ಕಾರ್ಕಳ: ಸರಕಾರಿ ನೌಕರರೊಬ್ಬರಿಗೆ ಕರ್ತವ್ಯದ ವೇಳೆ ವ್ಯಕ್ತಿಯೊಬ್ಬ ಮೊಬೈಲ್‍ಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮಕೈಗೊಳ್ಳುವಂತೆ ಮನವಿ ಸಲ್ಲಿಸಲು ಹೋಗಿದ್ದ ಸಂದರ್ಭ ಕಾರ್ಕಳ ಡಿವೈಎಸ್ಪಿ ಭರತ್ ರೆಡ್ಡಿ ತನ್ನ ಕಚೇರಿಯಲ್ಲಿ ಕೂಡಿಹಾಕಿ ಮೊಬೈಲ್ ಕಸಿದು ಗುಂಡಾವರ್ತನೆ ಮಾಡಿರುತ್ತಾರೆ ಎಂದು ಆರೋಪಿಸಿ ದಿನಪತ್ರಿಕೆಯೊಂದರ ವರದಿಗಾರ ಕೃಷ್ಣ ಎಂ. ನಾಯ್ಕ್ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿರುತ್ತಾರೆ.
ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಗ್ರಾಮಕರಣಿಕರಾಗಿರುವ ಪ್ರವೀಣ್ ನಾಯ್ಕ್ ಅವರು ಕಾಡುಹೊಳೆ ಪರಿಶಿಷ್ಟ ಪಂಗಡದ ಸಮುದಾಯ ಕಾರ್ಯಚಟುವಟಿಕೆಯ ವ್ಯಾಪ್ತಿಯ ನಿವಾಸಿಯಾಗಿದ್ದು, ತನಗೆ ಕರ್ತವ್ಯದ ವೇಳೆ ವ್ಯಕ್ತಿಯೊಬ್ಬ ಮೊಬೈಲ್‍ಗೆ ಕರೆಮಾಡಿ ನಿಂದಿಸಿ ಬೆದರಿಕೆ ಹಾಕಿದ್ದಾನೆ. ಈ ಹಿನ್ನೆಲೆಯಲ್ಲಿ ತನಗೆ ನಮ್ಮ ಸಮುದಾಯದ ಸಂಘಟನೆ ಬೆಂಬಲ ನೀಡಬೇಕೆಂದು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಇದೇ ಸಂಘಟನೆಯ ಕಾರ್ಯ ಚಟುವಟಿಕೆಯಲ್ಲಿ ತೊಡಗಿದ್ದ ಪತ್ರಕರ್ತ ಕೃಷ್ಣ ನಾಯ್ಕ್ ಹಾಗೂ ಇತರ ಸದಸ್ಯರು ಈ ಕುರಿತು ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವಂತೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಗಾಗಿ ತಹಶೀಲ್ದಾರ್ ಅವರು ಪೊಲೀಸ್ ಇಲಾಖೆಗೆ ಈ ಪ್ರಕರಣವನ್ನು ವರ್ಗಾಯಿಸಿದ್ದರು. ಅನಂತರ ಪ್ರವೀಣ್ ನಾಯ್ಕ್ ಅವರು ಪತ್ರಕರ್ತನನ್ನು ದೂರಿನ ವಿಚಾರವಾಗಿ ಡಿವೈಎಸ್ಪಿ ಕಚೇರಿಗೆ ಕರೆದುಕೊಂಡು ಹೋಗಿದ್ದರು. ಕಚೇರಿಯಲ್ಲಿ ವಿಚಾರಣೆ ನಡೆಸಿದ ಬಳಿಕ ಡಿವೈಎಸ್ಪಿ ಭರತ್ ರೆಡ್ಡಿ ಅವರು ಪತ್ರಕರ್ತ ಈ ಹಿಂದೆ ವರದಿ ಮಾಡಿದ್ದ ಸುದ್ದಿಯ ಕುರಿತಂತೆ ದ್ವೇಷಸಾಧನೆಗಾಗಿ ತನ್ನ ಪೊಲೀಸ್ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಸಮುದಾಯದ ವ್ಯಕ್ತಿಗೆ ಆಗಿರುವ ಅನ್ಯಾಯದ ವಿರುದ್ದ ನ್ಯಾಯ ಕೇಳಲು ಹೋದ ಪತ್ರಕರ್ತನಿಗೆ ಅತ್ಯಂತ ಕೀಳುಮಟ್ಟದಲ್ಲಿ ನಡೆಸಿಕೊಂಡು ನಿಂದಿಸಲಾಗಿದೆ ಎಂದು ಕೃಷ್ಣ ಅವರು ದೂರಿನಲ್ಲಿ ತಿಳಿಸಿದ್ದಾರೆ. ಪರಿಶಿಷ್ಟ ವರ್ಗಕ್ಕೆ ಸೇರಿದವನಾದ ನನ್ನ ಮೇಲೆ ಇಂತಹ ದೌರ್ಜನ್ಯ ಮಾನಸಿಕವಾಗಿ ಕುಗ್ಗುವಂತಾಗಿದೆ. ಇಂತಹ ದೌರ್ಜನ್ಯವೆಸಗಿರುವ ಅಧಿಕಾರಿಯ ವಿರುದ್ಧ ಸೂಕ್ತ ತನಿಖೆ ನಡೆಸಬೇಕೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ, ಶಾಸಕ ವಿ. ಸುನಿಲ್ ಕುಮಾರ್, ಉಡುಪಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾದಿಕಾರಿ, ರಾಜ್ಯ ಪರಿಶಿಷ್ಟ ಜಾತಿ, ಪಂಗಡಗಳ ಆಯೋಗ, ಮರಾಟಿ ಸಮಾಜ ಸೇವಾ ಸಂಘಕ್ಕೆ ದೂರು ನೀಡಿರುತ್ತಾರೆ.
ಕಾರ್ಕಳ ಡಿವೈಎಸ್ಪಿ ಭರತ್ ರೆಡ್ಡಿಯಿಂದ ಅಧಿಕಾರ ದುರ್ಬಳಕೆ ಆರೋಪ : ಡಿಜಿ, ಎಸ್‍ಸಿ-ಎಸ್ಟಿ ಆಯೋಗಕ್ಕೆ ದೂರು















































































