ಇಂದು ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಚಚೆ೯ಯಾಗುತ್ತಿರುವ ವಿಷಯವೆಂದರೆ ಶಾಲಾ ಕಾಲೇಜುಗಳು ತೆರೆಯಬೇಕಾ ಅಥವಾ ಬೇಡವೇ ಎನ್ನುವುದು? ಸರಕಾರಕ್ಕಂತೂ ಇದು ನಂಬರ್ ಒನ್ ಚಿಂತೆಗೆ ಎಡಮಾಡಿಕೊಟ್ಟ ಸಂಗತಿಯೂ ಹೌದು.ಮಾಧ್ಯಮಗಳಲ್ಲಿ ದಿನನಿತ್ಯ ಇದರದ್ದೇ ಚಚೆ೯.ಶಿಕ್ಷಣ ತಜ್ಞರು ಸದ್ಯಕ್ಕೆ ಬೇಡವೆಂದರೆ ಹೆತ್ತವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ತಯಾರಿಲ್ಲ ಎನ್ನುವ ಕೂಗು ಇನ್ನೊಂದು ಕಡೆ.ಈ ಎಲ್ಲಾ ಕತೆವ್ಯಥೆಗಳ ಮಧ್ಯೆ ಕೊರೊನಾದ ವಾಸ್ತವಿಕ ವಿಚಾರವೇ ಬೇರೆ ! ಇದು ಆಶ್ಚರ್ಯವಾದರೂ ಸತ್ಯ.
ಶಾಲೆ – ಕಾಲೇಜುಗಳಿಗೆ ಹೋಗದ ಮಕ್ಕಳು ಶಾಲಾ ಕಾಲೇಜು ಮೈದಾನಗಳಲ್ಲಿ ಬಿಂದಾಸ್ ಆಗಿ ಬೆರೆಯುತ್ತಿದ್ದಾರೆ. ಐವತ್ತಕ್ಕೂ ಹೆಚ್ಚು ಮಕ್ಕಳು ಸಂಜೆ ಹೊತ್ತು ಯಾವುದೇ ಮಾಸ್ಕ್ ಆಗಲಿ, ಸಾಮಾಜಿಕ ಅಂತರವಾಗಲಿ ಇಲ್ಲದೆ ಬೆರೆತು ಆಡುವುದನ್ನು ನೋಡಿದರೆ ನಾವೇಕೆ ಶಾಲೆ ಆರಂಭಿಸಬಾರದು ಎಂದು ಅನ್ನಿಸುತ್ತದೆ.ಹಾಗಾದರೆ ಪಾಠ ಕೇಳುವಾಗ ಕೊರೊನ ಹಿಡಿದುಕೊಳ್ಳುತ್ತದೆ ಹೊರತು ಆಟವಾಡುವಾಗ ಅಲ್ಲ. ಇದು ಹೆತ್ತವರ ಮನಃಸ್ಥಿತಿಯೋ , ಬೇಜಬ್ದಾರಿತನವೊ?ಮಕ್ಕಳ ನಿಲ೯ಕ್ಷ್ಯವೊ?ಅನ್ನುವ ಪ್ರಶ್ನೆ ಮೂಡುತ್ತದೆ.
ಸರಕಾರವೇನೊ ಆದೇಶ ನೀಡಿದೆ ಸಾವ೯ಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿದ್ದರೆ ಇನ್ನೂರು; ಸಾವಿರ ದಂಡ ಹಾಕಿ. ಹಾಗಾಗಿ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಬಸ್ಸು ನಿಲ್ದಾಣ, ಮಾರುಕಟ್ಟೆಯಂತಹ ಪ್ರದೇಶಗಳಲ್ಲಿ ಕಾರ್ಯಚರಣೆ ನಡೆಸುತ್ತಿದ್ದಾರೆಯೇ ಹೊರತು ಶಾಲಾ – ಕಾಲೇಜುಗಳ ಆಟದ ಮೈದಾನದತ್ತ ಸುಳಿಯುವುದಿಲ್ಲ. ಮಕ್ಕಳು ಸಂಜೆ ಹೊತ್ತು ಮಾಸ್ಕ್ ಧರಿಸದೆ ನಿರಾಳವಾಗಿ ಸ್ವಚ್ಛಂದದಿಂದ ಮೈಮರೆತು ಆಟವಾಡುವುದನ್ನು ನೋಡಿದರೆ ನಾವೆಷ್ಟು ಕೊರೊನ ತಡೆಯುವುದರಲ್ಲಿ ಆಸಕ್ತಿ ವಹಿಸುತ್ತಿದ್ದೇವೆ ಅನ್ನುವ ಸತ್ಯದ ಅರಿವಾಗುತ್ತದೆ. ಹಾಗೆಂದು ಮಕ್ಕಳು ಆಟವಾಡಬಾರದು ಎಂದು ಅಲ್ಲ. ಇಲ್ಲಿ ಇರುವುದು ಸರಕಾರಿ ಆದೇಶಗಳ ದ್ವಂದ್ವದ ವಿಚಾರ. ಶಾಲೆಯೊಳಗೆ ಕುಳಿತು ಪಾಠ ಕೇಳಿದರೆ ಬರುವ ಕೊರೊನಾ ಮೈದಾನದಲ್ಲಿ ಯಾವುದೇ ಮುನ್ನೆಚ್ಚರಿಕೆ ವಹಿಸದೆ ಕಲೆತು ಆಡಿದರೆ ಬರುವುದಿಲ್ಲವೇ? ಇನ್ನಾದರು ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಲಿ ಅನ್ನುವುದು ನಮ್ಮ ಮಕ್ಕಳ ಹಿತದೃಷ್ಟಿಯ ಕೋರಿಕೆಯೂ ಹೌದು.

ಪ್ರೊ. ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ








































































