ಓ ಮನಸೇ ನೀನ್ಯಾಕೆ ಇಷ್ಟು ನಿಗೂಢ?

        ಮನಸ್ಸು ದೇಹಕ್ಕಿಂತ ಹೆಚ್ಚು ಶಕ್ತಿಶಾಲಿ ಎಂಬುದು ವೈಜ್ಞಾನಿಕವಾಗಿ ಪ್ರೂವ್ ಆಗಿದೆ.  ನಮಗೆ ಬರುವ ಹೆಚ್ಚಿನ ಕಾಯಿಲೆಗಳು ಸೈಕೊ ಸೊಮ್ಯಾಟಿಕ್ ಎಂದು ಕೂಡ ಪ್ರೂವ್ ಆಗಿದೆ. ಅಂದರೆ ಕಾಯಿಲೆಗಳು ಮೊದಲು ಮನಸ್ಸಿನ ಒಳಗೆ ಬಂದು ನಂತರ ದೇಹವನ್ನು ಪ್ರವೇಶ ಮಾಡುತ್ತವೆ. ಸಿಟ್ಟು, ಹತಾಶೆ, ಭಯ, ನಿರಾಸೆ, ಸೇಡು,

ಒಬ್ಬಂಟಿತನ ಮೊದಲಾದ ನೆಗೆಟಿವ್ ಭಾವನೆಗಳು ನಮ್ಮ ಅನಾರೋಗ್ಯಕ್ಕೆ ಕಾರಣ ಆಗುತ್ತವೆ ಅನ್ನುತ್ತದೆ ವಿಜ್ಞಾನ. ಯಾವ ನೆಗೆಟಿವ್ ಭಾವನೆಯಿಂದ ಯಾವ ಕಾಯಿಲೆ ನಾವು ಸಂಪಾದನೆ ಮಾಡುತ್ತೇವೆ ಅನ್ನುವುದು ಕೂಡ ಸಂಶೋಧನೆಗೆ ಒಳಪಟ್ಟಿದೆ. ಅವುಗಳ ಬಗ್ಗೆ ಕೂಡ ನೂರಾರು ಪುಸ್ತಕಗಳು ಬಂದಿವೆ. ಉದಾಹರಣೆಗೆ ನಿಮಗೆ ಯಾರ ಮೇಲಾದರೂ ಸಿಟ್ಟು ಇದೆ, ಆದರೆ ಅದನ್ನು ನೀವು ಹಲ್ಲು ಕಚ್ಚಿ ದೀರ್ಘ ಕಾಲ ಸಹಿಸಿಕೊಳ್ಳುತ್ತೀರಿ ಅಂದರೆ ನಿಮಗೆ ಒಂದೆರಡು ತಿಂಗಳ ಒಳಗೆ ಕಿಡ್ನಿ ಸ್ಟೋನ್ ಅಮರಿಕೊಳ್ಳುವುದು ಖಂಡಿತ. ಹೃದಯದ ಬೇನೆ, ರಕ್ತದ ಒತ್ತಡ ಮೊದಲಾದ ಕಾಯಿಲೆಗಳು ಕೇವಲ ಮನಸ್ಸಿನ ಪ್ರಭಾವದಿಂದ ಬರುತ್ತವೆ. ಅದಕ್ಕೆ ಪೂರಕವಾಗಿ ನಮ್ಮ ಜೀವನ ಶೈಲಿಯಲ್ಲಿ ಶಿಸ್ತು ಇಲ್ಲದಿದ್ದರೆ ಅವುಗಳು ನಮ್ಮನ್ನು ಅನಾರೋಗ್ಯದ ಅಂಚಿಗೆ ದೂಡುವುದು ಖಂಡಿತ.

          ಮನಸ್ಸು ಅನ್ನುವುದು ಅದ್ಭುತವಾದ ಮತ್ತು ಅನೂಹ್ಯ ಆದ ಒಂದು ಪ್ರಭಾವಲಯ. ಅದು ಅಮೂರ್ತ. ಅದನ್ನು ನೋಡಲು, ಮುಟ್ಟಲು ಸಾಧ್ಯವಿಲ್ಲ. ಅದರಲ್ಲೂ ಅದರ ಆಳವಾದ ಪ್ರಭಾವಲಯ ಸುಪ್ತ ಮನಸ್ಸು( subconcious mind) ಪ್ರಭಾವಗಳ ಬಗ್ಗೆ ಬರೆದಷ್ಟೂ ಮುಗಿಯುವುದಿಲ್ಲ. ಅದು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಅದಕ್ಕೆ ನಾವು ಪಾಸಿಟಿವ್ ಥಿಂಕಿಂಗ್ ಮೂಲಕ ಚೈತನ್ಯವನ್ನು ತುಂಬಬಹುದು. ಸುಪ್ತ ಮನಸ್ಸು ಪಾಸಿಟಿವ್ ಆದಷ್ಟು ನಾವು ಮಾನಸಿಕವಾಗಿ ಮತ್ತು ದೈಹಿಕವಾಗಿ ಸ್ಟ್ರಾಂಗ್ ಆಗುವುದು ಖಂಡಿತ. ದುರ್ಬಲ ಮನಸ್ಸು ನಮ್ಮನ್ನು ದುರ್ಬಲ ಮಾಡುತ್ತದೆ.

       ನಾವು ಬೆಳೆಯುತ್ತ ಹೋದಂತೆ ನಮ್ಮ ಸುಪ್ತ ಮನಸ್ಸಿಗೆ ಪಾಸಿಟಿವ್ ಥಿಂಕಿಂಗ್ ಮೂಲಕ ತರಬೇತಿ ನೀಡಲು ಕಲಿತರೆ ಅರ್ಧ ಯುದ್ಧವನ್ನು ಗೆದ್ದಂತೆ. ವಿಶೇಷವಾಗಿ ಸಣ್ಣ ವಯಸ್ಸಿನ ಮಕ್ಕಳಿಗೆ ಮತ್ತು ತುಂಬಾ ಪ್ರಾಯ ಆದವರಿಗೆ ಸೂಕ್ತವಾದ ತರಬೇತಿಯ ಅಗತ್ಯ ಇದೆ. ಕೌನ್ಸೆಲಿಂಗ್ ಅಗತ್ಯ ಇದೆ. ಪ್ರಾಯ ಆದವರಿಗೆ ಹೆಚ್ಚು ಒಬ್ಬಂಟಿತನ ಕಾಡುವ ಕಾರಣ ಅವರನ್ನು ಮನೆಯವರು ಪ್ರೀತಿಯಿಂದ ನೋಡಿಕೊಳ್ಳುವುದು ಅಗತ್ಯ. ಪ್ರೀತಿ ಮತ್ತು ನಂಬಿಕೆ ಎರಡೂ ಕೂಡ ನಮ್ಮನ್ನು ತುಂಬಾ ಸ್ಟ್ರಾಂಗ್ ಮಾಡುವ ಫೀಲಿಂಗ್ಸ್. ಅವೆರಡೂ ನಮ್ಮಲ್ಲಿ ಜೀವನೋತ್ಸಾಹ ಬೆಳೆಸುತ್ತವೆ. ನಾನು ನಿಮ್ಮೊಟ್ಟಿಗೆ ಇದ್ದೇನೆ, ಯಾವಾಗಲೂ ಇರುತ್ತೇನೆ ಎಂಬ ನಂಬಿಕೆ ನಮ್ಮನ್ನು ಬಹಳ ಎತ್ತರಕ್ಕೆ ಬೆಳೆಸುತ್ತದೆ. ಇಂದು ಮಾನಸಿಕ ಆರೋಗ್ಯ ದಿನದ ಆಶಯವೂ ಅದೇ ಆಗಿದೆ. ಇಂದು ದೈಹಿಕ ಅನಾರೋಗ್ಯಕ್ಕೆ ತುತ್ತಾಗಿ ಮಾತ್ರೆ, ಔಷಧಿ ನುಂಗುವ ನಾವು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ, ಅದರ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯ ಹಿಂದಿಗಿಂತಲೂ ಹೆಚ್ಚಿದೆ ಎಂದು ನಮಗೆ ಅರಿವಾದರೆ ಸಾಕು.















































































































































error: Content is protected !!
Scroll to Top