ಟಾರ್ಗೆಟ್ ರೇಟಿಂಗ್ ಪಾಯಿಂಟ್ ಎನ್ನುವುದು ಮಾರ್ಕೆಟಿಂಗ್ ಮತ್ತು ಜಾಹೀರಾತಿನಲ್ಲಿ ಬಳಸುವ ಮೆಟ್ರಿಕ್ ಆಗಿದ್ದು, ಸಂವಹನ ಮಾಧ್ಯಮದ ಮೂಲಕ ಪ್ರಚಾರ ಅಥವಾ ಜಾಹೀರಾತಿನಿಂದ ತಲುಪಿದ ಗುರಿ ಪ್ರೇಕ್ಷಕರ ಶೇಕಡಾವಾರು ಪ್ರಮಾಣವನ್ನು ಸೂಚಿಸುತ್ತದೆ. ದೂರದರ್ಶನದ ನಿರ್ದಿಷ್ಟ ಸಂದರ್ಭದಲ್ಲಿ, ಅನಿಸಿಕೆಗಳನ್ನು ಅಳೆಯಲು ಕೆಲವು ಸಾವಿರ ವೀಕ್ಷಕರ ಮನೆಗಳಲ್ಲಿ ಟಿವಿ ಸೆಟ್‌ಗೆ ಸಾಧನವನ್ನು ಜೋಡಿಸಲಾಗಿದೆ.
ಟಿವಿಗೆ ಮೂರ್ಖರ ಪೆಟ್ಟಿಗೆ ಎಂಬ ಕುಖ್ಯಾತಿ ಒಂದು ಕಾಲದಲ್ಲಿ ಇತ್ತು. ಟಿವಿಯಲ್ಲಿ ಜ್ಞಾನವರ್ಧಕ,ಕಲೆ ಸಂಸ್ಕೃತಿಯನ್ನು ಪರಿಚಯಿಸುವಂತಹ ಕಾರ್ಯಕ್ರಮಗಳು ಬಿತ್ತರಗೊಳ್ಳಲಾರಂಭಿಸಿದ ಬಳಿಕ ಜನ ಟಿವಿಯನ್ನು ಮೂರ್ಖರ ಪೆಟ್ಟಿಗೆ ಎಂಬುದಾಗಿ ಕರೆಯುವುದನ್ನು ಮರೆಯತೊಡಗಿದರು.ಆದರೆ ಈ ಚಾನೆಲ್ ಗಳು ಮಾತ್ರ ಜನರನ್ನು ಮೂರ್ಖರನ್ನಾಗಿಸುವ ತಮ್ಮ ಹಳೆ ಚಾಳಿಯನ್ನು ಬಿಟ್ಟಿಲ್ಲ.
ಇಂದು ಚಾನೆಲ್ ಗಳ ಸಂಖ್ಯೆ ಬೇಕಾದಷ್ಟಿವೆ. ಚಾನೆಲ್ ಗಳಿಗೆ ಟಿಆರ್ ಪಿ (ವೀಕ್ಷಕರ ಸಂಖ್ಯೆ)ಯೇ ಜೀವಸತ್ವ. ಆದ್ದರಿಂದ ಚಾನೆಲ್ ಗಳಿಗೆ ಟಿಆರ್ ಪಿ ಹೆಚ್ಚಿಸುವುದು ಬಹುಮುಖ್ಯವಾಗಿದೆ.ಟಿಆರ್ ಪಿ ಇಲ್ಲದೆ ಚಾನೆಲ್ ಗಳು ಬದುಕುವುದೇ ಅಸಾಧ್ಯ.

ಲಾಕ್ ಡೌನ್ ಸಮಯದಲ್ಲಿ ಮರುಪ್ರಸಾರವಾದ ರಾಮಾನಂದ ಸಾಗರ್ ಅವರ ರಾಮಾಯಣ ಟಿಆರ್ ಪಿಯಲ್ಲಿ ದಾಖಲೆಯನ್ನು ಮಾಡಿತ್ತು.ರಾಮಾಯಣ ಮಹಾಭಾರತದ ಬಳಿಕ ಏಕ್ತಾ ಕಪೂರ್ ಅವರ ” ಕ್ಯೋಂಕಿ ಸಾಸ್ ಭಿ ಕಭೀ ಬಹೂ ಥೀ” ಟಿಆರ್ ಪಿ ಬಲದಿಂದ ಐದಾರು ವರ್ಷಕ್ಕೂ ಹೆಚ್ಚು ಕಾಲ ಅತ್ತೆ ಸೊಸೆಯರ ಕಣ್ಣೀರು ಹರಿಸಿದ್ದು ಈಗ ಇತಿಹಾಸ.
ಬಳಿಕ ಬಂತು ” ಕೌನ್ ಬನೇಗಾ ಕರೋಡ್ ಪತಿ”.ಇದು ಟಿ ಆರ್ ಪಿ ಗೆ ಹೊಸ ಭಾಷ್ಯವನ್ನೇ ಬರೆಯಿತು.ಇದರ ಹಾದಿಯಲ್ಲಿ ಅನೇಕ ಗೇಮ್ ಶೋ ಗಳು ಬಂದರೂ ಕರೋಡ್ ಪತಿಯ ಎತ್ತರಕ್ಕೆ ಏರಲಿಲ್ಲ. ಕೊರೊನಾ ಚಿಕಿತ್ಸೆಯ ಬಳಿಕ ಮತ್ತೆ ಅಮಿತಾಭ್ “ಕೌನ್ ಬನೇಗಾ….” ದಲ್ಲಿ ಏಳು ಕೋಟಿ ಹಿಡಿದುಕೊಂಡು ಬಂದಿದ್ದಾರೆ.ಆ ಮೂಲಕ ಅವರೂ ಮಿಲಿಯಪತಿ ಆಗುತ್ತಿರುವುದಂತೂ ಸತ್ಯ. ಆ ಬಳಿಕ ರಿಯಾಲಿಟಿ ಶೋ ಗಳ ಹಾವಳಿ ಆರಂಭವಾಯಿತು.ಗಾಯನ, ಡಾನ್ಸ್, ಹಾಸ್ಯ ಇನ್ನಿತರ ರಿಯಾಲಿಟಿ ಸರಣಿಗಳು ಇನ್ನಿಲ್ಲದಂತೆ ಕಿರುತೆರೆ ಪ್ರೇಕ್ಷಕರನ್ನು ಹುಚ್ಚುಗಟ್ಟಿಸಿದವು.
ಪವಿತ್ರವಾದ ವಿವಾಹ ಕಾರ್ಯಕ್ರಮವನ್ನು ಅಣಕವಾಡಲೋ ಎಂಬಂತೆ ಬಂದ ರಿಯಾಲಿಟಿ ಶೋ ” ರಾಖಿ ಕಾ ಸ್ವಯಂವರ್ ” ಜನ ರಿಯಾಲಿಟಿ ಶೋಗಳ ಮೇಲೆ ಇಟ್ಟಿದ್ದಂತಹ ವಿಶ್ವಾಸವನ್ನೇ ನಾಶ ಮಾಡಿತ್ತು.
ರಾಖಿಯ ಸ್ವಯಂವರ ನಡೆಸಿ ರಾತೋರಾತ್ರಿ ಟಿಆರ್ ಪಿ ಏರಿಸಿ ಸುದ್ದಿಗೆ ಬಂದ ಚಾನೆಲ್ ಮತ್ತೆ ರಾಖಿಗೆ ಶರಣಾಗಿ ” ರಾಖಿ ಕಾ ಇನ್ಸಾಫ್ ” ಎಂಬ ನ್ಯಾಯ ವ್ಯವಸ್ಥೆಯನ್ನು ಅಣಕಿಸುವಂತಹ ಕಾರ್ಯಕ್ರಮವನ್ನು ಆರಂಭಿಸಿತು.ರಾಖಿ ಎಂದಾಕ್ಷಣ ಅಲ್ಲಿ ಅಸಂಬದ್ಧತೆ, ಅಸಂಸ್ಕೃತ ಭಾಷೆ,ಒರಟುತನ ಸಾಮಾನ್ಯವಾಗಿ ಬಿಟ್ಟಿದೆ.ಹಾಗಿರುವಾಗ ಆಕೆಯ ಈ ಕಾರ್ಯಕ್ರಮ ವೀಕ್ಷಿಸುವುದೇ ತಪ್ಪು ಎಂಬ ಭಾವನೆ ಮೂಡಿತ್ತು ಆಗ.
ಏಳಿಂಜೆ ನಾಗೇಶ್,ಮುಂಬಯಿ








































































