ಅದೇ ಅನಾಮಿಕ ಹಾದಿ…

ನೀನಿರುವ ವಾಸ ನನಗಿನ್ನೂ ಗೊತ್ತಿಲ್ಲ,
ನಾನಾದರೋ…
ಬರಡು ಭುವಿಯ ನಡು
ಮಧ್ಯಾಹ್ನ ಬೆಂದು ಬಾಯಿತೆರೆದ
ಸಾವಿನಾಚೆಗೆ ಬಂದು ನಿಂತಿದ್ದೇನೆ.

ನೀನಿರುವ ವಾಸ ನನಗಿನ್ನೂ ಗೊತ್ತಿಲ್ಲ.
ಬದುಕಿನಲಿ ಬಣ್ಣದ ಕನಸುಗಳಿಲ್ಲ.
ಎಳೆದು ತಿನ್ನುವ ಹಣಹದ್ದುಗಳೊಂದಿಗೆ
ಹೋರಾಡಲು ತೋಳ್ಬಲವಿಲ್ಲ
ಭಾವನೆಗಳಿಗೆ ಬಣ್ಣ ಹಚ್ಚುವವರಿಲ್ಲ

ಮರೆತು ಹೋದ ನಗುವಿನ ಹಿಂದೆ ,
ಸಿಗದೇ ಹೋದ ನೋವುಗಳು
ಕ್ಷಣ ಕ್ಷಣಕ್ಕೂ ಬಣ್ಣ ಬದಲಿಸುವ
ಮಹಾಪುರುಷ ಗೋಸುಂಬೆಗಳಿವೆ..

ಇಲ್ಲದವರನ್ನು ಕೇಳುವವರಿಲ್ಲ
ಗೆದ್ದವರ ಬಾಲ ಹಿಡಿಯುವ
ಧಾವಂತದಲ್ಲಿ,ಸೋತವರನ್ನು
ತುಳಿಯುವವರೆ ಎಲ್ಲಾ
ಆದರೂ ಬಯಕೆಗಳಿಗೆ ಸಾವಿಲ್ಲ

ನೀನಿರುವ ವಾಸ ನನಗಿನ್ನೂ ಗೊತ್ತಿಲ್ಲ.
ನಾನಾದರೋ…ಜೀವಂತ ಶವ
ಸಾವು ಇರದ ಮನೆಯ ಸಾಸಿವೆ ತಂದಿದ್ದೇನೆ.
ಸತ್ತವನನ್ನು ಬದುಕಿಸೋ ಬುದ್ಧ,
ನಿಟ್ಟುಸಿರು ಬಿಟ್ಟು ಬುದ್ದನೆಂದ..
ಅಂದು ಹುಟ್ಟಿದ್ದಕ್ಕೆ ಬುದ್ಧನಾದೆ
ಇಂದು ನಾನೂ ಬುದ್ಧನಲ್ಲ
ಬುದ್ಧ ನಡೆದ
ಅದೇ ಅನಾಮಿಕ ಹಾದಿ…!

ಪುಷ್ಪರಾಜ್ ರೈ, ಮಲಾರಬೀಡು





















































































































































error: Content is protected !!
Scroll to Top