ಬೆಂಗಳೂರು, ಅ.20: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇನ್ನು ಬಹಳ ದಿನ ಅಧಿಕಾರದಲ್ಲಿ ಇರುವುದಿಲ್ಲ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದ್ದಾರೆ.
ಮೇಲಿನವರಿಗೂ ಯಡಿಯೂರಪ್ಪ ಸಾಕಾಗಿದ್ದಾರೆ, ಯಡಿಯೂರಪ್ಪನವರ ನಂತರ ಉತ್ತರ ಕರ್ನಾಟಕವವರೇ ಮುಖ್ಯಮಂತ್ರಿ ಯಾಗಲಿದ್ದಾರೆ ಎಂದು ಹೇಳಿದ್ದಾರೆ.
ಇನ್ನೇನು ಅವರು ಬಹಳ ದಿವಸ ಅಧಿಕಾರದಲ್ಲಿ ಇರುವುದಿಲ್ಲ. ಏಕೆಂದ್ರೆ ಮೇಲಿನವರಿಗೂ ಅವರು ಸಾಕಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೊನ್ನೆ ಉಮೇಶ ಕತ್ತಿ ಇವರು ಶಿವಮೊಗ್ಗ ಮುಖ್ಯ ಮಂತ್ರಿಯೋ? ಕರ್ನಾಟಕದ ಮುಖ್ಯ ಮಂತ್ರಿಯೋ ಎಂದು ಹೇಳಿಕೆ ನೀಡಿದ್ದರು ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯ, ಚಾಮರಾಜನಗರ ಮತ್ತು ಕೋಲಾರದಲ್ಲಿ ಯಾರಾದರೂ ಬಿಜೆಪಿಗೆ ಓಟ್ ಹಾಕ್ತಾರಾ? ಎಂದು ಪ್ರಶ್ನಿಸಿದ ಅವರು, ಉತ್ತರ ಕರ್ನಾಟಕದವರೇ 100 ಶಾಸಕರನ್ನು ಆಯ್ಕೆ ಮಾಡಿ ಕಳುಹಿಸುತ್ತಾರೆ.ಆ ಮೇಲೆ ಆ ಕಡೆ 10 ರಿಂದ 15 ಶಾಸಕರು ಆಯ್ಕೆಯಾಗಿರುತ್ತಾರೆ. ಹೀಗಾಗಿ ಮೇಲಿನವರಿಗೂ ಇದು ಗೊತ್ತಾಗಿದೆ.ಮುಂದಿನ ಉತ್ತರಾಧಿಕಾರಿ ಉತ್ತರ ಕರ್ನಾಟಕದವರೇ ಆಗುತ್ತಾರೆ. ಪ್ರಧಾನಿ ಮಂತ್ರಿಗಳ ಮನಸ್ಸಿನಲ್ಲಿ ಈ ವಿಚಾರ ಬಂದಿದೆ. ಯಡಿಯೂರಪ್ಪ ಬಳಿಕ ಉತ್ತರ ಕರ್ನಾಟಕವದವರಿಗೆ ಸಿಎಂ ಮಾಡೋಣ ಎಂದಿದ್ದಾರೆ. ಅದೂ ಕೂಡ ಬಹುತೇಕ ಫೈನಲ್ ಆಗಿದೆ ಎಂದು ಅವರು ತಿಳಿಸಿದ್ದಾರೆ.
ಆಮೂಲಕ ನವೆಂಬರ್, ಡಿಸೆಂಬರ್ ವೇಳೆಗೆ ಮುಖ್ಯಮಂತ್ರಿ ಬದಲಾವಣೆ ಖಚಿತವೆನ್ನುವ ಮಾಹಿತಿಯನ್ನು ಯತ್ನಾಳ್ ಸಭೆಯಲ್ಲಿ ಹೇಳಿದ್ದಾರೆ.















































































