ಕಾರ್ಕಳ : ಓರ್ವ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಉನ್ನತ ಸ್ಥಾನಮಾನ ನೀಡುವ ಪಕ್ಷವೊಂದಿದ್ದರೆ ಅದು ಬಿಜೆಪಿ. ಹೀಗಾಗಿ ಭಾರತೀಯ ಜನತಾ ಪಕ್ಷ ಉಳಿದ ಪಕ್ಷಗಳಿಗಿಂತ ಭಿನ್ನವೆಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಅಭಿಪ್ರಾಯಪಟ್ಟರು.
ಅವರು ಕಾರ್ಕಳ ಬಾಹುಬಲಿ ಪ್ರವಚನ ಮಂದಿರದಲ್ಲಿ ಅ. 28ರಂದು ನಡೆದ ತಾಲೂಕು ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾತನಾಡಿ, ಬಿಜೆಪಿ ರಾಷ್ಟ್ರೀಯತೆ, ಹಿಂದುತ್ವದ ಆಧಾರದ ಮೇಲೆ ರಾಜಕಾರಣ ಮಾಡುತ್ತಿದೆ. ಕಾರ್ಯಕರ್ತರಿಗೆ ಪಕ್ಷದ ಸಿದ್ದಾಂತ ಮುಖ್ಯವೇ ಹೊರತು ಹುದ್ದೆಯಲ್ಲ. ಪ್ರಾಮಾಣಿಕವಾಗಿ, ನಿಷ್ಠೆಯಿಂದ ಕಾರ್ಯನಿರ್ವಹಿಸಿದಲ್ಲಿ ಪಕ್ಷವೇ ಉನ್ನತ ಸ್ಥಾನ ನೀಡುವುದು. ಇದಕ್ಕೆ ನಾನೇ ಸಾಕ್ಷಿಯೆಂದು ಸಿದ್ದಿ ಹೇಳಿದರು.
ಕಾರ್ಯಕರ್ತರು ಸಿದ್ದರಾಗಿ- ಮಟ್ಟಾರು

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಶೆಟ್ಟಿ, ಮುಂಬರುವ ಗ್ರಾ.ಪಂ. ಚುನಾವಣೆಗೆ ಬಿಜೆಪಿ ಕಾರ್ಯಕರ್ತರು ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕಿದೆ. ಕಾರ್ಕಳ-ಹೆಬ್ರಿ ತಾಲೂಕಿನ 34 ಗ್ರಾ.ಪಂ.ಗಳಲ್ಲೂ ಬಿಜೆಪಿ ಬೆಂಬಲಿತರು ಗೆಲವು ಸಾಧಿಸುವ ನಿಟ್ಟಿನಲ್ಲಿ ಒಗ್ಗೂಡಿ ಶ್ರಮಿಸಬೇಕೆಂದರು.
ಮೂಡಬಿದ್ರಿ ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ಮಣಿರಾಜ್ ಶೆಟ್ಟಿ, ರವಿ ಅಮೀನ್, ಪಕ್ಷದ ಹಿರಿಯ ಮಾರ್ಗದರ್ಶಕರಾದ ಬೋಳ ಪ್ರಭಾಕರ್ ಕಾಮತ್, ಎಂ.ಕೆ. ವಿಜಯ ಕುಮಾರ್, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಜಯರಾಮ ಸಾಲಿಯಾನ್, ವಿಭಾಗ ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರವೀಂದ್ರ ಕುಮಾರ್ ಸ್ವಾಗತಿಸಿ, ಮಂಡಲ ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್ ನಿರೂಪಿಸಿದರು. ಮಹಿಳಾ ಮೋರ್ಚಾ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ ವಂದಿಸಿದರು.










































































