ವಿಶ್ವ ಅಂಚೆ ದಿನ ಎನ್ನುವಾಗ ನೆನಪಾಗುವುದು ಅಂಚೆಯಣ್ಣ. ಅಂಚೆಯಣ್ಣನ ಹೆಸರು ಕೇಳಿದಾಗಲೇ ಮೈ ಮನ ಪುಳಕಗೊಂಡು ಒಂದು ಕ್ಷ ಣ ಜಾರಿದೆ ಬಾಲ್ಯದ ನೆನಪಿನತ್ತ.
ಸಂಪರ್ಕ ಕ್ರಾಂತಿಯನ್ನು ಮಾಡಿದ ರೈಲ್ವೆ ಮತ್ತು ಅಂಚೆ ಇಲಾಖೆಗಳು ನಮ್ಮನ್ನಾಳಿದ್ದ ಬ್ರಿಟಿಷರ ಕೊಡುಗೆಗಳು.ಸ್ವಾರ್ಥ ಸಾಧನೆಗಾಗಿ ಅವರು ಸ್ಥಾಪಿಸಿದ್ದರೂ ನಮಗೂ ಬಹಳಷ್ಟು ಪ್ರಯೋಜನಕಾರಿ ಯಾಯಿತು.ಬ್ರಿಟಿಷರ ಮೂಲಕ 1766 ರಲ್ಲಿ ಯೇ ನಮ್ಮ ದೇಶಕ್ಕೆ ಅಂಚೆ ವ್ಯವಸ್ಥೆ ಪರಿಚಯಗೊಂಡಿದ್ದರೂ ಸಾರ್ವಜನಿಕರ ಉಪಯೋಗಕ್ಕೆ 1832 ರಲ್ಲಿ ನೀಡಲಾಯಿತು.
ಅಂಚೆ ಇಲಾಖೆಯು ಉಳಿದೆಲ್ಲಾ ಹಣಕಾಸಿನ ಸಂಸ್ಥೆಗಳಿಗಿಂತ ಉತ್ತಮ ಸೇವೆ ಮತ್ತು ಮಾರ್ಗದರ್ಶನಗಳನ್ನು ತನ್ನ ಗ್ರಾಹಕರಿಗೆ ನೀಡುತ್ತಾ ಬಂದಿದೆ.ಅಂಚೆ ಅನ್ನುವಾಗ ಮೊದಲು ನಮ್ಮ ಸಾಮೀಪ್ಯಕ್ಕೆ ಬರುವ ವ್ಯಕ್ತಿ “ಅಂಚೆಯಣ್ಣ” ಆಂಗ್ಲ. ಭಾಷೆಯಲ್ಲಿ ಅದೇ “postman”. ಅಂಚೆಯಣ್ಣ ಬರೇ ಪತ್ರಗಳನ್ನು ರವಾನಿಸುವ ವ್ಯಕ್ತಿಯಲ್ಲ,ಮನುಷ್ಯನಿಂದ ಮನುಷ್ಯನಿಗೆ, ಊರಿನಿಂದ ಊರಿಗೆ ಎಲ್ಲ ಸುದ್ದಿ ಸಮಾಚಾರಗಳನ್ನು ಅವುಗಳ ಭಾವನೆಗಳ ಸಮೇತ ದಾಟಿಸುವ ಒಂದು ಸಂಪರ್ಕ ಸೇತು. ಅವನು ಧರಿಸುವ ಸಮವಸ್ತ್ರವನ್ನು ನೋಡುವುದೇ ಒಂದು ಚಂದ.ಗ್ರಾಮೀಣ ಪ್ರದೇಶದಲ್ಲಿಗಳಲ್ಲಂತೂ ಪ್ರತಿಯೊಂದು ಮನೆಯ ವ್ಯಕ್ತಿಯ ಸಂಪೂರ್ಣ ಮಾಹಿತಿ ಅವನ ಚೀಲದಲ್ಲಿದೆ.

ಸೈಕಲ್ ತಿಳಿದುಕೊಂಡು, ಸುದ್ದಿಗಳ ಮೂಟೆಯಿರುವ ಚೀಲವನ್ನು ಹೆಗಲಲ್ಲಿ ಹೇರಿಕೊಂಡು, ಚರ್ಮದ ಎಕ್ಕಡವನ್ನು ಧರಿಸಿಕೊಂಡು, ಬೆವರು ಸುರಿಸಿಕೊಂಡು ಮನೆಯಿಂದ ಮನೆಗೆ ,ವ್ಯಕ್ತಿ ಯಿಂದ ವ್ಯಕ್ತಿ ಗೆ ಸುದ್ದಿ ಪತ್ರ ಬಟವಾಡೆ ಮಾಡುವ ದೇವರೂಪಿ ಮಾನವ ಈ ಅಂಚೆಯಣ್ಣ.
ಕ್ರಿಯಾಶೀಲತೆ, ಪರಿಶ್ರಮ, ಪ್ರಾಮಾಣಿಕತಗೆ ಪರ್ಯಾಯ ಶಬ್ದವೇ ” ಅಂಚೆಯಣ್ಣ”. ಮಾನವೀಯ ಮೌಲ್ಯಗಳ ಸಮಾಗಮ.ಅಂಚೆಯಣ್ಣನಿಗೆ ದಾಹ ನೀಗಲು ನೀಡುತ್ತಿದ್ದ ಮಜ್ಜಿಗೆ ನೀರು, ಗಂಜಿ ಊಟ… ಎಲ್ಲವೂ ಸಿಹಿ ನೆನಪುಗಳು. ಅವನ ಸೇವೆಯಲ್ಲಿ ಧನವಂತರು, ಧನಹೀನರು, ಗುಣವಂತರು, ಗುಣಹೀನರು ಎಂಬ ಭೇದವಿಲ್ಲ.ಸಂತಸದ, ವ್ಯಸನದ ಎಲ್ಲ ರೀತಿಯ ಓಲೆಗಳಿಗೂ ಸಮಾನ ಪ್ರತಿಕ್ರಿಯೆ.
ಓದು ಬರಹ ಇಲ್ಲದಿದ್ದ ಮುಗ್ಧ ಜನರಿಗೆ ಓಲೆಯನ್ನಿತ್ತು, ಮನಮುಟ್ಟುವ ಹಾಗೆ ಓದಿ ಹೇಳುವ ಪರಿ ನಿಜಕ್ಕೂ ಅದ್ಭುತ. ದುಃಖದ ವಾರ್ತೆಯಾದರೆ ಸಾಂತ್ವನ ಹೇಳಿ,ಸಂತೋಷದ ವಿಚಾರವಾದರೆ ತಾನೂ ಸಂತೋಷಪಟ್ಟು ಎಲ್ಲರ ಸುಖದುಃಖಗಳಲ್ಲಿ ಸಹಭಾಗಿ ಈ ಅಂಚೆಯಣ್ಣ. ಬಂದ ಪತ್ರಗಳಿಗೆ ಉತ್ತರ ಬರೆಯುವ, money orders ಮಾಡುವ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದ ಅಂಚೆಯಣ್ಣನೆಂದರೆ ಹಿರಿಕಿರಿಯರೆಲ್ಲರಿಗೂ ಪ್ರೀತಿ, ಗೌರವ , ಆದರ.
ಯುವ ಪ್ರೇಮಿಗಳಿಗಂತೂ ಇವನ ಹೃದಯ ವೈಶಾಲ್ಯತೆ ಹೇಳತೀರದು.ಶಾಲಾ ಕಾಲೇಜುಗಳಲ್ಲಿ ಬಂದ ಪ್ರೇಮ ಪತ್ರಗಳೆಲ್ಲಾ ನೇರವಾಗಿ ಕಸದ ಬುಟ್ಟಿಯನ್ನು ಸೇರುತ್ತಿದ್ದವು.ಕಾದು ಕಾದು ನಿರಾಶರಾದ ಭಗ್ನ ಪ್ರೇಮಿಗಳು “ಅಂಚೆಯಣ್ಣ” ನಲ್ಲಿ ತಮ್ಮ ಅಳಲನ್ನು ತೋಡಿಕ್ಕೊಳ್ಳುತ್ತಿದ್ದರು.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಆಗ ಪತ್ರಗಳ ರವಾನೆಯಾಗುವಾಗ 7-8 ದಿವಸಗಳಾಗುತ್ತಿದ್ದವು.ಆಗ ಯವ ಜನತೆಗೆ ತಮ್ಮ ನಡವಳಿಕೆಗಳನ್ನು ಪರಾಮರ್ಶಿಸಲು ಕಾಲಾವಕಾಶ ಸಿಗುತ್ತಿತ್ತು.
ಪ್ರಸ್ತುತ ಮೊಬೈಲ್, ವಾಟ್ಸಪ್,ಇಮೇಲ್, ಫೇಸ್ ಬುಕ್ ಗಳ ಅಬ್ಬರದಲ್ಲಿ ಓದುವ ಬರೆಯುವ ಹವ್ಯಾಸವನ್ನು ಮರೆತಂತಿದೆ.ಆಧುನಿಕ ತಂತ್ರಜ್ಞಾನಗಳಿಂದ ಅಂಚೆ ಇಲಾಖೆಯು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತದೆಯೋ ಎಂಬ ಭೀತಿ ಎಲ್ಲೆಡೆ ಹಬ್ಬಿತ್ತು.ಆದರೆ ಅದು ಹುಸಿಯಾಗಿದೆ.
ಕೇವಲ 50 ರೂ.ಗಳಿಗೆ ಉಳಿತಾಯ ಖಾತೆ , ಅಟಲ್ ಪಿಂಚಣಿ ಯೋಜನೆ, ಸಂಧ್ಯಾ ಸುರಕ್ಷ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ಪಾಸ್ ಪೋರ್ಟ್ ಸೇವಾ ಕೇಂದ್ರಗಳು… ಹೀಗೆ ಹಲವಾರು ಯೋಜನೆಗಳು ಅಂಚೆ ಇಲಾಖೆಯ ಮುಖಾಂತರ ಆಗುತ್ತಿವೆ.ಆಧಾರ್ ಸೇವೆ ಇಲ್ಲಿ ಅತ್ಯಂತ ಸಮರ್ಪಕವಾಗಿ ನಡೆಯುತ್ತಿದೆ. ಒಟ್ಟಿನಲ್ಲಿ ಅಂಚೆ ಇಲಾಖೆ ಇಂದಿಗೂ ತನ್ನದೇ ಆದ ಛಾಪನ್ನು ಬಿಂಬಿಸಿಕೊಂಡು ದೃಢವಾಗಿ ಬೆಳೆಯುತ್ತಿದೆ.
ಮಾಲತಿ ವಸಂತರಾಜ್








































































