ಕಲಬುರಗಿ, ಅ. 10 : ಮಕ್ಕಳು ಶಾಲೆಗೆ ಬಂದರೆ ಕೊರೊನಾ ಸೋಂಕಿಗೆ ತುತ್ತಾಗಬಹುದು ಎಂಬ ಕಾರಣಕ್ಕೆ ಶಿಕ್ಷಕರು ಮಕ್ಕಳಿರುವಲ್ಲಿಗೆ ಹೋಗಿ ಪಾಠ ಮಾಡಲು ಸರಕಾರ ಪ್ರಾರಂಭಿಸಿದ ವಿದ್ಯಾಗಮ ಯೋಜನೆ ಈಗ ವಿವಾದಕ್ಕೊಳಗಾಗಿದೆ. ವಿದ್ಯಾಗಮದಿಂದಲೇ ಕೊರೊನಾ ಹರಡುತ್ತಿದೆ ಎಂಬ ಆತಂಕ ಎದುರಾಗಿ ಹಲವು ಪಾಲಕರು ಇದರ ಬಗ್ಗೆ ಆಕ್ಷೇಪ ಎತ್ತತೊಡಗಿದ್ದಾರೆ.
ಇತ್ತೀಚೆಗೆ ರಾಮದುರ್ಗ ತಾಲೂಕಿನ ತಿಮ್ಮಾಪುರ ಮತ್ತು ಸುತ್ತಮುತ್ತಲ ಗ್ರಾಮಗಳ ಸುಮಾರು 25 ಮಕ್ಕಳು ಮತ್ತು 6 ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಗ್ರಾಮಸ್ಥರನ್ನು ಕಂಗೆಡಿಸಿದೆ.
ಮಕ್ಕಳಿಗೆ ಸೋಂಕು ವಿದ್ಯಾಗಮ ಕಾರ್ಯಕ್ರಮವೇ ಕಾರಣ ಎಂದು ಇಲ್ಲಿನ ಪಾಲಕರು ಆರೋಪಿಸುತ್ತಿದ್ದಾರೆ. ಇದೀಗ ಗ್ರಾಮಸ್ಥರು ಪ್ರಾಥಮಿಕ ಶಾಲಾ ಶಿಕ್ಷಕರು ಊರೊಳಗೆ ಪ್ರವೇಶಿಸಲು ಬಿಡುತ್ತಿಲ್ಲ.

ಶಿಕ್ಷಕರು ಗ್ರಾಮಗಳಿಗೆ ಹೋಗಿ ತೆರೆದ ಪ್ರದೇಶದಲ್ಲಿ ಶಾರೀರಿಕ ಅಂತರ ಕಾಯ್ದುಕೊಂಡು ಮಕ್ಕಳ ಸಣ್ಣ ಗುಂಪು ಮಾಡಿಕೊಂಡು ಪಾಠ ಹೇಳಿಕೊಡುವುದು ವಿದ್ಯಾಗಮ ಕಾರ್ಯಕ್ರಮವಾಗಿದೆ.
100ಕ್ಕೂ ಹೆಚ್ಚು ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗಿರುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ಗ್ರಾಮಗಳಿಗೆ ಪ್ರವೇಶ ನೀಡುತ್ತಿಲ್ಲ. ಚಿಕ್ಕೋಡಿಯಲ್ಲಿ 18 ಶಿಕ್ಷಕರಿಗೆ ಕೊರೋನಾ ತಗಲಿದೆ, ಮೂವರು ಶಿಕ್ಷಕರು ಬಲಿಯಾಗಿದ್ದಾರೆ.
ಕಲಬುರಗಿ ಜಿಲ್ಲೆಯ ಅಫ್ಜಲ್ ಪುರ ತಾಲೂಕಿನ ಮಾಶಲ್ ಗ್ರಾಮದ ವಠಾರ ಶಾಲೆಯಲ್ಲಿ ಕಲಿಯುತ್ತಿರುವ ನಾಲ್ವರು ಮಕ್ಕಳಿಗೆ ಕಳೆದ ಗುರುವಾರ ಸೋಂಕು ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ 15 ದಿನಗಳ ಕಾಲ ಸಾರ್ವಜನಿಕ ಶಿಕ್ಷಣ ಇಲಾಖೆ ವಿದ್ಯಾಗಮ ಕಾರ್ಯಕ್ರಮವನ್ನು ಇಲ್ಲಿ ಮುಚ್ಚಿದೆ.
ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್. ಪಿ. ಬಡಗುಂಡಿ 15 ದಿನಗಳ ಹಿಂದೆ ಶಾಲಾ ಮುಖ್ಯೋಪಾಧ್ಯಾಯರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. 250 ಮಕ್ಕಳಿಗೆ ಆರ್ ಟಿ-ಪಿಸಿಆರ್ ಪರೀಕ್ಷೆ ಮಾಡಲಾಗಿದೆ. ಅವರಲ್ಲಿ ನಾಲ್ವರಿಗೆ ಪಾಸಿಟಿವ್ ಬಂದಿದೆ. ಈ ಘಟನೆಗಳು ವಿದ್ಯಾಗಮ ಯೋಜನೆಯನ್ನು ಆತಂಕದಿಂದ ನೋಡುವಂತೆ ಮಾಡಿವೆ. ಈ ಮಧ್ಯೆ ಸರಕಾರ ಕೂಡ ವಿದ್ಯಾಗಮದ ಸಾಧಕಬಾಧಕಗಳ ಬಗ್ಗೆ ಅವಲೋಕನ ಮಾಡುವ ಚಿಂತನೆಯಲ್ಲಿದೆ.






































































