Wednesday, October 27, 2021
spot_img
Homeಸಂವಾದಮಹಿಳೆ ಕೈಗೆ ಅಧಿಕಾರ ನೀಡಿದರೆ ಸಾಲದು ಅಧಿಕಾರ ಚಲಾಯಿಸುವ ಸ್ವಾತಂತ್ರ್ಯವನ್ನೂ ನೀಡಬೇಕು

ಮಹಿಳೆ ಕೈಗೆ ಅಧಿಕಾರ ನೀಡಿದರೆ ಸಾಲದು ಅಧಿಕಾರ ಚಲಾಯಿಸುವ ಸ್ವಾತಂತ್ರ್ಯವನ್ನೂ ನೀಡಬೇಕು

ಪ್ರತಿಯೊಂದು ಕಾಲಘಟ್ಟವನ್ನು ನಾವು ಸೂಕ್ಷ್ಮವಾಗಿ ಗಮನಿಸುವಾಗ ಕಂಡು ಬರುವ ಅಂಶಗಳೆಂದರೆ ಹೆಣ್ಣು ಮಕ್ಕಳ ಪರಿಸ್ಥಿತಿ ಎಲ್ಲಾ ಕಾಲದಲ್ಲೂ ಒಂದೇ ರೀತಿಯಾಗಿತ್ತು. ಸಾಮಾಜಿಕ/ಧಾರ್ಮಿಕ ಸಮಾನತೆ ಇರಲಿಲ್ಲ. ವ್ಯೆದಿಕ ಕಾಲದಿಂದ ಆಧುನಿಕ ಯುಗದವರೆಗಿನ ಕಾಲಾವಧಿಯನ್ನು ಗಮನಿಸುವುದಾದರೆ ಕೆಲವೇ ಕೆಲವು ಧೀಮಂತ ಮಹಿಳೆಯರು ಎಲ್ಲ ಕಟ್ಟುಪಾಡುಗಳನ್ನು ಮೀರಿ ಅಸಾಮಾನ್ಯವಾದ ಸಾಧನೆಯನ್ನು ಮಾಡಿ ತೋರಿದ್ದಾರೆ. ಉದಾಹರಣೆಗೆ ಹೇಳುವುದಾದರೆ ಭಕ್ತಿಪಂಥದಲ್ಲಿ ಮೀರಾಬಾಯಿ, ಆಳ್ವಿಕೆ ಮತ್ತು ರಾಜಕೀಯದಲ್ಲಿ ರಝಿಯಾ ಸುಲ್ತಾನ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಕಿತ್ತೂರು ಚೆನ್ನಮ್ಮ ರಾಣಿ ಅಬ್ಬಕ್ಕ, ಹೀಗೆ ಅಲ್ಲಲ್ಲಿ ಕೆಲವರು ಕಾಣಿಸುತ್ತಾರೆ. ಆದರೆ ಸಾರ್ವತ್ರಿಕವಾಗಿ ಮಹಿಳೆಯರಿಗೆ ಸಮಾನತೆ ಇರಲಿಲ್ಲ. ಬೌದ್ಧ,ಜೈನ ಧರ್ಮಗಳಲ್ಲಿಯೂ ಗಣತಾಂತ್ರಿಕವಾಗಿ ಸಮಾನತೆ ಇರಲಿಲ್ಲ.
ರಾಜಾರಾಮ್‍ಮೋಹನ ರಾಯ್, ಈಶ್ವರಚಂದ್ರ ವಿದ್ಯಾಸಾಗರ್, ಆಚಾರ್ಯ ವಿನೋಬಾ ಭಾವೆ, ಸ್ವಾಮಿ ವಿವೇಕಾನಂದ , ಪಂಡಿತ ರಮಾಬಾಯಿ ಮೊದಲಾದವರು ಮಹಿಳೆಯರ ಸಬಲೀಕರಣಕ್ಕೆ ಒತ್ತು ಕೊಟ್ಟು ಶ್ರಮಿಸಿದ್ದಾರೆ. ನಮ್ಮ ಸಂವಿಧಾನ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡುವಲ್ಲಿ ಸಾಕಷ್ಟು ಒಳನೋಟಗಳುಳ್ಳ ಅಂಶಗಳನ್ನು ಅಳವಡಿಸಿಕೊಂಡಿದೆ. ಹಾಗೆ ನೋಡಿದರೆ ವಿಶ್ವದ ದೊಡ್ಡಣ್ಣ ಎಂದು ಹೇಳಿಕೊಳ್ಳುವ ಅಮೆರಿಕದ ಇನ್ನೂರು ಚಿಲ್ಲರೆ ವರ್ಷಗಳ ಪ್ರಜಾತಾಂತ್ರಿಕ ಇತಿಹಾಸದಲ್ಲಿ ಒಂದೇ ಒಂದು ಬಾರಿಯೂ ಒಬ್ಬ ಮಹಿಳೆ ಅಧ್ಯಕ್ಷೆಯಾದ ಉದಾಹರಣೆ ಇಲ್ಲ. ಇತ್ತೀಚಿನ ಚುನಾವಣೆಯಲ್ಲಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿ ಗೆದ್ದಿದ್ದಾರೆ ಎಂಬುದನ್ನು ಬಿಟ್ಟರೆ ಅಲ್ಲಿಯೂ ಮಹಿಳೆಯರಿಗೆ ಪ್ರಾಧಾನ್ಯತೆ ಬಹಳ ಕಡಿಮೆ. ಆಧುನಿಕತೆಯ ಚರಮಸೀಮೆಯಲ್ಲಿರುವ ಅಮೆರಿಕೆದಲ್ಲೂ ಇರುವುದು ಪುರುಷ ಪ್ರಧಾನ ಸಮಾಜ ಎಂದರೆ ಅಚ್ಚರಿಯಾಗುತ್ತದೆಯಲ್ಲವೇ? ಆದರೆ ಪರಿಸ್ಥಿತಿ ಬದಲಾಗುತ್ತಿದೆ. ಹೆಣ್ಣು ಹೆರುವ ಯಂತ್ರ ಎಂಬ ಭಾವನೆಯಿದ್ದ ಕಾಲ ಈಗಿಲ್ಲ. ಭಾರತದಲ್ಲಿ ಇಂದಿರಾ ಗಾಂಧಿ ಪ್ರಧಾನಮಂತ್ರಿಯಾಗಿ ಸುದೀರ್ಘಾವಧಿ ಅಧಿಕಾರ ಮಾಡಿದ್ದಾರೆ. ಎಷ್ಟೋ ರಾಜ್ಯಗಳಲ್ಲಿ ಮಹಿಳಾ ಮುಖ್ಯಮಂತ್ರಿಗಳಿದ್ದಾರೆ. ಆಡಳಿತದ ಆಯಕಟ್ಟಿನ ಜಾಗಗಳಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದು ಸಮರ್ಥವಾಗಿ ನಿಭಾಯಿಸಿದ್ದಾರೆ. ಅನೇಕ ರಾಷ್ಟ್ರೀಕೃತ ಬ್ಯಾಂಕುಗಳ ಮುಖ್ಯಸ್ಥರು ಇಂದಿಗೂ ಮಹಿಳೆಯರೇ ಆಗಿದ್ದಾರೆ. ಬಾಹ್ಯಾಕಾಶಕ್ಕೆ ಹೋದ ಕಲ್ಪನಾ ಚಾವ್ಲಾರಿಂದ ಹಿಡಿದು ಮಿಲಿಟರಿಯಲ್ಲಿ ಗಂಡಸಿಗೆ ಸಮದಂಡಿಯಾಗಿ ಹೋರಾಟದಲ್ಲಿ ತೊಡಗಿರುವ ಮಹಿಳೆಯರ ಸಂಖ್ಯೆ ಕಡಿಮೆಯೇನಿಲ್ಲ.
ಸತಿ ಪದ್ಧತಿ, ಬಾಲ್ಯ ವಿವಾಹ, ವರದಕ್ಷಿಣೆ, ಭ್ರೂಣ ಹತ್ಯೆ, ಶಿಶು ಹತ್ಯೆ, ಮರ್ಯಾದಾ ಹತ್ಯೆ ಇವೆಲ್ಲ ತೊಲಗಿದೆ ಎಂದು ಹೇಳಲಾಗುತ್ತಿದೆಯಾದರೂ ಪೂರ್ಣವಾಗಿ ತೊಲಗಿಲ್ಲ. ಕಾಮಪಿಪಾಸುಗಳ ಪೀಡನೆ, ದೈಹಿಕ ಕಿರುಕುಳ, ಅತ್ಯಾಚಾರ, ಬಲಾತ್ಕಾರಗಳು ಇನ್ನೂ ಅಲ್ಲಲ್ಲಿ ವರದಿಯಾಗುತ್ತಿವೆ. ವರದಿಯಾಗದ ಅದೆಷ್ಟೋ ಇಂತಹ ಹೀನ ಪ್ರಕರಣಗಳು ಸಮಾಜದ ಗಮನಕ್ಕೆ ಬಾರದೆ ನಡೆಯುತ್ತಲೇ ಇರುತ್ತವೆ.
ಹೆಣ್ಣು ಜಗದ ಕಣ್ಣು ಎನ್ನುತ್ತೇವೆ, ಹೆಣ್ಣನ್ನು ಭೂಮಿಗೆ ಹೋಲಿಸುತ್ತೇವೆ, ಭೂಮಿತಾಯಿ ಎನ್ನುತ್ತೇವೆ, ಎಲ್ಲವೂ ಸರಿಯೆ, ಆದರೆ ಸಾಮಾಜಿಕ ಸ್ತರದಲ್ಲಿ ಪೂರ್ಣಪ್ರಮಾಣದಲ್ಲಿ ಇನ್ನೂ ಹೆಣ್ಣಿಗೆ ಸ್ಥಾನಮಾನ ಮತ್ತು ಸಮಾನತೆ ಸಿಕ್ಕಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಶೇ.33 ರ ಮೀಸಲಾತಿ ನಿಗದಿಯಾಗಿದೆ. ಚುನಾವಣೆಗಳಲ್ಲಿ ಮಹಿಳಾ ಸ್ಪರ್ಧಿಗಳ ಸಂಖ್ಯೆ ಹೆಚ್ಚಾಗಿದೆ. ಪಂಚಾಯತ್ ಮಟ್ಟದಲ್ಲೂ ಅನೇಕ ಮಹಿಳೆಯರು ಅಧ್ಯಕ್ಷರಾಗಿದ್ದಾರೆ. ಆದರೆ ಇಲ್ಲೊಂದು ವಿಪರ್ಯಾಸವಿದೆ. ಹೀಗೆ ಆಯ್ಕೆಯಾಗಿ ಅಧ್ಯಕ್ಷರಾಗುವ ಎಷ್ಟೋ ಮಹಿಳೆಯರ ಸ್ಥಾನದಲ್ಲಿ ಅವರ ಗಂಡಂದಿರು ಅಧಿಕಾರ ಚಲಾಯಿಸುತ್ತಾರೆ, ಅಧಿಕಾರಿಗಳಿಗೆ ಹುಕುಂ ಕೊಡುತ್ತಾರೆ. ಇದು ಎಲ್ಲಿಯವರೆಗೆ ಇದೆ ಎಂದರೆ ಇತ್ತೀಚೆಗೆ ಒಬ್ಬ ಮಹಿಳಾ ಎಂ.ಎಲ್.ಎ. ಪರವಾಗಿ ಆಕೆಯ ಗಂಡ ಅನೇಕ ಕಾರ್ಯಕ್ರಮಗಳ ಅಧ್ಯಕ್ಷತೆ, ಉದ್ಘಾಟನೆ ಮಾಡಿದ್ದೂ ವರದಿಯಾಗಿದೆ. ಇದು ಹಾಸ್ಯಾಸ್ಪದವಲ್ಲವೇ? ಇದು ಅಲ್ಲಲ್ಲಿ ನಡೆಯುತ್ತಲೇ ಇದೆ. ಹೀಗಾಗಬಾರದು. ಮಹಿಳೆಯರು ಅಧಿಕಾರಕ್ಕೆ ಬಂದರೆ ಅವರೇ ಅದನ್ನು ನಿರ್ವಹಿಸುವಂತಾಗಬೇಕು. ಅಲ್ಲಿ ಪುರುಷರ ಹಸ್ತಕ್ಷೇಪವಿದ್ದರೆ ಅದು ಅರ್ಥಹೀನ.
ಹೆಣ್ಣು ಎಲ್ಲ ರೀತಿಯಲ್ಲೂ ಕ್ಷಮತೆ, ಅರ್ಹತೆ, ಗಟ್ಟಿತನ, ನಾಯಕತ್ವದ ಗುಣವನ್ನು ಹೊಂದಿದ್ದಾಳೆ. ಆದರೆ ಆಕೆಗೆ ಅವಕಾಶಗಳು ಸಿಕ್ಕಿರುವುದಿಲ್ಲ. ನೀನು ಹೆಣ್ಣು, ನೀನು ಅಲ್ಲಿ ಹೋಗಬೇಡ, ಅದು ಮಾಡಬೇಡ, ನಿನಗದು ಸಲ್ಲದು ಎಂಬೆಲ್ಲ ಮಾತುಗಳಿಂದ ಆಕೆಯನ್ನು ಎಳವೆಯಿಂದಲೇ ಮಾನಸಿಕವಾಗಿ ದುರ್ಬಲಗೊಳಿಸುವ ಪ್ರಕ್ರಿಯೆ ಮನೆಯಿಂದಲೇ ಆರಂಭವಾಗಿರುತ್ತದೆ. ಹಾಗಾಗಿ ಅವಕಾಶವಂಚಿತರಾಗಿ ಅದೆಷ್ಟೋ ಮಹಿಳೆಯರು ನೇಪಥ್ಯದಲ್ಲಿ ಇಂದಿಗೂ ಉಳಿದಿದ್ದಾರೆ. ಸರಕಾರ ಮಹಿಳೆಯರಿಗೆ ಇರುವ ಮೀಸಲಾತಿಯನ್ನು ಶೇ.33 ರಿಂದ ಶೇ.50ಕ್ಕೆ ಏರಿಸಬೇಕು. ಮಹಿಳೆಯರಿಗೆ ನಾಯಕತ್ವ, ಅಧಿಕಾರ ನಿರ್ವಹಿಸುವುದಕ್ಕೆ ಮುಕ್ತ ಅವಕಾಶ ಕೊಡಬೇಕು. ಆಗ ಖಂಡಿತವಾಗಿಯೂ ನಮ್ಮ ದೇಶಕ್ಕೊಂದು ಹೊಸ ಆಯಾಮ ದಕ್ಕುವುದು ಸಾಧ್ಯವಿದೆ. ವಿನಃ ಕೇವಲ ನಾಮಕಾವಾಸ್ತೆ ಮೀಸಲಾತಿಯನ್ನು ಕೊಟ್ಟರೆ ಸಾಲದು. ಈ ನಿಟ್ಟಿನಲ್ಲಿ ಸರಕಾರ ಇನ್ನಷ್ಟು ಪ್ರಬಲವಾದ ಇಚ್ಚಾಶಕ್ತಿಯನ್ನು ಪ್ರದರ್ಶಿಸಿ ಪ್ರಾಮಾಣಿಕವಾಗಿ ಕಾರ್ಯ ಪ್ರವೃತ್ತವಾಗಬೇಕಿದೆ.
ಅನುಪಮಾ ಚಿಪ್ಳೂಣ್ಕರ್‌

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!