ಕಾರ್ಕಳ : ನ್ಯಾಯ ಕೇಳಲು ಡಿವೈಎಸ್ಪಿ ಕಚೇರಿ ತೆರಳಿದ್ದ ಸಂದರ್ಭದಲ್ಲಿ ಅಮಾನುಷವಾಗಿ ವರ್ತಿಸಿ, ಪ್ರಕರಣ ದಾಖಲಿಸಲು ಮುಂದಾದ ಕಾರ್ಕಳ ಡಿವೈಎಸ್ಪಿ ವಿರುದ್ಧ ನ. 26ರಂದು ತಾಲೂಕು ಪ.ಜಾ/ಪಂಗಡದ ಕುಂದುಕೊರತೆ ಸಭೆಯಲ್ಲಿ ಖಂಡನಾ ನಿರ್ಣಯ ಕೈಗೊಳ್ಳಲಾಯಿತು. ಪತ್ರಿಕೆಯೊಂದರ ವರದಿಗಾರ ಕೃಷ್ಣ ನಾಯ್ಕ್ ಅಜೆಕಾರು ಮಾತನಾಡಿ, ಓರ್ವ ಮರಾಠಿ ಸಮುದಾಯದ ಮುಖಂಡನಾಗಿ ತನ್ನದೇ ಸಮುದಾಯದ ವ್ಯಕ್ತಿಯೊಬ್ಬನಿಗಾದ ಅನ್ಯಾಯದ ಕುರಿತು ಮನವಿ ನೀಡಲು ಹೋಗಿದ್ದ ಸಂದರ್ಭ, ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಅವಾಚ್ಯಗಳಿಂದ ನಿಂದಿಸಿ, ಮೊಬೈಲನ್ನು ಕಸಿದು ದೈಹಿಕವಾಗಿ ಹಲ್ಲೆ ನಡೆಸಲು ಯತ್ನಿಸಿ ದೌರ್ಜನ್ಯ ಎಸಗಿರುತ್ತಾರೆ. ದೌರ್ಜನ್ಯಗಳು ನಡೆದಾಗ, ಅವರ ಹಿತರಕ್ಷಣೆಯನ್ನು ಕಾಯಲು ಇಂತಹ ಅಧಿಕಾರಿಗಳಿಂದ ಸಾಧ್ಯವೇ ? ಎಂದು ಪ್ರಶ್ನಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ವೃತ್ತ ನಿರೀಕ್ಷಕ ಸಂಪತ್ ಕುಮಾರ್, ಇಲಾಖಾ ಮಟ್ಟದ ಪ್ರಗತಿ ತನಿಖೆಯಲ್ಲಿದೆ. ಮುಂದಿನ ದಿನಗಳಲ್ಲಿ ಇಂತಹ ಪ.ಜಾತಿ ಮತ್ತು ಪಂಗಡಗಳ ಮುಖಂಡರು ಪೊಲೀಸ್ ಠಾಣಾ ಕಚೇರಿಗೆ ಬಂದಾಗ ಸೌಜನ್ಯದಿಂದ ವರ್ತಿಸುವುದಾಗಿ ತಿಳಿಸಿದರು.
ಬೀಗ ಜಡಿದು ಪ್ರತಿಭಟಿಸಲಾಗುವುದು
ದಲಿತ ಸಮುದಾಯಕ್ಕೆ ಅನ್ಯಾಯವಾದಾಗ ನಮ್ಮಲ್ಲಿ ಅಭಿಪ್ರಾಯ ಭೇದ ಮರೆತು, ಸರಕಾರಿ ಕಚೇರಿಗಳಿಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ದಲಿತ ಮುಖಂಡ ಶ್ರೀಧರ ಗೌಡ ಎಚ್ಚರಿಸಿದರು. ಪುರಸಭೆ ಮುಖ್ಯಾಧಿಕಾರಿಗಳು ದಲಿತ ಸಮುದಾಯದ ಜನತೆಯನ್ನು ನಿರ್ಲಕ್ಷಿಸುತ್ತಿದ್ದಾರೆ. ಅವರನ್ನು ಪ್ರಶ್ನಿಸಿದವರ ವಿರುದ್ಧವೇ ಪ್ರಕರಣ ದಾಖಲಿಸುತ್ತಾರೆ. ಇದು ನ್ಯಾಯವೇ ? ಎಂದು ಸವಿತಾ ಅವರು ಪ್ರಶ್ನಿಸಿದರು. ಶ್ರೀನಿವಾಸ ಕಾರ್ಲ ಮಾತನಾಡಿ, ಜೋಡುರಸ್ತೆಯಲ್ಲಿರುವ ಬಡ ಕುಟುಂಬಿಕನೊಬ್ಬ ಮರಣ ದೃಢೀಕರಣ ಪ್ರಮಾಣ ಪತ್ರವನ್ನು ತರಲು ಪುರಸಭೆಗೆ ತೆರಳಿದ್ದ ಸಂದರ್ಭ, ನೀರಿನ ಬಿಲ್ ಬಾಕಿಯಿದೆ ಎನ್ನುವ ಕಾರಣಕ್ಕೆ ಆಕ್ಷೇಪಿಸಿರುತ್ತಾರೆ ಎಂದು ದೂರಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ಪ.ಜಾತಿ ಮತ್ತು ಪಂಗಡದ ಜನತೆಗೆ ಭಾರಿ ತೊಂದರೆಯಾಗುತ್ತಿದೆ. ಅವರು ಕಾರ್ಯನಿರ್ವಹಣೆಯ ಮೇಲೆ ಎಲ್ಲರಿಗೂ ಅತೃಪ್ತಿಯಿದೆ ಎಂದು ಶ್ರೀನಿವಾಸ ಕಾರ್ಲ ಆರೋಪಿಸಿದರು. ನಮ್ಮ ಸಮುದಾಯಕ್ಕೆ ಅನ್ಯಾಯವಾದಾಗ ಪ್ರತಿಭಟಿಸುತ್ತೇವೆ. ಈ ಕಾರಣಕ್ಕಾಗಿ ಜೈಲಿಗೆ ಹೋದರೂ ಪರವಾಗಿಲ್ಲ ಎಂದವರು ಹೇಳಿದರು.

ಅಂಬೇಡ್ಕರ್ ಭವನ ಸ್ಥಗಿತ-ಆಕ್ರೋಶ
ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅನುದಾನ ಮಂಜೂರುಗೊಂಡು ಐದು ವರ್ಷ ಕಳೆದಿದೆ. ಸಮಾಜ ಕಲ್ಯಾಣಾಧಿಕಾರಿಗಳ ಬೇಜಾವಬ್ದಾರಿಯಿಂದ ಸ್ಥಗಿತಗೊಂಡಿದೆ ಎಂದು ಅಣ್ಣಪ್ಪ ನಕ್ರೆ ಅವರು ಆರೋಪಿಸಿದರು.
ಉಪತಹಸೀಲ್ದಾರ್ ಅವರ ವಿರುದ್ದ ಪೆರ್ವಾಜೆ ದೇವಳದಲ್ಲಿ ದಲಿತ ನಿಂದನೆ ಪ್ರಕರಣ ದಾಖಲಾಗಿದೆ. ಅವರ ಬಗ್ಗೆ ಒಳ್ಳೆಯ ಅಧಿಕಾರಿ ಎಂಬ ಶಿಫಾರಸ್ಸು ಪತ್ರವನ್ನು ದಲಿತ ಸಂಘಟನೆಯವರು ನೀಡಿರುವುದು ಆಕ್ಷೇಪಾರ್ಹ ಎಂದು ಅಶೋಕ್ ಆರೋಪಿಸಿದರು. ದಲಿತ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ ಪ್ರಕರಣದಡಿ ಕೇಸು ಆಗಿದ್ದರೂ ಆರೋಪಿಯನ್ನು ದಸ್ತಗಿರಿ ಮಾಡದೆ ಪೊಲೀಸರು ಅನ್ಯಾಯ ಎಸಗಿರುತ್ತಾರೆ ಎಂದು ಸಭೆಯಲ್ಲಿ ಪ್ರಸ್ತಾಪವಾಯಿತು.
ಹಕ್ಕುಪತ್ರವಿಲ್ಲ
ಮಾರ್ಕೇಟ್ ರಸ್ತೆಯ ಉಚ್ಚಂಗಿ ನಗರದಲ್ಲಿ 40 ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆಯಾಗಿಲ್ಲ. ಹಕ್ಕುಪತ್ರ ನೀಡುವಂತೆ ಪುರಸಭಾ ಸದಸ್ಯೆ ಪ್ರತಿಮಾ ರಾಣೆ ಆಗ್ರಹಿಸಿದರು. ನಲ್ಲೂರಿನಲ್ಲಿ ನೀಡಲಾಗಿರುವ ತಾತ್ಕಾಲಿಕ ಹಕ್ಕುಪತ್ರವನ್ನು ಬದಲಾಯಿಸಿ ನೀಡುವಂತೆ ಸುಂದರ ನಲ್ಲೂರು ಆಗ್ರಹಿಸಿದರೆ, ಪುರಸಭೆ ಮುಖ್ಯಾಧಿಕಾರಿ ರೇಖಾ ಶೆಟ್ಟಿ ವಿರುದ್ದ ಜಿಲ್ಲಾ ರಣವೀರ ಸಂಘದ ಅಧ್ಯಕ್ಷ ಶ್ರೀಧರ್ ಹಾಗೂ ಗೋವರ್ಧನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಹಸೀಲ್ದಾರ್ ಪುರಂದರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಇಲಾಖಾಧಿಕಾರಿಗಳು ಹಾಗೂ ದಲಿತ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.






























































