖಲುಧರ್ಮ ಸಾಧನಂ,’ಎಂಬ ಕಾಳಿದಾಸನ ನುಡಿಯಂತೆ ಆತ್ಮದ ಉದ್ಧಾರಕ್ಕೆ ಶರೀರವೇ ಪ್ರಧಾನ ಸಾಧನ. ನಮ್ಮ ದೇಹದ ಮೂಲಕವೆ ಆತ್ಮಕ್ಕೆ ಮುಕ್ತಿ ದೊರೆಯುವುದು. ದೇಹವೇ ಮೋಕ್ಷ ಸಾಧನೆಯ ಮಾಧ್ಯಮ. ಆತ್ಮ ಇಂದ್ರಿಯಾತೀತ ಆದರೆ ದೇಹ ಇಂದ್ರಿಯ ಪ್ರೇರಿತ. ಪಂಚಭೂತಗಳಿಂದಾದ ದೇಹ ಇಂದ್ರಿಯ ಸುಖದ ಸೆಳೆತಕ್ಕೆ ಸಿಲುಕಿ ಅದರಲ್ಲೇ ಮುಳುಗಿಬಿಟ್ಟರೆ ಆತ್ಮ ಸೊರಗುತ್ತದೆ. ದೇಹವೆನ್ನುವ ರಥದಲ್ಲಿ ಸಾರಥಿಯಾಗಿ ಕುಳಿತ ಬುದ್ಧಿಯು ಮನಸ್ಸೆಂಬ ಲಗಾಮಿನ ಮೂಲಕ ಇಂದ್ರಿಯಗಳೆಂಬ ಕುದುರೆಗಳನ್ನು ನಿಯಂತ್ರಿಸಿದಾಗ ಆತ್ಮವೆಂಬ ಯಜಮಾನನ ರಥದ ಯಾನ ಸುಗಮವಾಗುತ್ತದೆ ಸೇರಬೇಕಾದ ಉದಾತ್ತ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ. ಸಾರಥಿಯ ನಿಯಂತ್ರಣ ತಪ್ಪಿದರೆ ರಥ ಅಡ್ಡಾದಿಡ್ಡಿಯಾಗಿ ಚಲಿಸಿ ದೇಹವೆನ್ನುವ ರಥಕ್ಕೂ ಮತ್ತು ಆತ್ಮಕ್ಕೂ ಎರಡಕ್ಕೂ ಹಾನಿಯಾಗುತ್ತದೆ. ಆತ್ಮ ಮತ್ತು ದೇಹಕ್ಕೆ ಪರಸ್ಪರ ಹೊಂದಾಣಿಕೆಯಿದ್ದಾಗ ಬಾಳ ಪಯಣ ಸುಖಕರವಾಗಿರುತ್ತದೆ.


ಭಗವದ್ಗೀತೆಯಲ್ಲಿ ಹೇಳುವಂತೆ ‘ಕರ್ಮಣ್ಯೇವಾಧಿಕಾರಸ್ಥೆ ಮಾ ಫಲೇಶು ಕದಾಚನ’ ಅಂದರೆ ಫಲಾಪೇಕ್ಷೆಯಿಲ್ಲದೆ ಕರ್ಮ ಮಾಡಲು ಮಾತ್ರ ನಮಗೆ ಅಧಿಕಾರ ಇರುವುದು. ನಾವು ಮಾಡಿದ ಕರ್ಮಕ್ಕೆ ತಕ್ಕ ಫಲವನ್ನು ದೇವರು ತಪ್ಪದೇ, ತಪ್ಪಿಲ್ಲದೇ ಕೊಡುತ್ತಾನೆ. ನಮಗೆ ಬಹಳ ಎಚ್ಚರಿಕೆ ಇರಬೇಕಾದುದು ನಾವು ಮಾಡುವ ಕರ್ಮದ ಮೇಲೆ. ಇಂದ್ರಿಯ ಸೆಳೆತಕ್ಕೆ ಸಿಲುಕದೆ ಕರ್ಮ ಸಾಧನೆಗೆ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ. ಶರೀರ ಸುಸ್ಥಿತಿಯಲ್ಲಿದ್ದರೆ ಮನಸ್ಸು ಮತ್ತು ಬುದ್ಧಿ ಎರಡು ಸುಸ್ಥಿತಿಯಲ್ಲಿರುತ್ತವೆ. ಇಂದ್ರಿಯ ಸೆಳೆತಕ್ಕೆ ಒಳಗಾಗದೆ ಮಾಡಬೇಕಾದ ಕಾರ್ಯವನ್ನು ಭಗವದ್ ಭಕ್ತಿಯೊಂದಿಗೆ ಶ್ರದ್ಧೆಯಿಂದ ಮಾಡಿದಾಗ ದೇಹದ ಆರೋಗ್ಯ ಮತ್ತು ಆತ್ಮೋದ್ದಾರದೊಂದಿಗೆ ಜೀವನವು ಸಾರ್ಥಕವಾಗುವುದು.

ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಕಾರ್ಕಳ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷರು










































































































error: Content is protected !!
Scroll to Top