ಕಾರ್ಕಳ:ದೇಶಕ್ಕೆ ಕೊರೊನಾ ವೈರಸ್ ಬಂದು ಎಂಟು ತಿಂಗಳಾಯಿತು. ಒಂದಂಕಿಯಿಂದ ಎರಡಂಕಿಗೆ, ಎರಡಂಕಿಯಿಂದ ಮೂರಂಕಿಗೆ…ಎಂದು ಹೆಚ್ಚುತ್ತಾ ಹೋದ ಕೊರೊನಾ ಸೋಂಕು ಈಗ 65 ಲಕ್ಷ ದಾಟಿ ಮುಂದುವರಿದಿದೆ.ಒಂದು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಕೊರೊನಾ ಬಲಿತೆಗೆದುಕೊಂಡಿದೆ.
ಕೊರೊನಾ ಹಾವಳಿ ಪ್ರಾರಂಭವಾದಂದಿನಿಂದಲೇ ಯಾವೆಲ್ಲ ಮುಂಜಾಗರೂಕತಾ ಕ್ರಮಗಳನ್ನು ವಹಿಸಬೇಕೆಂದು ವೈದ್ಯರಿಂದ ಹಿಡಿದು ಎಲ್ಲರೂ ಪುಂಖಾನುಪುಂಖವಾಗಿ ಸಲಹೆಗಳನ್ನು ನೀಡುತ್ತಿದ್ದಾರೆ. ಆದರೆ ದುರಂತವೆಂದರೆ ಜನರಲ್ಲಿ ಇನ್ನೂ ಕೊರೊನಾ ವಿರುದ್ಧ ಜಾಗೃತಿ ಮೂಡಿಲ್ಲ ಎನ್ನುವುದು.
ಕೊರೊನಾ ಸೋಂಕಿಗೆ ತುತ್ತಾಗುವುದನ್ನು ತಡೆಯಲು ಸಾರ್ವಜನಿಕ ಸ್ಥಳಗಳಿಗೆ ಹೋಗುವಾಗ ಮಾಸ್ಕ್ ಧರಿಸಿ, ಕೈಗಳನ್ನು ಸ್ಯಾನಿಟೈಸರ್ ಹಾಕಿ ಸ್ವಚ್ಛಗೊಳಿಸಿ ಎನ್ನುವುದು ಆರಂಭದಿಂದಲೂ ನೀಡುತ್ತಿರುವ ಸಲಹೆ. ಅದರಲ್ಲೂ ಮಾಸ್ಕ್ ಧರಿಸಲೇ ಬೇಕು. ಮಾಸ್ಕ್‌ನಲ್ಲಿ ನಾನಾ ತರದವುಗಳಿವೆ. ಎನ್ 95ನಂಥ ಮಾಸ್ಕ್ ದುಬಾರಿ ನಿಜ. ಆದರೆ ಈ ಮಾಸ್ಕ್ ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರಿಗೆ ಅಗತ್ಯವಿದೆ. ಸಾರ್ವಜನಿಕ ಸ್ಥಳಗಳಿಗೆ ಹೋಗುವಾಗ ಹತ್ತಿಬಟ್ಟೆಯಿಂದ ಹೊಲಿದ ಸಾಮಾನ್ಯ ಮಾಸ್ಕ್ ಸಾಕು. ಇದರ ಬೆಲೆ ಹೆಚ್ಚೆಂದರೆ 50-60 ರೂ. ಆದರೆ ಈ ಮಾಸ್ಕ್ ಧರಿಸಲು ಕೂಡ ಜನರು ಅಸಡ್ಡೆ ಮಾಡುತ್ತಿದ್ದಾರೆ.ಈ ಕಾರಣಕ್ಕೆ ಕರ್ನಾಟಕವೂ ಸೇರಿ ಕೆಲವು ರಾಜ್ಯಗಳು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿವೆ. ಕರ್ನಾಟಕದಲ್ಲಿ ದಂಡದ ಮೊತ್ತವನ್ನೂ 1.000ಕ್ಕೇರಿಸಲಾಗಿದೆ. ಆದರೂ ಇನ್ನೂ ಅನೇಕ ಮಂದಿ ಮಾಸ್ಕ್ ಧರಿಸುವ ವಿಚಾರದಲ್ಲಿ ಬೇಜವಾಬ್ದಾರಿ ತೋರಿಸುತ್ತಿದ್ದಾರೆ. ಪೊಲೀಸರಿಗೆ ಈಗ ಮಾಸ್ಕ್ ಧರಿಸದವರನ್ನು ಹಿಡಿದು ದಂಡ ಹಾಕುವುದೇ ಕೆಲಸವಾಗಿ ಹೋಗಿದೆ. ನಿಮ್ಮದೇ ಆರೋಗ್ಯವನ್ನು ಕಾಪಾಡಿಕೊಳ್ಳಲು ಮಾಸ್ಕ್ ಧರಿಸಿ ಎಂದರೂ ಕೇಳದಿರುವಷ್ಟು ಅಸಡ್ಡೆ ಏಕೆ?

ಕಳೆದ ತಿಂಗಳು ವೈದ್ಯಕೀಯ ವಿದ್ಯಾರ್ಥಿಗಳ ತಂಡವೊಂದು ಮಾಸ್ಕ್ ಧರಿಸುವುದನ್ನು ಜನರು ಎಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ತಿಳಿದುಕೊಳ್ಳಲು ಸಮೀಕ್ಷೆಯೊಂದನ್ನು ನಡೆಸಿತು. ಅವರಿಗೆ ಸಿಕ್ಕಿದ ಫಲಿತಾಂಶ ಮಾತ್ರ ಆಘಾತಕಾರಿಯಾದುದು. ಮಾರುಕಟ್ಟೆಯಂಥ ಹೆಚ್ಚು ಜನರು ಸೇರುವ ಸ್ಥಳಗಳಲ್ಲಿ ಪ್ರತಿ ನಾಲ್ವರಲ್ಲಿ ಒಬ್ಬರು ಮಾಸ್ಕ್ ಧರಿಸಿರಲಿಲ್ಲ. ಜನರು ಮಾತ್ರವಲ್ಲ ಸ್ವತಃ ವ್ಯಾಪಾರಿಗಳೆ ಮಾಸ್ಕ್ ಹಾಗೂ ಇತರ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದರು.
19 ಪ್ರಮುಖ ನಗರಗಳಲ್ಲಿ ನಡೆಸಿದ ಸಮೀಕ್ಷೆಯ ಫಲಿತಾಂಶ ಬಹುತೇಕ ಒಂದೇ ರೀತಿಯಾಗಿತ್ತು.
ದಿಲ್ಲಿಯಲ್ಲಿ 4,500 ಮಂದಿಯನ್ನು ಆರಿಸಿಕೊಂಡು ಗಮನಿಸಿದಾಗ 2,528 ಮಂದಿ ಮಾಸ್ಕ್ ಧರಿಸದೆ ಹಾಗೂ ಕೊರೊನಾ ನಿಯಮಗಳನ್ನು ಪಾಲಿಸದೆ ಬಿಂದಾಸ್ ಆಗಿ ಓಡಾಡುತ್ತಿರುವುದು ಕಂಡು ಬಂತು.
ಅಸರ್ಪಕವಾಗಿ ಧರಿಸುವುದು
ಕೆಲವರು ದಂಡಕ್ಕೆ ಹೆದರಿ ಮಾಸ್ಕ್ ಹಾಕಿಕೊಳ್ಳುತ್ತಾರೆ. ಆದರೆ ಅದನ್ನು ಸಮರ್ಪಕವಾಗಿ ಧರಿಸುವುದಿಲ್ಲ. ಕೆಲವರ ಮಾಸ್ಕ್ ಸದಾ ಗಲ್ಲದ ಮೇಲೆಯೇ ಇರುತ್ತದೆ. ಕೆಲವರು ಕುತ್ತಿಗೆ ತನಕ ಜಾರಿಸಿಕೊಂಡಿರುತ್ತಾರೆ. ಪೊಲೀಸರ ಕಣ್ಣಿಗೆ ಮಣ್ಣೆರಚಲು ಮಾತ್ರ ಮಾಸ್ಕ್ ಧರಿಸುವವರು ಇದ್ದಾರೆ. ಅವರಿಗೆ ಅವರದ್ದೇ ಆರೋಗ್ಯದ ಬಗ್ಗೆ ಕಾಳಜಿಯಿಲ್ಲ!
ಮಾಸ್ಕ್ ಏಕೆ ಧರಿಸಬೇಕು?
ಮಾಸ್ಕ್ ಏಕೆ ಧರಿಸಬೇಕು ಎನ್ನುವುದನ್ನು ಪದೇಪದೆ ಹೇಳುವ ಅಗತ್ಯವೇ ಇಲ್ಲ. ಸೀನುವಾಗ, ಕೆಮ್ಮುವಾಗ, ಅಥವಾ ಮಾತನಾಡುವಾಗ ಸೋಂಕಿತ ವ್ಯಕ್ತಿಯಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡುವ ಕೊರೊನಾ ವೈರಸ್ ಅನ್ನು ತಡೆಯಲು ಮಾಸ್ಕ್ ಧರಿಸುವುದೇ ಪರಿಣಾಮಕಾರಿಯಾದ ಮತ್ತು ಸುಲಭವಾದ ವಿಧಾನ ಎನ್ನುವುದು ಜಗತ್ತಿನ ಎಲ್ಲ ರಾಷ್ಟ್ರಗಳು ಹೇಳುತ್ತಿವೆ. ಯಾವುದೇ ಗುಣಲಕ್ಷಣವನ್ನು ತೋರಿಸದೆಯೇ ಕೊರೊನಾ ವೈರಸ್ ನಮ್ಮ ದೇಹವನ್ನು ಸೇರಿಕೊಳ್ಳಬಹುದು ಎನ್ನುವುದು ಈಗಾಗಲೇ ವೈದ್ಯಕೀಯವಾಗಿ ನಿರೂಪಿತವಾಗಿದೆ. ಹೀಗಿರುವಾಗ ಯಾರು ಕೊರೊನಾ ಸೋಂಕಿತ ವ್ಯಕ್ತಿ ಎಂದು ತಿಳಿಯುವುದು ಸುಲಭವಲ್ಲ. ಆರೋಗ್ಯವಂತ ವ್ಯಕ್ತಿಗೆ ಕೊರೊನಾ ಸೋಂಕು ಬಂದು ಹೋದದ್ದು ಗೊತ್ತಾಲಿಕ್ಕಿಲ್ಲ. ಆದರೆ ಆ ವ್ಯಕ್ತಿಯಿಂದ ಅಸ್ತಮಾ ಅಥವಾ ಇನ್ನಿತರ ಆರೋಗ್ಯ ಸಮಸ್ಯೆಗಳಿರುವ ವ್ಯಕ್ತಿಗೆ ಅರಿವಿಲ್ಲದೆ ಸೋಂಕು ಹರಡುವ ಅಪಾಯ ಇದೆ. ಹೀಗಾಗಿ ಸಾರ್ವಜನಿಕ ಸ್ಥಳಗಳಿಗೆ ಹೋಗುವಾಗ ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಅಗತ್ಯ ಮಾತ್ರ ಅಲ್ಲ ಅನಿವಾರ್ಯ ಕೂಡ.
ಅಂದ ಹಾಗೇ ಪೊಲೀಸರು ಮಾಸ್ಕ್ ಧರಿಸದವರಿಂದ ದುಬಾರಿ ದಂಡ ವಸೂಲು ಮಾಡುತ್ತಿರುವ ಕುರಿತು ಬಂದ ವಾಟ್ಸಪ್ ಸಂದೇಶ ಹೀಗಿದೆ. 1,000 ದಂಡ ವಸೂಲು ಮಾಡುವ ಬದಲು 50ರೂ. ಮಾಸ್ಕನ್ನೇ 100ರೂ.ಗೆ ಕೊಡಿ. ಮತ್ತೂ ಇದೇ ತಪ್ಪನ್ನು ಮಾಡಿದರೆ ದಂಡ ವಸೂಲು ಮಾಡಿ. ಕೊರೊನಾ ಕಾಲದಲ್ಲಿ ಎಲ್ಲರ ಆರ್ಥಿಕ ಪರಿಸ್ಥಿತಿಯೂ ಹದಗೆಟ್ಟಿರುವಾಗ ದುಬಾರಿ ದಂಡ ವಸೂಲು ಮಾಡುವ ಬದಲು ಈ ರೀತಿ ಮಾಡಬಹುದಲ್ಲ?
ಅದೇ ರೀತಿ ಇಲ್ಲಿ ಕಾಣುವ ಚಿತ್ರ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ತುಸು ಅಸಭ್ಯವಾಗಿರುವಂತೆ ಕಂಡರೂ ಅದು ನೀಡುವ ಸಂದೇಶ ಮಾತ್ರ ದೊಡ್ಡದು. ಇನ್ನಾದರೂ ಎಚ್ಚೆತ್ತುಕೊಳ್ಳಿ. ನಿಮ್ಮ ಆರೋಗ್ಯದ ರಕ್ಷಣೆ ನಿಮ್ಮದೇ ಹೊಣೆ ಎಂಬುದನ್ನು ಅರಿತುಕೊಳ್ಳಿ.








































































