ಬೆಂಗಳೂರು, ನ. 17: ದೇವಸ್ಥಾನಗಳ ಹುಂಡಿಗೆ ದೊಡ್ಡ ಮೊತ್ತದ ಹರಕೆ ಹಾಕುವ , ಭಾರಿ ಮೊತ್ತದ ದೇಣಿಗೆಯನ್ನು ನೀಡುವ ವಿಚಾರಗಳು ಆಗಾಗ ಸುದ್ದಿಯಾಗುತ್ತಿರುತ್ತವೆ. ಆದರೆ ಬೆಂಗಳೂರಿನ ಈ ಉದ್ಯಮಿ ಕೇರಳದ ಚೋಟಾಣಿಕ್ಕರ ಶ್ರೀ ಭಗವತಿ ದೇವಿ ಕ್ಷೇತ್ರಕ್ಕೆ ನೀಡಿದ ದೇಣಿಗೆ ಮೊತ್ತವನ್ನು ಕೇಳಿದರೆ ನೀವು ಮೂಗಿನ ಮೇಲೆ ಬೆರಳಿಸರಿಸುವುದು ಗ್ಯಾರಂಟಿ.
ಬೆಂಗಳೂರಿನ ಸ್ವಾಮೀಜಿ ಗ್ರೂಪ್ ಕಂಪೆನಿಗಳ ಮಾಲಕ ಗಾನಶ್ರವಣ್ ಅವರು ಬರೋಬ್ಬರಿ 700 ಕೋ. ರೂ.ಯನ್ನು ಈ ದೇಗುಲಕ್ಕೆ ದೇಣಿಗೆಯಾಗಿ ನೀಡಿದ್ದಾರೆ. ಈ ಹಣವನ್ನು ಬಳಸಿಕೊಂಡು ಕ್ಷೇತ್ರವನ್ನು ಜಾಗತಿಕ ಮಟ್ಟದ ಧಾರ್ಮಿಕ ಕ್ಷೇತ್ರವಾಗಿ ಪುನರ್ ನಿರ್ಮಿಸಲಾಗುವುದು. ಜೀರ್ಣೋದ್ಧಾರದ ನೀಲನಕ್ಷೆ ಸರಕಾರದ ದೇವಸ್ವಂ ಬೋರ್ಡ್ ಪರೀಶೀಲನೆಯಲ್ಲಿದೆ. ಯೋಜನೆ ಮಂಜೂರು ಆದ ಬಳಿಕ ಐದು ವರ್ಷದಲ್ಲಿ ಕ್ಷೇತ್ರ ಹೊಸದಾಗಿ ಎದ್ದು ನಿಲ್ಲಲಿದೆ.
ದೇವಸ್ಥಾನದ ಪಕ್ಕದಲ್ಲೇ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೂ ನಿರ್ಮಾಣವಾಗಲಿದೆ. ಈ ಆಸ್ಪತ್ರೆಯಲ್ಲಿ ಎಲ್ಲರಿಗೂ ಉಚಿತ ಚಿಕಿತ್ಸೆ ಸಿಗಲಿದೆ. ಎರಡು ಸೇತುವೆ, ಒಳ ಚರಂಡಿ, ಕರಕುಶಲ ಕೈಗಾರಿಕೆ ಪಾರ್ಕ್, ಕಮರ್ಶಿಯಲ್ ಟವರ್ ನೀಲನಕ್ಷೆಯಲ್ಲಿ ಸೇರಿದೆ.
ಗರ್ಭಗುಡಿಗೆ ಚಿನ್ನದ ಹೊದಿಕೆ
ದೇವಸ್ಥಾನದ ಗರ್ಭ ಗುಡಿಗೆ ಚಿನ್ನದ ಹೊದಿಕೆ ಹೊದಿಸಲಾಗುವುದು. ಇದಕ್ಕೆ 300 ಕೋ. ರೂ. ಖರ್ಚಾಗಲಿದೆ. ಚಿನ್ನದ ಲೇಪನವಿರುವ ಎರಡು ಗೋಪುರಗಳ ನಿರ್ಮಾಣಕ್ಕೆ 5 ಕೋ. ರೂ. ಖರ್ಚಾಗಲಿದೆ.
ಮರುಜೀವ ಕೊಟ್ಟ ಚೋಟಾಣಿಕ್ಕರ ಅಮ್ಮ

ಗಾನಶ್ರವಣ್ ದೇಗುಲಕ್ಕೆ ಇಷ್ಟು ದೊಡ್ಡ ಮೊತ್ತ ದೇಣಿಗೆ ನೀಡಲು ಕಾರಣವಿದೆ. ಕೆಲ ವರ್ಷಗಳ ಹಿಂದೆ ಸಮಸ್ಯಗಳ ಸುಳಿಗೆ ಸಿಲುಕಿದ ಗಾನಶ್ರವಣ್ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಆಗ ಗುರುಗಳು ಚೋಟಾಣಿಕ್ಕರ ದೇಗುಲಕ್ಕೆ ಭೇಟಿ ನೀಡಿದರೆ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದರು. ಆ ಪ್ರಕಾರ ಕ್ಷೇತ್ರಕ್ಕೆ ಬಂದು ಪ್ರಾರ್ಥಿಸಿದ ಬಳಿಕ ದೇವಿಯ ಮಹಿಮೆಯೋ ಎಂಬಂತೆ ಗಾನಶ್ರವಣ್ ಸಮಸ್ಯೆಗಳು ಕರಗಿ ಹೋದವು. ವ್ಯವಹಾರ ಮತ್ತೆ ಉಚ್ಛ್ರಾಯ ಸ್ಥಿತಿಗೆ ತಲುಪಿತು. ಅಂದಿನಿಂದ ಅವರು ಚೋಟಾಣಿಕ್ಕರ ಅಮ್ಮನ ಪರಮ ಭಕ್ತರಾಗಿದ್ದಾರೆ.
ಬಡ ಕುಟುಂಬದಲ್ಲಿ ಜನಿಸಿದ ಗಾನಶ್ರವಣ್ ಅವರಿಗೆ ಬಾಲ್ಯದಿಂದಲೇ ಸಂಗೀತದಲ್ಲಿ ಬಹಳ ಆಸಕ್ತಿಯಿತ್ತು. ಇದರಿಂದಾಗಿ ಮೆಕಾನಿಕಲ್ ಡಿಪ್ಲೊಮ ಕೋರ್ಸಿಗೆ ಸೇರಿದರೂ ಅದನ್ನು ಪೂರ್ತಿ ಮಾಡಲಿಲ್ಲ. 1995 ರಿಂದ 2016ರ ತನಕ ಅವರು ಸಂಗೀತ ಕ್ಷೇತ್ರದಲ್ಲಿ ಬದುಕು ಅರಸಿದರು. ಅದು ಕೈಹಿಡಿಯದೆ ಇದ್ದಾಗ ಚಿನ್ನ ಮತ್ತು ವಜ್ರದ ವ್ಯಾಪಾರ ಆರಂಭಿಸಿದರು. ಆರಂಭದಲ್ಲಿ ಈ ವ್ಯಾಪಾರ ಕೈ ಹಿಡಿದರೂ ಬಳಿಕ ಸಮಸ್ಯೆ ಎದುರಾಯಿತು. ಆಗ ಅವರ ಧಾರ್ಮಿಕ ಗುರು ಚೋಟಾಣಿಕ್ಕರ ದೇಗುಲಕ್ಕೆ ಭೇಟಿ ನೀಡಲು ಹೇಳಿದರು. ಅನಂತರ ಗಾನಶ್ರವಣ್ ಅವರ ಬದುಕು ತಿರುವು ಪಡೆದುಕೊಂಡಿತು.
ಎಲ್ಲಿದೆ ಈ ದೇಗುಲ?
ಚೋಟಾಣಿಕ್ಕರ ಭಗವತಿ ದೇವಸ್ಥಾನ ಇರುವುದು ಕೇರಳದ ಕೊಚ್ಚಿ ನಗರದ ಹೊರವಲಯದಲ್ಲಿ. ಕೇರಳದ ಅತಿ ಪ್ರಸಿದ್ಧ ದೇವಸ್ಥಾನಗಳಲ್ಲಿ ಇದೂ ಒಂದು. ಪುರಾತನ ಕಾಷ್ಠ ಶಿಲ್ಪ ವೈಭವದಿಂದ ಕಂಗೊಳಿಸುತ್ತಿರುವ ದೇವಸ್ಥಾನವಿದು. ಹೊಸದಾಗಿ ನಿರ್ಮಾಣವಾಗುವ ದೇವಸ್ಥಾದಲ್ಲಿ ಈ ಕಾಷ್ಠ ವೈಭವವನ್ನು ಕಾಪಿಡಲಾಗುವುದು.






































































