ದಿಲ್ಲಿ, ನ.4 : ಪಟಾಕಿ ಸುಡುವುದರಿಂದ ಕೊರೊನ ವೈರಸ್ ಪ್ರಸರಣ ವೇಗ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಪಟಾಕಿ ಹೊಗೆಯಲ್ಲಿ ಏರೊಸೋಲ್ಸ್ ಇರುತ್ತವೆ. ಈ ಗಾಳಿ ಗುಳ್ಳೆಗಳ ಮೂಲಕ ಕೊರೊನ ವೈರಸ್ ಹರಡುವ ಸಾಧ್ಯತೆಯಿದೆ ಎಂದವರು ಹೇಳಿದ್ದಾರೆ.
ಹೀಗಾಗಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೊಗೆ ಕಡಿಮೆ ಇರುವ ಪಟಾಕಿಗಳನ್ನು ಸುಡಲು ಸಲಹೆ ಮಾಡಿದ್ದಾರೆ. ರಾಜಸ್ಥಾನ ಸರಕಾರ ಈಗಾಗಲೇ ದೀಪಾವಳಿಗೆ ಪಟಾಕಿ ಸುಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಕರ್ನಾಟಕ ಸರಕಾರವೂ ಪಟಾಕಿಯಿಂದ ಕೊರೊನ ಸೋಂಕು ಹರಡುವ ಸಾಧ್ಯತೆಯಿದೆಯೇ ಎಂದು ತಜ್ಞರ ಸಲಹೆ ಕೇಳಿದೆ. ಅವರು ನೀಡುವ ಸಲಹೆಯನ್ನನುಸರಿಸಿ ಸರಕಾರ ನಿರ್ಧಾರ ಕೈಗೊಳ್ಳಲಿದೆ.
ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹೊಗೆಯಿಂದ ಕೊರೊನಾ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ಈ ಸಂಬಂಧ ವೈದ್ಯಕೀಯ ತಜ್ಞರೇ ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸರ್ಕಾರ ತಜ್ಞರ ಸಮಿತಿಯೊಂದನ್ನು ರಚಿಸಿದ್ದು ಪಟಾಕಿ ನಿಷೇಧ ಮಾಡಬೇಕೇ ಬೇಡವೇ ಎಂಬ ಬಗ್ಗೆ ನಾಳೆಯೊಳಗೆ ತಜ್ಞರ ಸಮಿತಿ ವರದಿ ನೀಡಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಪಟಾಕಿ ಮಾತ್ರವಲ್ಲ, ತರಗೆಲೆ, ಬೈಹುಲ್ಲು ಇತ್ಯಾದಿಗಳನ್ನು ಸುಡುವುದರಿಂದಲೂ ಕೊರೊನಾ ವೈರಸ್ ಹರಡುವ ವೇಗ ಹೆಚ್ಚುತ್ತಿದೆ. ತ್ಯಾಜ್ಯ ಸುಡುವುದು ಕೂಡ ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ.
ಹೊಗೆಯಿಂದ ಪರಿಸರದ ಗಾಳಿ ಕಲುಷಿತವಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಈ ಗಾಳಿಯನ್ನು ಉಸಿರಾಡುವುದರಿಂದ ಶ್ವಾಸಕೋಶದ ಮೇಲೆ ಪರಿಣಾಮವಾಗುತ್ತದೆ. ಕೊರೊನಾ ವೈರಸ್ ಕೂಡ ದಾಳಿ ಮಾಡುವುದು ಶ್ವಾಸಕೋಶದ ಮೇಲೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಗರಗಳಲ್ಲಿ ವಾಯುಮಾಲಿನ್ಯ ಗರಿಷ್ಠ ಮಟ್ಟಕ್ಕೇರುತ್ತದೆ. ಸಾಮಾನ್ಯ ದಿನಗಳಲ್ಲೇ ಅಸ್ತಮಾ, ಹೃದಯ ಸಂಬಂಧಿ ಸಮಸ್ಯೆಯಿರುವವರು ವಾಯುಮಾಲಿನ್ಯದಿಂದ ಸಂಕಷ್ಟ ಅನುಭವಿಸುತ್ತಾರೆ. ಕೊರೊನಾ ಸಂದರ್ಭದಲ್ಲಿ ಕಲುಷಿತ ಗಾಳಿಯನ್ನು ಸೇವಿಸಿದರೆ ವೈರಸ್ ಸೋಂಕಿನ ದುಷ್ಪರಿಣಾಮ ತೀವ್ರವಾಗುವ ಸಾಧ್ಯತೆಯಿದೆ ಎನ್ನುವುದು ವೈದ್ಯರು ಕೊಡುವ ವಿವರಣೆ.
ಏರೊಸೋಲ್ ನಿಂದಾಗಿ ಕಫ, ಸೀನು, ಗಂಟಲು ಕೆರೆತ ಇತ್ಯಾದಿ ಸಾಮಾನ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ಇವೆಲ್ಲ ಕೊರೊನಾ ಲಕ್ಷಣಗಳು ಆಗಿರುವುದರಿಂದ ಪಟಾಕಿ ಸುಡುವಾಗ ಎಚ್ಚರಿಕೆಯಿಂದಿರಬೇಕೆಂದು ತಜ್ಞರು ಹೇಳುತ್ತಿದ್ದಾರೆ.
