DDLJ – ಶತಮಾನದ ಎಪಿಕ್ ಸಿನೆಮಾಕ್ಕೆ ರಜತ ಸಂಭ್ರಮ

0

ಫಲವತ್ತಾದ ಸೂರ್ಯಕಾಂತಿ ತೋಟದಲ್ಲಿ  ನಡುವೆ ಅಪ್ಪಿಕೊಂಡ ರಾಜ್ ಮತ್ತು ಸಿಮ್ರಾನ್ ಉತ್ಕಟವಾದ ಪ್ರೀತಿಯ ತೂರಿಕೊಂಡು ಬರುವ ‘ತುಜೆ ದೇಖಾ ತೋ ಹಿ ಜಾನಾ ಸನಮ್’ ಹಾಡು! ಇದು ಭಾರತದ ಮಹೋನ್ನತ ಹಾಗೂ ಬಹುಕೀರ್ತಿ ಪಡೆದ ಮತ್ತು ದಾಖಲೆ ಮೇಲೆ ದಾಖಲೆ ಬರೆದ  ಹಿಂದಿ ಸಿನೆಮಾದ ಝಲಕ್. ( ಅಕ್ಟೋಬರ್ 20,1995)  ಆ ಸಿನೆಮಾ ಬಿಡುಗಡೆ ಆಗಿ ಇಂದಿಗೆ 25 ವರ್ಷ!ಅದುವೇ ಲೆಜೆಂಡ್‌ ಎಂಬ ಅಭಿದಾನಕ್ಕೆ ಪಾತ್ರವಾದ ದಿಲ್‌ವಾಲೇ ದುಲ್ಹನಿಯ ಲೇ ಜಾಯೇಂಗೆ. ಕೊರೊನಾ ಆರಂಭವಾಗುವವರೆಗೂ ಆ ಸಿನೆಮಾ ಮುಂಬೈಯ ‘ಮರಾಠಾ ಮಂದಿರ’ ಚಿತ್ರ  ಮಂದಿರದಲ್ಲಿ 24 ವರ್ಷ ನಿರಂತರ ತುಂಬಿದ ಗೃಹಗಳಿಂದ ಪ್ರದರ್ಶನ ಕಂಡಿತ್ತು ಅನ್ನುವುದು ಅದರ ಹೆಗ್ಗಳಿಕೆ! 1200 ವಾರ ಒಂದೇ ಥಿಯೇಟರಿನಲ್ಲಿ ಅದೇ ಸಿನೆಮಾ ನಡೆಯುವುದೆಂದರೆ ಅದೆಂತಹ ಸಾಧನೆ!

      ಆ ಸಿನೆಮಾ ಆರಂಭ ಆದದ್ದೇ ಬಹಳ ದೊಡ್ಡ ಕಥೆ!  ಯಶ್ ಚೋಪ್ರಾ ಎಂಬ ಬಹು ದೊಡ್ಡ ನಿರ್ಮಾಪಕ ಕಮ್  ನಿರ್ದೇಶಕನ ಮಗ ಆದಿತ್ಯ ಚೋಪ್ರಾ ನಿರ್ದೇಶನ ಮಾಡಿದ ಮೊದಲ ಫಿಲ್ಮ್ ಅದು!  ಕತೆ, ಚಿತ್ರಕತೆ ಕೂಡ ಅವರದ್ದೇ! ಜತೀನ್ – ಲಲಿತ್ ಎಂಬ ಸಂಗೀತ ನಿರ್ದೇಶಕ ಜೋಡಿಯ ಸಂಗೀತ ಅದು ಅದ್ಭುತಗಳಲ್ಲಿ ಅದ್ಭುತ!

      ಸಿಮ್ರಾನ್( ಕಾಜಲ್) ಎಂಬ NRI ಉದ್ಯಮಿಯ ಮಗಳು ಯುರೋಪ್ ಪ್ರವಾಸಕ್ಕೆ ಹೋದಾಗ ರಾಜ್ ( ಶಾರುಖ್ ಖಾನ್) ನನ್ನು ಭೇಟಿ ಆಗುತ್ತಾಳೆ. ಅಲ್ಲಿ ಆರಂಭವಾದ ಪ್ರೀತಿಯನ್ನು ಹೆತ್ತವರ ವಿರೋಧದ ನಡುವೆ ಅವರು ಹೇಗೆ ಗೆದ್ದರು ಎನ್ನುವುದು ಚಿತ್ರದ ರೊಮ್ಯಾಂಟಿಕ್ ಕಥೆ. ಮೊದಲು ಹೀರೊ  ಪಾತ್ರಕ್ಕೆ ಟಾಮ್ ಕ್ರೂಸ್ ಎಂಬ ವಿದೇಶಿ ನಟನನ್ನು ಒಪ್ಪಿಸಲಾಗಿತ್ತು. ನಂತರ ಕತೆಯನ್ನು ಸ್ವಲ್ಪ ಬದಲಾಯಿಸಿ ಶಾರುಕ್ ಖಾನ್ರನ್ನು ಸಂಪರ್ಕಿಸಲಾಯಿತು. ಆದರೆ ಶಾರುಕ್ ಅದುವರೆಗೆ ಕೇವಲ ವಿಲನ್ ಛಾಯೆಯ ಪಾತ್ರಗಳನ್ನು ಮಾಡಿದ್ದ ಕಾರಣ ರೊಮ್ಯಾಂಟಿಕ್ ಪಾತ್ರದ ಬಗ್ಗೆ ಅವರಲ್ಲಿ ಕೂಡ ಹತ್ತಾರು  ಗೊಂದಲಗಳು ಇದ್ದವು. ಸಿಮ್ರಾನ್ ಪಾತ್ರಕ್ಕೆ ಕಾಜಲ್  ಮೊದಲೇ ಆಯ್ಕೆ ಆಗಿದ್ದರು. ಕೊನೆಗೆ ಎಲ್ಲವೂ ಸೆಟ್ ಆಗಿ ಒಂದೂವರೆ ವರ್ಷ ಭಾರತ, ಲಂಡನ್, ಸ್ವಿಜರ್ಲ್ಯಾಂಡ್ ಮೊದಲಾದ ಕಡೆ ಶೂಟಿಂಗ್ ನಡೆಯಿತು. ನಂತರ ದೀಪಾವಳಿ ಹೊತ್ತಲ್ಲಿ ದೇಶದಾದ್ಯಂತ ಬಿಡುಗಡೆ ಆಗಿ ಸಂಚಲನ ಸೃಷ್ಟಿಸಿತು. ನಲ್ವತ್ತು ಮಿಲಿಯನ್ ರೂಪಾಯಿ ಖರ್ಚಿನಲ್ಲಿ ತಯಾರಾದ DDLJ ಸಿನೆಮಾ ಮುಂದೆ 1.22 ಬಿಲಿಯನ್ ರೂಪಾಯಿ ಸಂಪಾದನೆ ಮಾಡಿತು!  ವರ್ಷಗಟ್ಟಲೆ ಓಡಿತು. ಹತ್ತು ಫಿಲಂಫೇರ್ ಪ್ರಶಸ್ತಿಯನ್ನು ಪಡೆಯಿತು. ಅನುಪಮ್ ಖೇರ್, ಅಮರೀಶ್ ಪುರಿ, ಫರೀದಾ ಜಲಾಲ್, ಸತೀಶ್ ಶಾ ಮೊದಲಾದವರು ಪ್ರಧಾನ ಭೂಮಿಕೆಯಲ್ಲಿ ಇದ್ದ ಈ ಸಿನೆಮಾದಲ್ಲಿ ಇದ್ದ ಕೌಟುಂಬಿಕ ಮೌಲ್ಯಗಳು, ದೇಶ ಪ್ರೇಮ, ಪ್ರೀತಿಯ ಪರಾಕಾಷ್ಠೆ ಮತ್ತು ಪಾಸಿಟಿವ್ ಎನರ್ಜಿ ಈ ಸಿನೆಮಾವನ್ನು ಗೆಲ್ಲಿಸಿತು ಎಂದು ಖಚಿತವಾಗಿ ಹೇಳಬಹುದು. ಇಂದಿಗೂ DDLJ ಸಿನೆಮಾದ ಹಾಡುಗಳು, ಕಥೆ, ಸಂಭಾಷಣೆ ಅಮರತ್ವವನ್ನು ಪಡೆದಿವೆ.

      ಅಂದ ಹಾಗೆ ಎಪ್ಪತ್ತರ ದಶಕದಲ್ಲಿ ಮುಂಬೈಯ ಮಿನರ್ವಾ ಥಿಯೇಟರಿನಲ್ಲಿ ‘ ‘ಶೋಲೆ’ ಸಿನೆಮಾ ಐದು ವರ್ಷ ಓಡಿ ದಾಖಲೆ ಬರೆದಿತ್ತು. ಅದೇ ರೀತಿ ಮರಾಠಾ ಮಂದಿರ ಥಿಯೇಟರಿನಲ್ಲಿ ‘ಮೊಘಲ್ ಏ ಅಜಮ್’ ಸಿನೆಮಾ ಸತತವಾಗಿ ಮೂರು ವರ್ಷ ಓಡಿ ಇನ್ನೊಂದು ದಾಖಲೆ ಬರೆದಿತ್ತು. ಆದರೆ DDLJ ಸಿನೆಮಾದ ದಾಖಲೆಯನ್ನು ಇದುವರೆಗೆ ಯಾರಿಗೂ ಮುರಿಯಲು ಸಾಧ್ಯವಾಗಿಲ್ಲ. ಮುಂದೆ ಆಗುವುದೂ ಇಲ್ಲ! ಅದೊಂದು ಅದ್ಭುತ ದೃಶ್ಯಕಾವ್ಯ. ಪ್ರೀತಿಸುವ ಹೃದಯಗಳಿಗೆ ಅಮೃತ ಸಿಂಚನ.

ರಾಜೇಂದ್ರಭಟ್‌ ಕೆ.

Previous articleಭಟ್ಕಳದ ದೇವಿ ದೇವಸ್ಥಾನದ 40 ಲ.ರೂ. ಮೌಲ್ಯದ ಆಭರಣ ಕಳವು; ಅರ್ಚಕನ ಮೇಲೆ ಅನುಮಾನ
Next articleಅದೇ ಅನಾಮಿಕ ಹಾದಿ…

LEAVE A REPLY

Please enter your comment!
Please enter your name here