ಬೆಂಗಳೂರು,ಅ. 5: ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನಿವಾಸದ ಮೇಲೆ ಸಿಬಿಐ ಇಂದು ಮುಂಜಾನೆ ನಡೆಸಿರುವ ದಾಳಿಗೆ ಕಾಂಗ್ರೆಸ್ ಕೆಂಡಾಮಂಡಲವಾಗಿದೆ.
ಇದು ಬಿಜೆಪಿಯ ರಾಜಕೀಯ ಷಡ್ಯಂತ್ರ, ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮಾಡುತ್ತಿರುವ ಕುತಂತ್ರ ಎಂದು ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಇದು ನರೇಂದ್ರ ಮೋದಿ ಸರ್ಕಾರ ನಡೆಸಿರುವ ರಾಜಕೀಯ ದುಷ್ಟತನದ ಪರಮಾವಧಿಯಾಗಿದ್ದು, ಕಾಂಗ್ರೆಸ್ ಪಕ್ಷವನ್ನು ರಾಜಕೀಯವಾಗಿ ಎದುರಿಸಲಿಕ್ಕಾಗದ ಬಿಜೆಪಿ ನಾಯಕರ ದಿವಾಳಿತನವನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಪ ಚುನಾವಣೆಯ ಸಂದರ್ಭದಲ್ಲಿ ಸಿಬಿಐ ದಾಳಿ ಮಾಡಿಸಿರುವುದು ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಈ ಹೊತ್ತಿನಲ್ಲಿ ನಮ್ಮ ಸ್ಥೈರ್ಯವನ್ನು ಕುಗ್ಗಿಸಲು, ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.
ಡಿ. ಕೆ. ಶಿವಕುಮಾರ್ ಮತ್ತು ಅವರ ಸೋದರ ಸಂಸದ ಡಿ. ಕೆ. ಸುರೇಶ್ ಅವರಿಗೆ ಸೋಮವಾರ ಬೆಳ್ಳಂಬೆಳಗ್ಗೆ ಸಿಬಿಐ ಶಾಕ್ ನೀಡಿದೆ.60ಕ್ಕೂ ಹೆಚ್ಚು ಸಿಬಿಐ ಅಧಿಕಾರಿಗಳು ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ. ಕೆ. ಶಿವಕುಮಾರ್ ನಿವಾಸ ಸೇರಿದಂತೆ ಅವರ ಊರು ರಾಮನಗರದ ದೊಡ್ಡ ಆಲದಹಳ್ಳಿಯ ಮನೆ ಸೇರಿ 15ಕ್ಕೂ ಹೆಚ್ಚು ಕಡೆಗಳಲ್ಲಿ ಏಕಾಏಕಿ ದಾಳಿ ನಡೆಸಿದ್ದಾರೆ.
ಇಂದು ಬೆಳಗ್ಗೆ 6 ಗಂಟೆಯಿಂದ ನಿರಂತರವಾಗಿ ದಾಳಿ ನಡೆಸುತ್ತಿದ್ದು ವ್ಯವಸ್ಥಿತವಾಗಿ ಸಿಬಿಐ ಅಧಿಕಾರಿಗಳು ಮಾಹಿತಿ ಕಲೆ ಹಾಕಿ ದಾಳಿ ನಡೆಸಿದ್ದಾರೆ. ಸದ್ಯ ಡಿ. ಕೆ. ಶಿವಕುಮಾರ್ ಅವರನ್ನು ಒಬ್ಬರನ್ನೇ ಕೂರಿಸಿಕೊಂಡು ನಿರಂತರವಾಗಿ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿದೆ. ಸಿಬಿಐ ಎಸ್ಪಿ ಥಾಮ್ಸನ್ ಜೋಸ್ ನೇತೃತ್ವದಲ್ಲಿ ದಾಳಿ ನಡೆದಿದೆ. ಅವರ ಕುಟುಂಬಸ್ಥರನ್ನೆಲ್ಲಾ ಮನೆ ಹತ್ತಿರದಲ್ಲಿರುವ ಕಚೇರಿಗೆ ಸ್ಥಳಾಂತರ ಮಾಡಲಾಗಿದೆ.
ದಿಲ್ಲಿಯಲ್ಲಿ ಸಂಸದ ಡಿ. ಕೆ. ಸುರೇಶ್ ವಾಸ್ತವ್ಯ ಹೂಡುವ ಕಾವೇರಿ ಅಪಾರ್ಟ್ ಮೆಂಟ್ ಮೇಲೆ, ಮುಂಬಯಿಯಲ್ಲಿರುವ ನಿವಾಸಗಳ ಮೇಲೆ ಸಹ ದಾಳಿ ನಡೆಸಲಾಗಿದೆ. ಸಾಕಷ್ಟು ಪೂರ್ವ ತಯಾರಿ ನಡೆಸಿಯೇ ದಾಳಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ನಿನ್ನೆಯೇ ಸರ್ಚ್ ವಾರಂಟ್ ಬಂದಿತ್ತು.
ಡಿಕೆ ಸೋದರರ ನಿವಾಸಗಳ ಮೇಲೆ ದಾಳಿ ನಡೆಯುತ್ತಿದ್ದಂತೆ ಅವರ ಬೆಂಬಲಿಗರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಜಾರಿ ನಿರ್ದೇಶನಾಲಯ ಡಿ. ಕೆ. ಶಿವಕುಮಾರ್ ನಿವಾಸದ ಮೇಲೆ ದಾಳಿ ನಡೆಸಿ ಅವರು ಜೈಲಿಗೆ ಕೂಡ ಹೋಗಿ ಬಂದಿದ್ದರು.













































































