ಕಾರ್ಕಳ, ಅ. 6: ಆಂಧ್ರ ಪ್ರದೇಶದ ಮುಖ್ಯಮಂತ್ರಿ ಪರಿಹಾರ ನಿಧಿಗೆ 117 ಕೋ.ರೂ.ವಂಚಿಸಲು ಯತ್ನಿಸಿದ ಕಾಂತಾವರ ಮತ್ತು ಮೂಡುಬಿದಿರೆಯ ಇಬ್ಬರು ಸೇರಿ ದಕ್ಷಿಣ ಕನ್ನಡದ ಆರು ಮಂದಿಯನ್ನು ಆಂಧ್ರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
ಆಂಧ್ರದ ಎಸಿಬಿ ಪೊಲೀಸರ ತಂಡ ದಕ್ಷಿಣ ಕನ್ನಡ ಜಿಲ್ಲೆಗೆ ಬಂದು ಆರು ಮಂದಿಯನ್ನು ಬಂಧಿಸಿದೆ. ಮೂಡಬಿದಿರೆ ನಿವಾಸಿಗಳಾದ ಯೋಗೀಶ್ ಆಚಾರ್ಯ (40), ಉದಯ ಶೆಟ್ಟಿ ಕಾಂತಾವರ ( 35), ಮಂಗಳೂರಿನ ಬ್ರಿಜೆಶ್ ರೈ(35) ಬೆಳ್ತಂಗಡಿಯ ಗಂಗಾಧರ ಸುವರ್ಣ (45) ಸೇರಿದಂತೆ ಆರು ಮಂದಿಯನ್ನು ಬಂಧಿಸಿ ಕರೆದೊಯ್ದಿದ್ದಾರೆ.
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 117 ಕೋ. ರೂ. ಎಗರಿಸಲು ಇವರು ಸಂಚು ಮಾಡಿದ್ದರು. ಈ ವಂಚನೆಯ ಬಗ್ಗೆ ಆಂಧ್ರದ ಕಂದಾಯ ಇಲಾಖೆಯ ಸಹಾಯಕ ಕಾರ್ಯದರ್ಶಿ ಪಿ.ಮುರಳೀಕೃಷ್ಣ ರಾವ್ ನೀಡಿದ ದೂರಿನ ಆಧಾರ ಮೇರೆಗೆ ಸೆ. 21ರಂದು ಆಂಧ್ರ ಪ್ರದೇಶದ ತುಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಂಧ್ರ ಪ್ರದೇಶ ಸರ್ಕಾರ, ಇದರ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ನಗರ ಭ್ರಷ್ಟಾಚಾರ ಪತ್ತೆ ದಳ (ಎಸಿಬಿ)ಕ್ಕೆ ಆದೇಶಿಸಿತ್ತು. ಅದರಂತೆ ತನಿಖೆ ನಡೆಸಿದ ಎಸಿಬಿ, ದಕ್ಷಿಣ ಕನ್ನಡ ಜಿಲ್ಲೆಗೆ ಬಂದು ಆರು ಮಂದಿಯನ್ನು ಬಂಧಿಸಿ ಕರೆದೊಯ್ದಿದೆ. ಆಂದ್ರಪ್ರದೇಶದ ಪೊಲೀಸರ ಕಾರ್ಯಾಚರಣೆಗೆ ಮಂಗಳೂರು ಪೊಲೀಸರು ಸಹಕರಿಸಿದ್ದರು.






































































