Sunday, October 17, 2021
spot_img
Homeಅಂಕಣರಾಜʼಪಥ (ರಾಜೇಂದ್ರ ಭಟ್‌ ಬರಹ)ಇಂದಿನ ಐಕಾನ್ - ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ

ಇಂದಿನ ಐಕಾನ್ – ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ

ಕನ್ನಡದ ಆಧುನಿಕ ಸಾಹಿತ್ಯ ಶಿಖರದ ಮೇರುಗಳನ್ನು ಅಧ್ಯಯನ ಮಾಡಲು ನಾವು ಹೊರಟಾಗ ನಮ್ಮ ನಿಲುಕಿಗೆ ಸಿಗುವ ಮೊದಲ ಹೆಸರು ಮಂಜೇಶ್ವರ ಗೋವಿಂದ ಪೈ ಅವರದ್ದು. ಅವರು ಕನ್ನಡ ಸಾಹಿತ್ಯ, ಕಾವ್ಯ, ವಿಮರ್ಶೆ ಮತ್ತು ಅನುವಾದಗಳ ವಿಭಾಗದಲ್ಲಿ ಮಾಡಿದ ಕೆಲಸ ಅತೀ ಶ್ರೇಷ್ಠವಾದದ್ದು. ಅರ್ಹವಾಗಿ ಅಂದಿನ ಮದ್ರಾಸು ಸರಕಾರ ಅವರಿಗೆ 1949ರಲ್ಲಿ ‘ರಾಷ್ಟ್ರಕವಿ’ ಎಂಬ ಗೌರವ ನೀಡಿ ಗೌರವಿಸಿತು.
1882 ಮಾರ್ಚ್ 23ರಂದು ತಮ್ಮ ತಾಯಿಯ ಮನೆಯಾದ ಮಂಜೇಶ್ವರದಲ್ಲಿ ಜನಿಸಿದರು. ಅವರ ತಂದೆ ಸಾವ್ಕಾರ ತಿಮ್ಮಪ್ಪ ಪೈ ಅವರು ಮಂಗಳೂರಿನಲ್ಲಿ ವ್ಯಾಪಾರ ಮಾಡುತ್ತಿದ್ದರು. ಗೋವಿಂದ ಪೈಗಳು ಇಂಟರ್ಮೀಡಿಯೇಟ್ ತನಕ ಮಂಗಳೂರಿನಲ್ಲಿ ಓದಿದರು. ಆಗ ತಮ್ಮ ಗುರುಗಳಾದ ಪಂಜೆ ಮಂಗೇಶರಾಯರ ಪ್ರಭಾವಕ್ಕೆ ಒಳಗಾಗಿ ಕವಿತೆ, ಕತೆಗಳನ್ನು ಬರೆಯಲು ಆರಂಭ ಮಾಡುತ್ತಾರೆ. ಠಾಗೋರರ ಗೀತಾಂಜಲಿಯ ಕವಿತೆಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿದ ಎಂ. ಎನ್. ಕಾಮತರು ಅವರ ಸಹಪಾಠಿ. ಈ ಎಲ್ಲಾ ಸಾಹಿತ್ಯಿಕ ವಾತಾವರಣವು ಅವರೊಳಗಿನ ಕವಿಯನ್ನು ಹೊರತಂದಿತು.
ಮುಂದೆ ಪದವಿ ಓದಲು ಅವರು ಮದ್ರಾಸಿನ ಕ್ರಿಶ್ಚಿಯನ್ ಕಾಲೇಜು ಸೇರಿದರು. ಅಲ್ಲಿ ಡಾಕ್ಟರ್ ಎಸ್. ರಾಧಾಕೃಷ್ಣನ್ ಅವರ ಕ್ಲಾಸಮೇಟ್ ಆಗಿದ್ದರು. ಅಂತಿಮ ವರ್ಷದ ಪರೀಕ್ಷೆಗಳು ನಡೆಯುತ್ತಿದ್ದಾಗ ಅವರ ತಂದೆ ಹಠಾತ್ ತೀರಿ ಹೋದ ಕಾರಣ ಅವರು ಪದವಿಯ ಆಸೆ ಬಿಟ್ಟು ಊರಿಗೆ ಬಂದು ತಂದೆಯ ವ್ಯಾಪಾರದ ಹೊಣೆಯನ್ನು ಹೊರಬೇಕಾಯಿತು. ಬರೆದ ಒಂದೇ ಪರೀಕ್ಷೆ ಇಂಗ್ಲಿಷ್. ಅದರಲ್ಲಿ ಅವರಿಗೆ ಚಿನ್ನದ ಪದಕ ದೊರೆಯಿತು! ಮುಂದೆ ಪದವಿ ಮುಗಿಸುವ ಅವಕಾಶಗಳು ಇದ್ದರೂ ಅವರು ಮನಸ್ಸು ಮಾಡದೆ ಸ್ವಅಧ್ಯಯನಕ್ಕೆ ತೊಡಗಿದರು.
ತಾಯಿಯ ಮನೆಯು ಮಂಜೇಶ್ವರ ಆದ ಕಾರಣ ಮತ್ತು ಅಲ್ಲೇ ದೀರ್ಘ ಅವಧಿಗೆ ನೆಲೆಸಿದರು. ಅದರಿಂದ ಅವರ ಹೆಸರಿನಲ್ಲಿ ಮಂಜೇಶ್ವರವು ಶಾಶ್ವತ ಸ್ಥಾನ ಪಡೆಯಿತು. ಅವರು ಸ್ವಂತ ಪ್ರಯತ್ನದ ಮೂಲಕ 25 ಭಾಷೆಗಳನ್ನು ಕಲಿತರು! ಅಷ್ಟೂ ಭಾಷೆಗಳ ಸಾಹಿತ್ಯವನ್ನು ಅಧ್ಯಯನ ಮಾಡಿದರು. ಕೊಂಕಣಿ ( ಅವರ ಮಾತೃಭಾಷೆ), ತುಳು, ಕನ್ನಡ, ಸಂಸ್ಕೃತ, ಮಲಯಾಳಂ, ತೆಲುಗು, ತಮಿಳು, ಮರಾಠಿ, ಒರಿಯಾ, ಬಂಗಾಳಿ, ಪಾಲಿ, ಅರ್ಧಮಾಗಧಿ, ಉರ್ದು, ಪರ್ಷಿಯಾ, ಗ್ರೀಕ್, ಲ್ಯಾಟಿನ್, ಜಪಾನ್, ಇಟಾಲಿಯನ್, ಸ್ಪಾನಿಷ್, ಪ್ರಾಕೃತ, ಹಿಂದಿ ಮತ್ತು ಗುಜರಾತಿ ಭಾಷೆಗಳ ಸಾಹಿತ್ಯವನ್ನು ಅಧ್ಯಯನ ಮಾಡಿದರು. ಅಷ್ಟೂ ಭಾಷೆಗಳಲ್ಲಿ ಓದಲು ಮತ್ತು ಬರೆಯಲು ಕಲಿತರು! ಜಪಾನೀಸ್ ಭಾಷೆಯ ಶ್ರೇಷ್ಟ ಸಾಹಿತ್ಯವನ್ನು ಕನ್ನಡಕ್ಕೆ ಭಾಷಾಂತರ ಮಾಡಿದರು. ಅವರ ಮನೆಯ ಗ್ರಂಥಾಲಯದಲ್ಲಿ 43 ಭಾಷೆಗಳ ಸಾವಿರಾರು ಗ್ರಂಥಗಳು ಇದ್ದವು.
49 ಕವಿತೆಗಳ ಗಿಳಿವಿಂಡು, 87 ಕವಿತೆಗಳ ನಂದಾದೀಪ ಇವು ಅವರ ಅತ್ಯುತ್ತಮ ಕೃತಿಗಳಲ್ಲಿ ಸ್ಥಾನ ಪಡೆದಿವೆ. ಹೃದಯ ರಂಗ, ಏಕಾಂಕ ನಾಟಕ ಅದ ಹೆಬ್ಬೆರಳು, ವೈಶಾಖಿ, ಮಣ್ಣಿನ ಸೊಗಡು, ತಾಯಿ ಇವುಗಳು ಪೈಯವರ ಮಾಸ್ಟರ್‌ ಪೀಸ್ ಕೃತಿಗಳು. ಜೀಸಸ್ ಕ್ರೈಸ್ಟ್ ಅಂತಿಮ ದಿನಗಳ ಗೋಲ್ಗೋಥಾ, ಬುದ್ಧನ ಅಂತಿಮ ದಿನಗಳ ವೈಶಾಖಿ ಅವರನ್ನು ಕನ್ನಡದ ಅಮರ ಕವಿಯಾಗಿ ಮಾಡಿದವು. ಗೊಮ್ಮಟ ಜಿನಸ್ತುತಿ ಅವರ ಶ್ರೀಮಂತ ಕೃತಿ. ಕನ್ನಡದಲ್ಲಿ ಹಲವು ಸುನೀತ (ಇಂಗ್ಲಿಷ್ ಭಾಷೆಯಲ್ಲಿ ಸಾನೆಟ್)ಗಳನ್ನು ಕೂಡ ಅವರು ರಚಿಸಿದರು. ಕ್ವಿಟ್ ಇಂಡಿಯಾ ಚಳವಳಿಯ ಪ್ರಭಾವದಿಂದ ಚಿತ್ರಭಾನು ಎಂಬ ಕೃತಿ ಹೊರಬಂದಿತು. ಜಪಾನ್ ಭಾಷೆಯ ಹಲವು ಶ್ರೀಮಂತ ಕೃತಿಗಳನ್ನು ಕನ್ನಡದಲ್ಲಿ ಓದಲು ನಮಗೆ ಸಾಧ್ಯವಾದದ್ದು ಮಂಜೇಶ್ವರ ಗೋವಿಂದ ಪೈಗಳ ಕೃಪೆಯಿಂದ ಎಂದು ಖಂಡಿತವಾಗಿ ಹೇಳಬಹುದು.
ಕನ್ನಡ ಮತ್ತು ತುಳು ಭಾಷೆಗಳ ಮೇಲೆ ತೀವ್ರವಾದ ಪ್ರೀತಿಯಿಂದ ಅವರು ರಚಿಸಿರುವ ಭಾವಗೀತೆಗಳು ಕೂಡ ತುಂಬಾ ಜನಪ್ರಿಯ ಆಗಿವೆ. ತಾಯೆ ಬಾರ ಮೊಗವ ತೋರ, ಜಯ ಜಯ ತುಳುವ ತಾಯೇ ಮಣಿವೆ ಮೊದಲಾದ ಗೀತೆಗಳು ಅವರ ಲೇಖನಿಯಿಂದ ಮೂಡಿಬಂದು ಅಮರತ್ವವನ್ನು ಪಡೆದಿವೆ.
ಸಾಹಿತ್ಯದ ಹೊರತಾಗಿ ಕೂಡ ಪೈಗಳ ಬದುಕು ಅದ್ಭುತವೇ ಆಗಿತ್ತು. ಅವರು ತಮ್ಮ ತಾಯಿಯನ್ನು ತುಂಬಾ ಪ್ರೀತಿ ಮಾಡುತ್ತಿದ್ದರು. ಅದರಿಂದ ತಮ್ಮ ಹಲವು ಕೃತಿಗಳನ್ನು ಅಮ್ಮನಿಗೆ ಅರ್ಪಣೆ ಮಾಡಿದ್ದಾರೆ. ತಮ್ಮ ಪತ್ನಿ ಕೃಷ್ಣಾ ಬಾಯಿಯನ್ನು ಅವರು 45ನೆಯ ವಯಸ್ಸಿಗೆ ಕಳೆದುಕೊಂಡರು. ಅದರಿಂದ ತುಂಬಾ ನೊಂದುಕೊಂಡ ಪೈಯವರು ತಮ್ಮ ಅಧ್ಯಯನದ ಕೊಠಡಿಯಲ್ಲಿ ಪತ್ನಿಯ ದೊಡ್ಡ ಭಾವಚಿತ್ರವನ್ನು ಗೋಡೆಗೆ ತೂಗು ಹಾಕಿದ್ದರು. ಅದಕ್ಕೆ ಪ್ರತಿ ದಿನವೂ ಒಂದು ಹೂವನ್ನು ಸಮರ್ಪಣೆ ಮಾಡದೆ ಅವರು ತಮ್ಮ ಯಾವ ಕೆಲಸವನ್ನು ಕೂಡ ಆರಂಭ ಮಾಡುತ್ತಿರಲಿಲ್ಲ! ಅವರ ಸಾಹಿತ್ಯದ ಸಾಧನೆಗೆ ಮೈಸೂರು ವಿವಿಯು ಅವರಿಗೆ ಡಿ.ಲಿಟ್ ಪದವಿಯನ್ನು ನೀಡಲು ಮುಂದೆ ಬಂದಾಗ ಅದನ್ನು ನಯವಾಗಿ ನಿರಾಕರಿಸಿದರು. ಕೊನೆಯ ಉಸಿರಿನವರೆಗೂ ಅತ್ಯಂತ ಸರಳವಾಗಿ ಮತ್ತು ಸ್ವಾಭಿಮಾನಿ ಆಗಿ ಬದುಕಿದರು.
1963ರ ಸೆಪ್ಟೆಂಬರ್ 6ರಂದು ಅವರು ನಿಧನರಾದರು. ಆಗ ಅವರಿಗೆ 80ವರ್ಷ. ಅವರ ನಂತರ ಕನ್ನಡ ನಾಡು ಅವರನ್ನು ಮರೆಯಲಿಲ್ಲ. ಮಂಜೇಶ್ವರದ ಅವರ ವಾಸದ ಮನೆಯನ್ನು ‘ಗಿಳಿವಿಂಡು’ ಎಂಬ ಹೆಸರಿನಲ್ಲಿ ಗ್ರಂಥಾಲಯ, ಮ್ಯೂಸಿಯಂ, ವಸ್ತು ಸಂಗ್ರಹಾಲಯ ಸಹಿತ ಅಭಿವೃದ್ಧಿ ಪಡಿಸಲಾಗಿದೆ. ಮಂಜೇಶ್ವರದ ಸರಕಾರಿ ಕಾಲೇಜಿಗೆ ಅವರ ಹೆಸರನ್ನು ಇಡಲಾಗಿದೆ. ಉಡುಪಿಯ ಪ್ರಸಿದ್ದ ಎಂಜಿಎಂ ಕಾಲೇಜಿನಲ್ಲಿ ಅವರ ಹೆಸರಿನಲ್ಲಿ ಒಂದು ಅದ್ಭುತ ಜಾನಪದ, ಯಕ್ಷಗಾನ ವಸ್ತು ಸಂಗ್ರಹಾಲಯ ನಿರ್ಮಾಣ ಆಗಿದೆ. 1951ರಲ್ಲಿ ಮುಂಬಯಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಅವರಿಗೆ ದೊರೆತಿತ್ತು.
ಕನ್ನಡದ ಮೊದಲ ರಾಷ್ಟ್ರಕವಿ ಆಗಿ ಅವರ ಹೆಸರು ಮತ್ತು ಸಾಹಿತ್ಯ ಚಿರಸ್ಥಾಯಿ ಎಂದೇ ಹೇಳಬಹುದು.
ರಾಜೇಂದ್ರ ಭಟ್ ಕೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!