ಈ ಬಾರಿಯ ಎರಡು ಕ್ಷೇತ್ರಗಳ ಉಪಚುನಾವಣೆಯ ಒಟ್ಟಾರೆ ಸ್ವರೂಪ ನೋಡುವಾಗ ಯಾರು ಗೆಲ್ಲುತ್ತಾರೆ ;ಯಾರು ಸೋಲುತ್ತಾರೆ ಅನ್ನುವ ಪ್ರಶ್ನೆಗಿಂತಲೂ ಯಾರಿಗೆ ಅನುಕಂಪದ ಅಲೆ ಒಲಿಯಬಹುದು ಅನ್ನುವುದೇ ತುಂಬಾ ಕುತೂಹಲಕಾರಿ ವಿಷಯ.
ಉಪಚುನಾವಣೆ ನಡೆಯುವ ರಾಜರಾಜೇಶ್ವರಿ ನಗರ ವಿರಬಹುದು ಶಿರಾ ಕ್ಷೇತ್ರವಿರಬಹುದು. ಬಹು ಮುಖ್ಯ ವಾಗಿ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಉಮೇದುವಾರಿಕೆಗೆ ಅನುಕಂಪದ ಅಸ್ತ್ರವನ್ನೇ ಪ್ರಧಾನವಾಗಿ ಬಳಸಿಕೊಂಡಿರುವುದು ಮೇಲುನೋಟಕ್ಕೆ ಸ್ವಷ್ಟವಾಗಿ ಗೋಚರಿಸುವ ಸತ್ಯಾಂಶವೂ ಹೌದು.
ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಲ್ಲದ ಪತಿಯನ್ನು ಕಳೆದುಕೊಂಡ ಹೆಣ್ಣು ಮಗಳು ಕುಸುಮಾರನ್ನು ಸದಸ್ಯರಾಗಿ ಮಾಡಿಕೊಂಡು ಚುನಾವಣೆಗೆ ನಿಲ್ಲಿಸಬೇಕಾದರೆ ಅನುಕಂಪ ಬಿಟ್ಟು ಮತ್ತೇನು ಮಾನದಂಡವಿದೆ? ಹಾಗಾದರೆ ಸಮಥ೯ ಕಾಂಗ್ರೆಸ್ ನಾಯಕರಾರು ಆ ಕ್ಷೇತ್ರದಲ್ಲಿ ಸಿಗಲಿಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಏನೇ ಆಗಲಿ ಇದು ಡಿ.ಕೆ.ಬ್ರದರ್ಸ್ರವರ ಪ್ರತಿಷ್ಠೆಯ ಪ್ರಶ್ನೆಯೂ ಹೌದು.

ಇನ್ನು ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ಉಮೇದುವಾರಿಕೆಯೂ ಹಾಗೆಯೇ. ಹಿಂದೆ ಶಾಸಕರಾಗಿದ್ದ ದಿವಂಗತ ಸತ್ಯ ನಾರಾಯಣರ ಪತ್ನಿಯನ್ನೆ ಬಿಂಬಿಸಬೇಕಾಗಿ ಬಂದಿರುವುದು ಕೂಡಾ ಅನುಕಂಪದ ಮತಕ್ಕಾಗಿ ಮಣೆ ಹಾಕಿರುವುದು ಅಷ್ಟೇ ಸತ್ಯ.ಇಲ್ಲಿ ಕೂಡ ಜೆಡಿಎಸ್ ಮತ್ತು ಕುಮಾರಸ್ವಾಮಿಯವರಿಗೆ ಗೆದ್ದ ಸೀಟನ್ನು ಉಳಿಸಿ ಕೊಳ್ಳುವುದು ಪಕ್ಷದ ಹಿತದೃಷ್ಟಿಯಿಂದ ಅಷ್ಟೇ ಪ್ರಾಮುಖ್ಯ.
ಆದರೆ ಈ ಉಪಚುನಾವಣೆಯಲ್ಲಿ ಬಿಜೆಪಿಗೆ ಯಾವುದೇ ಅನುಕಂಪದ ಅಸ್ತ್ರ ಇಲ್ಲ. ಅಭಿವೃದ್ಧಿಯ ಮಂತ್ರವನ್ನೇ ಪಠಿಸಬೇಕಾದ ಅನಿವಾರ್ಯತೆ ಆಡಳಿತ ಪಕ್ಷಕ್ಕಿದೆ.ಹಾಗಾಗಿ ಶತಾಯಗತಾಯ ಈ ಎರಡು ಕ್ಷೇತ್ರಗಳನ್ನು ಗೆದ್ದು ಬಿಟ್ಟರೆ ಯಡಿಯೂರಪ್ಪನವರ ನಾಯಕತ್ವಕ್ಕೆ ಇನ್ನಷ್ಟು ಜೀವಕಳೆ ತುಂಬಿ ಬರುವುದರಲ್ಲಿ ಎರಡು ಮಾತಿಲ್ಲ.ಆದರೆ ರಾಜರಾಜೇಶ್ವರಿಯಲ್ಲಿ ಸೋತರೆಂದರೆ ರಾಜಹುಲಿಗೆ ಬರುವ ಬಹುಮುಖ್ಯ ಕಳಂಕವೆಂದರೆ ಅಪವಿತ್ರ ಅಭ್ಯರ್ಥಿಗೆ ಮಣೆ ಹಾಕಿ ಸೋಲುಂಡ ಮುಖ್ಯಮಂತ್ರಿ ಎಂಬ ಅಭಿಪ್ರಾಯ ಪಕ್ಷದ ಒಳಗೂ ಹೊರಗೂ ಬರುವುದರಲ್ಲಿ ಸಂಶಯವೇ ಇಲ್ಲ.ಹಾಗಾಗಿ ಮುಖ್ಯಮಂತ್ರಿ ಗಳಿಗೆ ಗೆಲ್ಲಲೇ ಬೇಕಾದ ಅಗತ್ಯವಿದೆ.
ಒಟ್ಟಾರೆ ಈ ಅನುಕಂಪದ ಆಲೆಯನ್ನು ಬಿಜೆಪಿ ಯಾವ ರೀತಿಯಲ್ಲಿ ಕಟ್ಟಿ ಹಾಕುತ್ತದೆ ಅನ್ನುವುದು ಅಷ್ಟೇ ಮುಖ್ಯ .ಈ ಎರಡೂ ಮಹಿಳೆಯರ ಹೆಸರು ಬಳಸದೇ ಕೇವಲ ಪಕ್ಷದ ನಾಯಕರುಗಳನ್ನೇ ಟಾರ್ಗೆಟ್ ಮಾಡಬೇಕಾದ ಮಾತಿನ ಧಾಟಿ ಅಷ್ಟೇ ಅಗತ್ಯವಿದೆ.ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಹಾಕಿದ ನಾಮಕಾವಸ್ಥೆ ಎಫ್.ಐ.ಆರ್.ನ್ನೇ ಮಹಿಳಾ ದೌಜ೯ನ್ಯ ಅನ್ನುವ ಅಸ್ತ್ರವಾಗಿ ಬಳಸುವ ಪ್ರಯತ್ನ ಕಾಂಗ್ರೆಸ್ ಮಾಡಿರುವ ಉದ್ದೇಶವೂ ಅದೇ ಆಗಿದೆ. ಈ ಹಿಂದೆ ಮಂಡ್ಯದ ಲೋಕಸಭಾ ಉಪಚುನಾಣೆಯಲ್ಲಿ ಕೂಡಾ ಸುಮಲತಾರ ನಡೆನುಡಿ,ತಂತ್ರಗಾರಿಕೆ ಇಂದಿನ ಮಹಿಳಾ ಅಭ್ಯರ್ಥಿಗಳು ಪ್ರಧಾನ ಅಸ್ತ್ರವಾಗಿ ಬಳಸಿಕೊಳ್ಳುತ್ತಿರವುದು ಕೂಡಾ ಮತಯಾಚನೆಯ ಇನ್ನೊಂದು ಪರಿ.ಇಂತಹ ಉಪಚುನಾಣೆಯ ಫಲಿತಾಂಶ ಸರಕಾರದ ಮೇಲಾಗಲಿ ಯಾವುದೇ ಉನ್ನತ ನಾಯಕತ್ವದ ಪ್ರಭಾವವು ಕಡಿಮೆ ಇರುವ ಕಾರಣ ಅಭ್ಯರ್ಥಿಗಳ ಸಾಧನೆ ಜಾತಿ,ವಚ೯ಸ್ಸು, ತನು ಮನ ಧನ ಅನುಕಂಪಗಳೇ ಪ್ರಧಾನ ಪಾತ್ರ ವಹಿಸುತ್ತದೆ ಅನ್ನುವುದು ಈ ಹಿಂದಿನ ಉಪ ಚುನಾವಣೆಯಲ್ಲಿ ಕಂಡು ಬಂದ ಫಲಿತಾಂಶವೂ ಆಗಿರುತ್ತದೆ.
ಹಾಗಾದರೆ ಈ ಎಲ್ಲಾ ಅನುಕಂಪದ ಅಲೆಯ ಮತ್ತು ಭರವಸೆ ಮಾತುಗಳ ನಡುವೆ ಗೆಲ್ಲುವ ಕುದುರೆಗಳಾವು?ಈ ಬಾರಿಯ ಚುನಾವಣೆಯ ವಿಶೇಷತೆ ಅಂದರೆ ತ್ರಿಕೋನ ಸ್ಪಧೆ೯. ಜಾತಿ ಸಮೀಕರಣದಲ್ಲಿ ಮತ ಹಂಚಿ ಹೋಗುವ ಸಾಧ್ಯತೆಗಳು ಜಾಸ್ತಿ.ಇದರಿಂದಾಗಿ ಬಿಜೆಪಿಗೆ ಸ್ವಲ್ಪ ಮಟ್ಟಿನ ಲಾಭವೂ ಇದೆ.ಅದೇ ರೀತಿಯಲ್ಲಿ ಶಿರಾ ಕ್ಷೇತ್ರ ದಲ್ಲಿ ಜೆಡಿಎಸ್ ಗೆ ಸಿಹಿ ಸುದ್ದಿ ಬಂದರೂ ಆಶ್ಚರ್ಯವಿಲ್ಲ. ಯಾಕೆಂದರೆ ಹಿಂದಿನ ಶಾಸಕರ ಸಾಧನೆಯ ಜೊತೆಗೆ ಅನುಕಂಪ ಸೇರಿಕೊಳ್ಳುವ ಸಾಧ್ಯತೆ ನಿಚ್ಚಳವಾಗಿ ಕಾಣುತ್ತಿದೆ.ಆದರೆ ರಾಜರಾಜೇಶ್ವರಿಯಲ್ಲಿ ಮುನಿಸ್ವಾಮಿ ಯವರ ಹಿಂದಿನ ಕೊಡುಗೆ. ಅವರದ್ದೇ ಒಂದಿಷ್ಟು ಮತದಾರರು ಜೊತೆಗೆ ಬಿಜೆಪಿಯ ವರದಾನ ಸೇರಿ ಬಿಟ್ಟರೆ ಮುನಿಗಳ ಗೆಲುವು ಸುಲಭವಾಗಿ ಪ್ರಾಪ್ತವಾಗಬಹುದು. ನನ್ನ ಸಮೀಕ್ಷಾ ವಿಶ್ಲೇಷಣೆಯ ಪ್ರಕಾರ ಬಿಜೆಪಿ, ಜೆಡಿಎಸ್ ಸಮಬಲದಲ್ಲಿ ಜಯಶಾಲಿಯಾಗಬಹುದು.ಆದರೂ ಇದು ನೂರಕ್ಕೆ ನೂರು ಸತ್ಯದ ಫಲಿತಾಂಶ ಅನ್ನುವುದಕ್ಕಿಂತ ಶೇ.70 ಮತ್ತು 30ರ ನಿರೀಕ್ಷಿತ ಫಲಿತಾಂಶ ಅನ್ನುವುದು ಸೂಕ್ತ.
ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ, ಉಡುಪಿ













