ಸಕ್ರಿಯ ಕ್ಷಯರೋಗ ಪತ್ತೆ ಹಾಗೂ ಚಿಕಿತ್ಸಾ ಆಂದೋಲನ

ಕಾರ್ಕಳ : ರೋಗ ಲಕ್ಷಣ ಕಂಡುಬಂದರೂ ಅನೇಕರು ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಕಾರಣ ಕೊರೊನಾ ರೋಗದ ಭಯ. ಕ್ಷಯ, ಕೊರೊನಾ ರೋಗ ಲಕ್ಷಣ ಸಾಮಾನ್ಯವಾಗಿ ಒಂದೇ ತೆರನಾಗಿರುವುದರಿಂದ ಕ್ಷಯ ರೋಗದ ಪತ್ತೆಯೂ ಸಾಧ್ಯವಾಗುತ್ತಿಲ್ಲ. ರೋಗ ಪತ್ತೆ ಕಾರ್ಯವಾಗದಿದ್ದಲ್ಲಿ ಮಾರಕವಾಗುವುದಲ್ಲದೇ ಇತರರಿಗೆ ಸುಲಭವಾಗಿ ಹರಡುವ ಸಾಧ್ಯತೆಯಿದೆ ಎಂದು ತಹಶೀಲ್ದಾರ್‌ ಪುರಂದರ ಹೆಗ್ಡೆ ಹೇಳಿದರು.

ಜಿ.ಪಂ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿಗಳ ಕಚೇರಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಕ್ಷಯರೋಗ ನಿರ್ಮೂಲನ ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಡಿ. 16ರಂದು ಕಾರ್ಕಳ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಹಾಗೂ ಚಿಕಿತ್ಸಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಅತಿ ಹೆಚ್ಚು ಕ್ಷಯ ರೋಗ ಪತ್ತೆ
ಕಾರ್ಕಳ ತಾಲೂಕಿನಲ್ಲಿ ಅತಿ ಹೆಚ್ಚು ಕ್ಷಯ ರೋಗ ಪತ್ತೆಯಾಗಿದೆ. ರೋಗ ಲಕ್ಷಣ ಕಂಡು ಬಂದ 70 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2 ವಾರಗಳ ಸತತ ಕೆಮ್ಮು, ಸಂಜೆ ವೇಳೆ ಚಳಿ ಜ್ವರ, ತೂಕ ಕಡಿಮೆಯಾಗುವುದು ಮತ್ತು ಹಸಿವು ಆಗದಿರುವುದು, ಎದೆ ನೋವು, ಕಫದಲ್ಲಿ ರಕ್ತ ಬರುವಂತಹ ಲಕ್ಷಣವಿದ್ದಲ್ಲಿ ಅಂತವರು ತಕ್ಷಣವೇ ಸರಕಾರಿ ಆಸ್ಪತ್ರೆಗೆ ತೆರಳಿ ತಪಾಸಣೆಗೊಳಪಡುವಂತೆ ಕಾರ್ಕಳ ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ ಮನವಿ ಮಾಡಿಕೊಂಡರು.

ತಾ.ಪಂ. ಇಒ ಡಾ. ಮೇ. ಹರ್ಷ ಕೆ.ಬಿ., ಬಿಆರ್‌ಪಿ ಸಂತೋಷ್‌ ಕುಮಾರ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ಆರೋಗ್ಯ ಸಹಾಯಕ ಶಿವರಾಂ ರಾವ್‌ ಸ್ವಾಗತಿಸಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್‌ ಎಚ್‌. ನಿರೂಪಿಸಿದರು. ಹಿರಿಯ ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕ ಶಿವಕುಮಾರ್ ವಂದಿಸಿದರು. ‌





























































































































error: Content is protected !!
Scroll to Top